ಸೋಮವಾರ, ಅಕ್ಟೋಬರ್ 14, 2019
29 °C
ಅಂಕೋಲಾ: 30 ವರ್ಷಗಳ ಬಳಿಕ ತಂದೆಯ ಹುಡುಕಿ ಬಂದ ಪುತ್ರ ಹಾಗೂ ಪುತ್ರಿಯರು

ಕಿರಿಯ ಮಗ ಸಿಕ್ಕಿದ; ಹಾಗಿದ್ದರೆ ಇಷ್ಟು ಸಮಯ ಜೊತೆಗಿದ್ದವನು ಯಾರು!

Published:
Updated:
Prajavani

ಅಂಕೋಲಾ: ಸುಮಾರು 30 ವರ್ಷ ದೂರವಾಗಿದ್ದ ಮಗ, ದಿಢೀರನೆ ಬಂದು ‘ನಾನು ನಿನ್ನ ಮಗನಪ್ಪಾ’ ಎಂದು ಹೇಳುತ್ತಾನೆ. ಇದರಿಂದ ತಂದೆಗೆ ಸಂಭ್ರಮದ ಬದಲು ಗೊಂದಲವಾಗುತ್ತದೆ. ತನ್ನ ಜೊತೆ 13 ವರ್ಷಗಳಿಂದ ವಾಸ ಮಾಡುತ್ತಿರುವನು ಯಾರು ಎಂಬ ಪ್ರಶ್ನೆ ಚಿಂತೆಗೆ ದೂಡುತ್ತದೆ!

ಇಂತಹ ಅಪರೂಪದ ಪ್ರಹಸನವೊಂದು ತಾಲ್ಲೂಕಿನ ಕೇಣಿ ಗ್ರಾಮಲ್ಲಾಗಿದೆ. ಇಲ್ಲಿನ ವೆಂಕಟ್ರಮಣ ನಾಯ್ಕ (70) ಎಂಬುವವರು ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಜೊತೆ ಜೀವನ ನಡೆಸುತ್ತಿದ್ದರು. ಬಹಳ ಹಿಂದೆ ಕೌಟುಂಬಿಕ ಕಲಹದಿಂದ ಬೇಸತ್ತು ಶೋಭಾ, ಪತಿಯಿಂದ ದೂರವಾದರು. ತಮ್ಮ ಮೂವರು ಮಕ್ಕಳೊಂದಿಗೆ ಕಲಘಟಗಿ ಸಮೀಪ ರಾಮನಾಳಕ್ಕೆ ತೆರಳಿ ಅಲ್ಲೇ ಜೀವನ ಕಳೆದರು. ಕೇಣಿಯಲ್ಲಿ ತಂದೆಯ ಜೊತೆ ಹಿರಿಯ ಮಗ ಸುರೇಶ ಮಾತ್ರ ಉಳಿದುಕೊಂಡರು.

ಇದಾಗಿ ಸುಮಾರು 17 ವರ್ಷಗಳ ಬಳಿಕ ಬಂದ ಯುವಕನೊಬ್ಬ, ‘ನಾನು ನಿನ್ನ ಕಿರಿಯ ಮಗ ಮಂಜು’ ಎಂದು ಪರಿಚಯಿಸಿಕೊಂಡ. ಇಷ್ಟು ವರ್ಷಗಳ ಬಳಿಕ ಮಗ ಪುನಃ ಬಂದನಲ್ಲ ಎಂಬ ಖುಷಿಯಲ್ಲೇ ವೆಂಕಟ್ರಮಣ ಆತನನ್ನು ಮನೆಗೆ ಸೇರಿಸಿಕೊಂಡರು.

ಈ ನಡುವೆ ನಾಲ್ಕೈದು ದಿನಗಳ ಹಿಂದೆ ಕಲಘಟಗಿಯಿಂದ ಬಂದ ವ್ಯಕ್ತಿಯೊಬ್ಬರು, ‘ನಾನು ನಿಮ್ಮ ಕಿರಿಯ ಮಗ ಮಂಜು’ ಎಂದು ಪರಿಚಯಿಸಿಕೊಂಡರು. ಕೇಣಿಯ ಮನೆಯ ಸುತ್ತಮುತ್ತ ಈ ಹಿಂದೆ ಇದ್ದ ಪರಿಸರವನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದರು. ಇದು ವೆಂಕಟ್ರಮಣ ಅವರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿತು. ಅದಾದ ಬಳಿಕ ಆ ವ್ಯಕ್ತಿ ಕಲಘಟಗಿಗೆ ಮರಳಿದರು.

ತಮ್ಮ ಅಕ್ಕಂದಿರಾದ ನಾಗಮ್ಮ, ನೀಲಮ್ಮ ಹಾಗೂ ಅವರ ಸಂಸಾರವನ್ನು ಕರೆದುಕೊಂಡು ಭಾನುವಾರ ಪುನಃ ಕೇಣಿಗೆ ಬಂದರು. ಆಗ ನೆರೆಹೊರೆಯವರು ಇವರ ಗುರುತು ಹಿಡಿದರು. ತಮ್ಮ ತಾಯಿಯ ಜೊತೆ ಹೋಗುವಾಗ ತೆಗೆದುಕೊಂಡು ಹೋಗಿದ್ದ ಹಳೆಯ ಮನೆಯ ದಾಖಲೆಗಳು, ಬ್ಯಾಂಕ್ ಪಾಸ್ ಪುಸ್ತಕ, ತಾಯಿಯ ಭಾವಚಿತ್ರವನ್ನೂ ತೋರಿಸಿದರು. ‌

ಇವನ್ನೆಲ್ಲ ನೋಡುತ್ತಿದ್ದಂತೆ ವೆಂಕಟ್ರಮಣ ಆನಂದ ಬಾಷ್ಪ ಸುರಿಸಿದರು. ದಶಕಗಳ ಬಳಿಕ ಮಕ್ಕಳನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಇಡೀ ಕುಟುಂಬ ಮತ್ತೆ ಒಂದಾದ ಸಂಭ್ರಮದಲ್ಲಿ ಮುಳುಗಿತು.

ಹಾಗಿದ್ದರೆ, ಇಷ್ಟು ದಿನ ಜೊತೆಗಿದ್ದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆ ವ್ಯಕ್ತಿ ಪ್ರತಿಕ್ರಿಯೆಗೆ ಸಿಗಲಿಲ್ಲ. ಅವರು ಮೀನುಗಾರಿಕೆಗೆ ತೆರಳಿದ್ದಾರೆ ಎಂಬ ಉತ್ತರ ಅಲ್ಲಿದ್ದವರಿಂದ ಬಂತು.

‘ಒಂದಾಗಿ ಬಾಳುತ್ತೇವೆ’: ‌‘ತಾಯಿ ಇದ್ದಾಗ ಕೇಣಿಯಲ್ಲಿರುವ ನಮ್ಮ ತಂದೆ ಹಾಗೂ ಅಣ್ಣನ ಬಗ್ಗೆ ಹೇಳಿದ್ದಳು. ನಮಗೆ ತಿಳಿವಳಿಕೆ ಬಂದ ಬಳಿಕ ತಂದೆಯನ್ನು ನೋಡುವ ಹಂಬಲವಾಯಿತು. ಹಾಗಾಗಿ ಹುಡುಕುತ್ತ ಕೇಣಿಗೆ ಬಂದೆ. ಈಗ ನಾನು ಕಲಘಟಗಿಯಲ್ಲಿ ಮಂಜುಗಡ್ಡೆಯ ಕಾರ್ಖಾನೆ ಹೊಂದಿದ್ದು, ಸ್ಥಿತಿವಂತನಾಗಿದ್ದೇನೆ. ನನ್ನ ಅಪ್ಪ, ಅಣ್ಣನೊಂದಿಗೆ ಎಲ್ಲರೂ ಒಂದಾಗಿ ಬಾಳುತ್ತೇವೆ’ ಎಂದು ಮಂಜು ಹೇಳಿದರು.

‘ಅವನೂ ಸುಖವಾಗಿರಲಿ’: ‘ನನ್ನ ಮಕ್ಕಳೆಲ್ಲರೂ ಮತ್ತೆ ನನಗೆ ಸಿಕ್ಕಿರುವುದು ಸಂತಸವಾಗಿದೆ. ಆದರೆ, ಇಷ್ಟು ದಿನ ನನ್ನ ನೋಡಿಕೊಂಡು, ಮಂಜು ಎಂದು ಹೇಳಿಕೊಂಡಿದ್ದ ‘ಮಗ’ ಯಾರೆಂದು ತಿಳಿಯುತ್ತಿಲ್ಲ. ಅವನ ಪಾಡಿಗೆ ಅವನೂ ಸುಖವಾಗಿ ಬಾಳಲಿ’ ಎಂದು ವೆಂಕಟ್ರಮಣ ನಾಯ್ಕ ಹಾರೈಸಿದರು.

Post Comments (+)