ಸೋಮವಾರ, ಮೇ 17, 2021
28 °C

‘ಫೋನಿ’ ಪೀಡಿತರಿಗೆ ಸಿಎಫ್‌ಟಿಆರ್‌ಐನಿಂದ 1 ಲಕ್ಷ ಪೊಟ್ಟಣ ಆಹಾರ; ಮೇ 6ರಂದು ‍ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಫೋನಿ ಪೀಡಿತ ಸಂತ್ರಸ್ತರಿಗೆ 25 ಸಾವಿರ ಟನ್‌ ತೂಕದ 1 ಲಕ್ಷ ಆಹಾರ ಪೊಟ್ಟಣಗಳನ್ನು ಮೇ 6ರಂದು ರವಾನೆ ಮಾಡಲಿದೆ.

ಶುಕ್ರವಾರ ಸಂಜೆಯಿಂದಲೇ ಸಂಸ್ಥೆಯಲ್ಲಿ ಆಹಾರ ತಯಾರಿ ಶುರುವಾಗಿದ್ದು, ಭಾನುವಾರ ಬೆಳಿಗ್ಗೆ 5 ಟನ್‌ ತೂಕದ ಆಹಾರ ಪೊಟ್ಟಣಗಳು ಸಿದ್ಧವಿದ್ದವು. ಸೋಮವಾರ ಬೆಳಿಗ್ಗೆಯೊಳಗೆ ಒಟ್ಟು 25 ಸಾವಿರ ಟನ್‌ ತೂಕದ ಆಹಾರ ಪೊಟ್ಟಣಗಳನ್ನು ತಯಾರಿಸಿ ವಿಮಾನದ ಮೂಲಕ ಒಡಿಶಾಗೆ ಕಳುಹಿಸಲು ಸಂಸ್ಥೆ ಸಕಲ ಸಿದ್ಧತೆ ನಡೆಸಿದೆ.

‘ಒಡಿಶಾ ಸಂತ್ರಸ್ತರಿಗೆ ಆದ್ಯತೆಯ ಮೇಲೆ ಆಹಾರ ನೀಡಲಾಗುವುದು. ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಸಂತ್ರಸ್ತಿಗೆ ಎರಡನೇ ಕಂತಿನಲ್ಲಿ ನೀಡಲಾಗುವುದು. ಮೂರೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಈ ಕುರಿತು ಸಂಪರ್ಕಿಸಲಾಗಿದೆ. ಉತ್ತರಕ್ಕಾಗಿ ಕಾದಿದ್ದೇವೆ. ಒಡಿಶಾದ ವಿಮಾನ ನಿಲ್ದಾಣದಲ್ಲಿ ನಮಗೆ ಹಸಿರು ನಿಶಾನೆ ದೊರೆತ ಕೂಡಲೇ ಆಹಾರ ಪೊಟ್ಟಣಗಳು ರವಾನೆಯಾಗುತ್ತವೆ. ಒಂದು ವೇಳೆ ಅನುಮತಿ ಸಿಗದೇ ಇದ್ದಲ್ಲಿ ರಸ್ತೆಯ ಮೂಲಕವೇ ಆಹಾರ ತಲುಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್.ರಾಘವ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇರಳದಿಂದ ಚಪಾತಿ

‘ಸಂಸ್ಥೆಯಿಂದ ತಂತ್ರಜ್ಞಾನ ಪಡೆದಿರುವ ಕೇರಳ ವೈನಾಡಿನ ಖಾಸಗಿ ಸಂಸ್ಥೆಗಳು ಚಪಾತಿ ತಯಾರಿಸಿ ಸಂಸ್ಥೆಗೆ ನೀಡಿವೆ. ಒಟ್ಟು 20 ಸಾವಿರ ಚಪಾತಿ ಪೊಟ್ಟಣ ಕೊಟ್ಟಿವೆ. ಶೇ 50ರಷ್ಟು ಖರ್ಚನ್ನು ಸಂಸ್ಥೆ ಭರಿಸಿಕೊಂಡಿದೆ. ಖಾಸಗಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ನಮ್ಮ ಸಹಾಯಕ್ಕೆ ಬಂದಿವೆ’ ಎಂದು ಮಾಹಿತಿ ನೀಡಿದರು.

ಈ ಆಹಾರ ಪದಾರ್ಥಗಳು ಕನಿಷ್ಠ 15 ದಿನ ಬಾಳಿಕೆ ಬರುತ್ತವೆ. ಗೊಜ್ಜು ಅವಲಕ್ಕಿಯನ್ನು ಇನ್ನೂ ಹೆಚ್ಚು ಅವಧಿಗೆ ಶೇಖರಿಸಿ ಇಟ್ಟುಕೊಳ್ಳಬಹುದು.

ಏನೇನು ಆಹಾರ?

ಗೊಜ್ಜು ಅವಲಕ್ಕಿ (ಇಮ್ಲೀ ಪೋಹ), ಉಪ್ಪಿಟ್ಟು (ರೆಡಿ ಟು ಈಟ್), ಉಪ್ಪಿಟ್ಟು (ರೆಡಿ ಟು ಕುಕ್), ಚಪಾತಿ, ಟೊಮೆಟೊ ಚಟ್ನಿ, ಹೈ ಪ್ರೋಟೀನ್ ರಸ್ಕ್ ಮತ್ತು ಬಿಸ್ಕತ್ ತಯಾರಾಗುತ್ತಿವೆ.

200 ಸಿಬ್ಬಂದಿ, 200 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 800 ಮಂದಿ ಹಗಲಿರುಳು ಆಹಾರ ಸಿದ್ಧ‌ತೆಯಲ್ಲಿ ನಿರತರಾಗಿದ್ದಾರೆ. ಜತೆಗೆ, ಸರ್ಕಾರಿ ರೈಲ್ವೆ ಪೊಲೀಸರು ಸಹ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಕಾರ್ಯಾಚರಣೆ ಚುರುಕುಕೊಂಡಿದೆ. ಸಂಸ್ಥೆಯ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ.

ಶೀಘ್ರವೇ ಅಕ್ಕಿ ಪಾಯಸ

ಒಡಿಶಾ ಭಾಗದಲ್ಲಿ ಅಕ್ಕಿಯಿಂದ ತಯಾರಿಸಿದ ಆಹಾರ ಉತ್ಪನ್ನಗಳನ್ನು ಸೇವಿಸುತ್ತಾರೆ. ಹಾಗಾಗಿ, ಅಕ್ಕಿ ಪಾಯಸವನ್ನು ಸಿದ್ಧಪಡಿಸಲು ತಂತ್ರಜ್ಞಾನ ರೂಪಿಸಲಾಗುತ್ತಿದೆ ಎಂದು ಡಾ.ರಾವ್ ತಿಳಿಸಿದರು.

ಭುವನೇಶ್ವರದಲ್ಲಿರುವ ಭಾರತೀಯ ಖನಿಜ ಮತ್ತು ವಸ್ತುವಿಜ್ಞಾನ ತಂತ್ರಜ್ಞಾನ (ಐಎಂಎಂಟಿ) ಸಂಸ್ಥೆಯಿಂದ ಕೆಲವು ತಂತ್ರಜ್ಞಾನಗಳನ್ನು ಪಡೆಯಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು