ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಕ್ಕೆ ಬಿದ್ದ ‘ಪಾಲಿಸಿದರೆ ಪಾಲು’: ವೆಚ್ಚಕ್ಕುಂಟು ಲೆಕ್ಕಕ್ಕಿಲ್ಲ

ಸ್ಥಗಿತಗೊಂಡ ಅರಣ್ಯ ಇಲಾಖೆ ಕಾರ್ಯಕ್ರಮ; ವಿದೇಶಿ ನೆರವಿನ ಯೋಜನೆಗೆ ಬಾಲಗ್ರಹ
Last Updated 1 ಜೂನ್ 2019, 20:09 IST
ಅಕ್ಷರ ಗಾತ್ರ

ಗಿಡ ನೆಟ್ಟು ಪೋಷಿಸಲು ಅರಣ್ಯ ಇಲಾಖೆ ದಶಕಗಳಿಂದ ವೆಚ್ಚ ಮಾಡಿರುವ ಹಣವನ್ನು ಗಮನಿಸಿದರೆ ಕರ್ನಾಟಕ ಗೊಂಡಾರಣ್ಯದಿಂದ ಆವೃತವಾಗಬೇಕಿತ್ತು. ಆದರೆ ಆಗಿರುವುದಾದರೂ ಏನು ? ವರ್ಷದಿಂದ ವರ್ಷಕ್ಕೆ ಇರುವ ಅರಣ್ಯ ಪ್ರದೇಶವೂ ಕ್ಷೀಣಿಸುತ್ತಿದೆ. ಜೂನ್ 5 ವಿಶ್ವ ಪರಿಸರ ದಿನವನ್ನು ಆಚರಿಸುವ ಸಂದರ್ಭದಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ ಅರಣ್ಯ ಇಲಾಖೆಯ ಯೋಜನೆ ಬಗ್ಗೆ ಒಳನೋಟಬೆಳಕು ಚೆಲ್ಲಿದೆ...

**

ಚಾಮರಾಜನಗರ: ಅರಣ್ಯ ರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಇರಬೇಕು ಎಂಬ ಉದ್ದೇಶ ದಿಂದ ಅರಣ್ಯ ಇಲಾಖೆ ಜಾರಿಗೆ ತಂದ ‘ಪಾಲಿಸಿದರೆ ಪಾಲು’ ಯೋಜನೆ ಹಳ್ಳ ಹಿಡಿದಿದೆ.

ಇಲಾಖೆಯ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬದ್ಧತೆ ಕೊರತೆಯಿಂದ ಅಭೂತಪೂರ್ವ ಯಶಸ್ಸು ಕಾಣಬೇಕಿದ್ದ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯೂ ಆಗದೆ, ಅಧಿಕೃತವಾಗಿ ಸ್ಥಗಿತಗೊಳ್ಳದೇ ತ್ರಿಶಂಕು ಸ್ಥಿತಿಯಲ್ಲಿದೆ.

ಖಾಸಗಿ ಜಮೀನು, ಕಾಯ್ದಿಟ್ಟ ಅರಣ್ಯ ಪ್ರದೇಶ, ಬಂಜರು ಭೂಮಿ, ಕಾಡಂಚಿನ ಪ್ರದೇಶಗಳು, ಗೋಮಾಳ, ರಸ್ತೆ ಬದಿ, ಕೆರೆ–ಕಾಲುವೆಗಳ ದಂಡೆ... ಹೀಗೆ ಅವಕಾಶ ಇರುವ ಸರ್ಕಾರಿ ಜಾಗಗಳಲ್ಲಿ ಜನರು, ಸಮುದಾಯ ಮತ್ತು ಸಂಸ್ಥೆಗಳ ಸಹಕಾರ ಪಡೆದು ಕಾಡು ಬೆಳೆಸುವುದು ಹಾಗೂ ಇರುವ ಕಾಡನ್ನು ರಕ್ಷಿಸುವುದು ‘ಪಾಲಿಸಿದರೆ ಪಾಲು’ ಯೋಜನೆ ಉದ್ದೇಶ. ಹೀಗೆ ಬೆಳೆಸಿದ ಅರಣ್ಯದ ಉತ್ಪನ್ನಗಳ ಆದಾಯವನ್ನು ಸರ್ಕಾರ ಹಾಗೂ ಜನ, ಸಮುದಾಯಗಳು ಹಂಚಿಕೊಳ್ಳುವುದು ಯೋಜನೆಯ ತಿರುಳು.

ಈ ಯೋಜನೆ 2002ರಲ್ಲಿ ಜಾರಿಗೆ ಬಂದಿದ್ದು, ಇದರ ಅಡಿಯಲ್ಲಿ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ, ಮರ ಪಟ್ಟಾ ಹಾಗೂ ಖಾಸಗಿ ಮತ್ತು ಸರ್ಕಾರಿ ಜಮೀನಿನಲ್ಲಿ ಗಿಡ ಬೆಳೆಸುವ ಗುರಿ ಹಾಕಿಕೊಳ್ಳಲಾಗಿತ್ತು.

ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ: ಗ್ರಾಮೀಣ ಪ್ರದೇಶದಲ್ಲಿ ಅರಣ್ಯ ರಕ್ಷಣೆ, ಅಭಿವೃದ್ಧಿ ಮತ್ತು ನಿರ್ವಹಣೆಗೆ ಗ್ರಾಮ ಅರಣ್ಯ ಸಮಿತಿ ರಚಿಸಲು ಅವಕಾಶ ನೀಡಲಾಗಿತ್ತು. 15 ಸದಸ್ಯರ ಸಮಿತಿಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. ಈ ಸಮಿತಿಗಳು ಕೈಗೊಳ್ಳುವ ಅಭಿವೃದ್ಧಿ ಕೆಲಸಕ್ಕೆ ಇಲಾಖೆ ಧನಸಹಾಯ ನೀಡುತ್ತದೆ. ಅರಣ್ಯ ಉತ್ಪನ್ನದಿಂದ ಬರುವ ಆದಾಯವು ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿಯ ನಡುವೆ 50:50ರಂತೆ ಹಂಚಿಕೆಯಾಗುತ್ತದೆ.

ಮರ ಪಟ್ಟಾ ಯೋಜನೆ: ಇದು ಕೂಡ ನಾಲೆ ದಂಡೆ, ಖಾಸಗಿ ಜಮೀನು, ರಸ್ತೆ ಇಕ್ಕೆಲದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ. ಖಾಸಗಿ ವ್ಯಕ್ತಿಗಳು ಮತ್ತು ಗ್ರಾಮ ಅರಣ್ಯ ಸಮಿತಿಗಳು ಗಿಡಗಳನ್ನು ನೆಟ್ಟು ಪೋಷಿಸಬಹುದು. ಗಿಡ ಬೆಳೆಸುವವರಿಗೆ ಇಲಾಖೆಯು ಮರ ಪಟ್ಟಾ (ಮಾಲೀಕತ್ವ) ನೀಡುತ್ತದೆ. ಅನುಮತಿ ಇಲ್ಲದೆ ಮರ ಕಡಿಯಲು ಅವಕಾಶ ಇಲ್ಲ. ಆದರೆ, ಹೂವು–ಹಣ್ಣು ಹಾಗೂ ಇತರ ಉತ್ಪನ್ನಗಳನ್ನು ಪಟ್ಟಾ ಹೊಂದಿರುವವರು ಉಪಯೋಗಿಸಬಹುದು. ಅಂತಿಮ ಆದಾಯ 75:25ರ ಪ್ರಮಾಣದಲ್ಲಿ ಹಂಚಿಕೆಯಾಗಬೇಕು ಎಂಬುದು ಯೋಜನೆಯ ನಿಯಮ. ವಲಯ ಅರಣ್ಯಾಧಿಕಾರಿಗೆ (ಆರ್‌ಎಫ್‌ಒ) ಪಟ್ಟಾ ದಾಖಲೆ ಕೊಡುವ ಜವಾಬ್ದಾರಿ.

ಹಣಕಾಸು ನೆರವು ಬಂದರಷ್ಟೇ ಜೀವ: ‘ಪಾಲಿಸಿದರೆ ಪಾಲು’ ಯೋಜನೆಯ ಉದ್ದೇಶ ಮತ್ತು ಗುರಿಯಂತೆ ಖಾಲಿ ಇರುವ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟಿದ್ದರೆ ಕಳೆದ 17 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಗೊಂಡಾರಣ್ಯವೇ ನಿರ್ಮಾಣವಾಗ ಬೇಕಿತ್ತು. ಆದರೆ, ರಾಜ್ಯದ ಮಲೆ ನಾಡು, ಕೋಲಾರ ಸುತ್ತಮುತ್ತಲಿನ ಭಾಗ ಸೇರಿದಂತೆ ಅಲ್ಲಲ್ಲಿ ಯೋಜನೆ ಜಾರಿಯಾಗಿದ್ದು ಬಿಟ್ಟರೆ ಬೇರೆಲ್ಲೂ ಮಾದರಿಯಾಗುವ ಕೆಲಸ ನಡೆದಿಲ್ಲ. ಆದರೆ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ವೆಚ್ಚವಾಯಿತು. ಅಧಿಕಾರಿಗಳು ಮತ್ತು ಬೇನಾಮಿ ಫಲಾನುಭವಿಗಳ ಹೆಸರಿನಲ್ಲಿ ‘ಹಂಚಿಕೆ’ ಆಗುವ ಮೂಲಕ ಯೋಜನೆ ಹೆಸರಿಗೆ ಅನ್ವರ್ಥವಾಗಿ ‘ಪಾಲಿಸಿದರೆ ಪಾಲು’ ಎಂಬಂತಾಯಿತು.

ವಿದೇಶದಿಂದ ನೆರವು ಬಂದರಷ್ಟೇ ಅರಣ್ಯ ಇಲಾಖೆಗೆ ಜೀವ ಬರುತ್ತದೆ. 2002ರಲ್ಲಿ ಈ ಯೋಜನೆ ಜಾರಿಗೂ ಕಾರಣವಾಗಿದ್ದು ಜಪಾನ್‌ ನೀಡಿದ ₹285 ಕೋಟಿ ಹಣಕಾಸಿನ ನೆರವು. ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರಾಜ್ಯದಾದ್ಯಂತ ಹೊಸ ಗ್ರಾಮ ಅರಣ್ಯ ಸಮಿತಿಗಳು ರಚನೆಯಾದವು. ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಗ್ರಾಮ ಅರಣ್ಯ ಸಮಿತಿಗಳಿವೆ. ಆದರೆ, ಸಕ್ರಿಯವಾಗಿರುವುದು ಶೇ 25ರಷ್ಟು ಮಾತ್ರ! ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗಗಳಲ್ಲಿ ‌ಗ್ರಾಮ ಅರಣ್ಯ ಸಮಿತಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಭಾಗದಲ್ಲೇ 1,000ಕ್ಕೂ ಹೆಚ್ಚು ಸಮಿತಿಗಳಿವೆ.

2015ರಲ್ಲಿಯೇ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ ಯೋಜನೆ ಸ್ಥಗಿತಗೊಂಡಿದೆ ಎಂದು ಹೇಳುತ್ತಾರೆ ಇಲಾಖೆ ಅಧಿಕಾರಿಗಳು. ವಾಸ್ತವ ಏನೆಂದರೆ, ಯೋಜನೆ ಮುಂದುವರಿಸಲು ಇಲಾಖೆಯ ಬಳಿ ದುಡ್ಡಿಲ್ಲ. ಮರ ಪಟ್ಟಾ ಯೋಜನೆಯದ್ದು ಮತ್ತೊಂದು ಕಥೆ. ಕೋಲಾರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಬಯಲು ಸೀಮೆ, ಮಲೆನಾಡಿನ ಕೆಲವು ಕಡೆ, ಮಂಡ್ಯ ಸೇರಿದಂತೆ ಬೆರಳೆಣಿಕೆ ಜಿಲ್ಲೆಗಳಲ್ಲಿ ಮಾತ್ರ ಇದು ಅನುಷ್ಠಾನ ಕಂಡಿದೆ.‌‌

‘ಇಲಾಖೆ ಅಧಿಕಾರಿಗಳು ಪಟ್ಟಾ ಕೊಡಲು ವಿಳಂಬ ಮಾಡುತ್ತಾರೆ, ನಿರ್ದಿಷ್ಟ ಅವಧಿಯ ನಂತರ ಮರ ಕಡಿಯಲು ಅನುಮತಿ ನೀಡುವುದಕ್ಕೆ ಸತಾಯಿಸುತ್ತಾರೆ’ ಎಂಬ ಆರೋಪ ಕೆಲವು ಕಡೆ ಇದೆ.‘ಜನರೇ ಯೋಜನೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಗಿಡ ಬೆಳೆಸಿ ಪೋಷಿಸುವ ತಾಳ್ಮೆ ಅವರಿಗಿಲ್ಲ. ಬೇಗ ಆದಾಯ ಬರಬೇಕು ಎಂಬುದಷ್ಟೇ ಮುಖ್ಯ. ನಿಧಾನವಾಗಿ ಬೆಳೆಯುವ ಗಿಡಗಳನ್ನು ನೆಡಲು ಮುಂದಾಗುತ್ತಿಲ್ಲ’ ಎಂಬುದು ಅರಣ್ಯ ಅಧಿಕಾರಿಗಳ ದೂರು.

ನೆಲಕಚ್ಚಲು ಕಾರಣವೇನು?: ಇಲಾಖೆಯ ಅಧಿಕಾರಿಗಳಲ್ಲಿ ಬದ್ಧತೆ ಹಾಗೂ ಅನುಭವದ ಕೊರತೆಯೇ ಯೋಜನೆ ನೆಲ ಕಚ್ಚಲು ಪ್ರಮುಖ ಕಾರಣ. ಗ್ರಾಮ ಅರಣ್ಯ ಸಮಿತಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದರಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಸಮಿತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನಿರ್ವಹಿಸುವುದು ಅವರೇ. ಈ ಸಮಿತಿಗೆ ಹೆಚ್ಚಿನ ಅಧಿಕಾರ ಇಲ್ಲ. ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಸದಸ್ಯ ಕಾರ್ಯದರ್ಶಿ ಮೇಲಧಿಕಾರಿಗೆ ಪತ್ರಬರೆದು ಅದಕ್ಕೆ ಒಪ್ಪಿಗೆ ಪಡೆಯುವುದಕ್ಕೆ ನಾಲ್ಕೈದು ತಿಂಗಳು ಆಗುತ್ತದೆ. ಸಮಿತಿಯ ಲೆಕ್ಕಪತ್ರಗಳ ಪರಿಶೀಲನೆ ಸರಿಯಾಗಿ ಆಗುತ್ತಿಲ್ಲ.

ಗ್ರಾಮದ ಜನಕ್ಕೆ ಸ್ಥಳೀಯ ಮರಗಿಡಗಳ ಬಗ್ಗೆ ಅನುಭವ ಇರುತ್ತದೆ. ಗಿಡ ರಕ್ಷಣೆ, ಪೋಷಣೆ ಬಗ್ಗೆ ಜನರು ನೀಡುವ ಸಲಹೆಯನ್ನು ಸ್ವೀಕರಿಸುವ ಹಾಗೂ ಅವರ ಮಧ್ಯೆ ನಿಂತು ಕೆಲಸ ಮಾಡುವ ಅಧಿಕಾರಿಗಳು ಬೇಕು. ಆದರೆ, ಅಂತಹವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಬದ್ಧತೆ ಹೊಂದಿರುವ ಅಧಿಕಾರಿಗಳಿಂದಾಗಿ ಮಲೆನಾಡಿನಲ್ಲಿ ಯೋಜನೆ ಯಶಸ್ಸು ಕಂಡಿದೆ. ಇಲಾಖೆಯ ಕೆಳಹಂತದ ಅಧಿಕಾರಿಗಳಿಗೆ ಅರಣ್ಯದ ಬಗ್ಗೆ ಅಪಾರ ಜ್ಞಾನ ಇದೆ. ಆದರೆ, ಅದು ಮೇಲಿನ ಹಂತಕ್ಕೆ ತಲುಪುತ್ತಿಲ್ಲ.

ಅರಣ್ಯ ಇಲಾಖೆಗೆ 1840ರಿಂದ ಅರಣ್ಯೀಕರಣದ ಅನುಭವ ಇದೆ. ಅರಣ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾದರಿ ಉದಾಹರಣೆಗಳೂ ನಮ್ಮಲ್ಲಿ ಲಭ್ಯವಿವೆ. ಈ ಅನುಭವಗಳನ್ನು, ಮಾದರಿಗಳನ್ನು ಅವಲೋಕಿಸುವ ಕೆಲಸವನ್ನು ಇಲಾಖೆ ಮಾಡುವ ಅಗತ್ಯವಿದೆ.

**
ವಿಎಫ್‌ಸಿಗಳು ಇಲಾಖೆಯ ವಿಸ್ತರಣಾ ಘಟಕಗಳಾಗಿ ಉಳಿದಿವೆ. ಅವಕ್ಕೆ ಶಕ್ತಿ ತುಂಬುವ ಕಾರ್ಯ ನಡೆದಿಲ್ಲ. ಇವುಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಇಲಾಖೆ, ಅವುಗಳನ್ನು ಸ್ವತಂತ್ರಗೊಳಿಸಿದಾಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯ.


-ಅನಂತ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ

**

ಸಹಿಗಷ್ಟೇ ಸೀಮಿತ
ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹುದ್ದೆ ಸಹಿ ಮಾಡಲಷ್ಟೇ ಸೀಮಿತ. ಚೆಕ್‌ ಡ್ಯಾಮ್‌ ನಿರ್ಮಾಣ, ಟ್ರೆಂಚ್‌ ಹೆಸರಿನಲ್ಲಿ ಅಪಾರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಮಾಹಿತಿ ಕೇಳಿದರೆ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಹುದ್ದೆ ಬದಲಾವಣೆ ಬೆದರಿಕೆ ಹಾಕುತ್ತಿದ್ದರು. ಹುಡುಕಿಕೊಂಡು ಬಂದು ಚೆಕ್‌ಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು. ಈಗ ಸಮಿತಿಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇಲ್ಲ.


-ಶಿವಕುಮಾರ್‌,ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಜವನಳ್ಳಿ, ಮಂಡ್ಯ ತಾಲ್ಲೂಕು

**
ಚಟುವಟಿಕೆ ಇದೆ

ಕಳೆದ ಐದು ವರ್ಷದಿಂದ ಗ್ರಾಮ ಅರಣ್ಯ ಸಮಿತಿ ನಡೆಯುತ್ತಿಲ್ಲ. ಆದರೆ ಸಮಿತಿ ಅಡಿ ರಚನೆಯಾದ ಸ್ವಸಹಾಯ ಸಂಘ ಈಗಲೂ ಚಟುವಟಿಕೆ ನಡೆಸುತ್ತಿದೆ. ಕುರಿ ಸಾಕಣೆಗಾಗಿ ಸಂಘಕ್ಕೆ ₹ 32 ಸಾವಿರ ಹಣ ಬಿಡುಗಡೆ ಆಗಿತ್ತು. ಆ ಹಣ ಈಗ ₹ 5.5 ಲಕ್ಷಕ್ಕೆ ಹೆಚ್ಚಳವಾಗಿದೆ. ಪ್ರತಿ ತಿಂಗಳು ಸಭೆ ನಡೆಸುತ್ತೇವೆ. ಸಂಘದಿಂದ ಸಾಲವನ್ನೂ ವಿತರಣೆ ಮಾಡಲಾಗುತ್ತಿದೆ. ಸಂಘಕ್ಕೆ ಅರಣ್ಯ ಇಲಾಖೆ ಹಸ್ತಕ್ಷೇಪ ಇಲ್ಲದ ಕಾರಣ ಬಹಳ ಚೆನ್ನಾಗಿ ನಡೆಯುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿಯನ್ನು ಬೆಳೆಯಲು ಅಧಿಕಾರಿಗಳು ಬಿಡಲಿಲ್ಲ.


– ಜಯರಾಮೇಗೌಡ,ಫಲಾನುಭವಿ, ದುದ್ದ

**

ನಿರಾಸಕ್ತಿ ಕಾರಣ
ಗ್ರಾಮ ಅರಣ್ಯ ಸಮಿತಿಗಳು ನಿಷ್ಕ್ರಿಯಗೊಳ್ಳಲು ಜನರ ನಿರಾಸಕ್ತಿಯೇ ಪ್ರಮುಖ ಕಾರಣ. ಒಮ್ಮೆ ಸಸಿ ಹಾಕಿದರೆ ಫಲ ಬರಲು 25 ವರ್ಷ ಬೇಕು. ಅಲ್ಲಿಯವರೆಗೆ ಕಾಯುವ ತಾಳ್ಮೆ ಜನರಿಗೆ ಇಲ್ಲ. ಅರಣ್ಯ ಉತ್ಪನ್ನಗಳ ಲಾಭಕ್ಕಿಂತಲೂ ಅನುದಾನದ ಮೇಲೆಯೇ ಅವರಿಗೆ ಕಣ್ಣು. ಸುತ್ತು ನಿಧಿಯಿಂದ ಸಾಲ ಪಡೆದು ಮರುಪಾವತಿ ಮಾಡುವ ಜವಾಬ್ದಾರಿ ಇಲ್ಲ. ಒಮ್ಮೆ ಸೌಲಭ್ಯ ಪಡೆದವರು ಮತ್ತೊಮ್ಮೆ ಸಮಿತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ ಹೆಚ್ಚು.


ಎನ್‌.ಶಿವರಾಜು,ಉಪ ಅರಣ್ಯ,ಸಂರಕ್ಷಣಾಧಿಕಾರಿ, ಮಂಡ್ಯ

**
ಕೋಟಿ ಮೇಲೆ ಕಣ್ಣು

ನಾನೇ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿ ಬಹಳ ಕೆಟ್ಟ ಅನುಭವ ಹೊಂದಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳು ಕೋಟಿ ಹಣದ ಕಾಮಗಾರಿಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅವರಿಗೆ ದೊಡ್ಡ ಗೋಡೆಗಳೇ ಬೇಕು, ಪರಿಸರ ಸ್ನೇಹಿ ಬೇಲಿಗಳು ಅವರಿಗೆ ಬೇಕಾಗಿಲ್ಲ. ಸಸಿ ನೆಡುವ ಕಾರ್ಯಕ್ರಮಗಳ ಮೇಲೆ ಅವರಿಗೆ ಆಸಕ್ತಿಯೇ ಇಲ್ಲ. ಗ್ರಾಮಗಳಲ್ಲಿ ರಾಜಕಾರಣ ಮನೆ ಮಾಡಿರುವ ಕಾರಣ ಗ್ರಾಮ ಅರಣ್ಯ ಸಮಿತಿಗಳು ಯಶಸ್ವಿಯಾಗಲಿಲ್ಲ. ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂದು ಚಿಂತಿಸುವವರೇ ಹೆಚ್ಚಾದರು. ಆದರೆ ಸರ್ಕಾರಕ್ಕೆ ತಾನೆಷ್ಟು ಕೊಡುತ್ತೇನೆ ಎಂಬ ಬಗ್ಗೆ ಯಾರೂ ಯೋಚಿಸಲಿಲ್ಲ. ಹೀಗಾಗಿ ಸಮಿತಿಗಳು ನಿಷ್ಕ್ರಿಯಗೊಂಡವು.


–ನಾಗೇಶ ಹೆಗಡೆ,ಪರಿಸರ ತಜ್ಞರು

***

ಹೆಕ್ಟೆರ್‌ಗಳಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT