ಸವಲತ್ತು ದುರ್ಬಳಕೆ ತಡೆಗೆ ಕಣ್ಗಾವಲು: ರೈತರ ಹೆಸರು ನೋಂದಣಿ ಕಡ್ಡಾಯ

7
ಕೆಎಫ್‌ಆರ್‌ಪಿ

ಸವಲತ್ತು ದುರ್ಬಳಕೆ ತಡೆಗೆ ಕಣ್ಗಾವಲು: ರೈತರ ಹೆಸರು ನೋಂದಣಿ ಕಡ್ಡಾಯ

Published:
Updated:

ಬಾಗಲಕೋಟೆ: ನೀವು ಕೃಷಿಕರೇ? ಹಾಗಿದ್ದಲ್ಲಿ, ಇನ್ನು ಮುಂದೆ ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಿದ್ದರೆ ಕೃಷಿ ಇಲಾಖೆಯ ರೈತರ ಸಾಮಾನ್ಯ ನೋಂದಣಿ ಪೋರ್ಟಲ್‌ನಲ್ಲಿ (ಕೆಎಫ್‌ಆರ್‌ಪಿ) ಹೆಸರು ನೋಂದಾಯಿಸುವುದು ಕಡ್ಡಾಯ.

ಸರ್ಕಾರದ ಸವಲತ್ತುಗಳನ್ನು, ಒಬ್ಬರೇ ಫಲಾನುಭವಿ ಪದೇ ಪದೇ ಪಡೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ, ರೈತರನ್ನು ಕೆಎಫ್‌ಆರ್‌ಪಿ ಅಡಿ ನೋಂದಾಯಿಸಲು ಮುಂದಾಗಿದೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದ ಸವಲತ್ತು ಪಡೆಯುವವರು ಇನ್ನು ಮುಂದೆ ತಮ್ಮ ವಿಳಾಸ, ಜಮೀನಿನ ಪ್ರಮಾಣ, ಸರ್ವೆ ನಂಬರ್‌, ನೀರಿನ ಮೂಲ, ಬೆಳೆಯ ಮಾಹಿತಿ ಸೇರಿದಂತೆ ಎಲ್ಲ ವಿವರಗಳನ್ನು (URL: http://164.100.133.211/FRUITS_test/Login.aspx) ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ಅದಕ್ಕೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕಿದೆ. ಹೀಗೆ ನೋಂದಾಯಿಸಿಕೊಂಡ ವರಿಗೆ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ.

ಕಣ್ಗಾವಲು ಏಕೆ?: ಕೃಷಿಗೆ ಪೂರಕವಾದ ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳನ್ನು ಕೆಲವರಷ್ಟೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿದ್ದವು. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ರಾಜಕೀಯ ಮುಖಂಡರ ಶಿಫಾರಸು ಪತ್ರ ತಂದವರು, ಬಲಾಢ್ಯರು ಮಾತ್ರ ಸವಲತ್ತುಗಳನ್ನು ಕಬಳಿಸುತ್ತಿದ್ದಾರೆ ಎಂಬದೂರುಗಳಿದ್ದವು.

’ಕೃಷಿ ಇಲಾಖೆಯಿಂದ ಸಹಾಯ ಧನದ (ಸಬ್ಸಿಡಿ) ನೆರವಿನಡಿ ಸ್ಪ್ರೇಯರ್ ಕೊಂಡ ರೈತನೇ, ತೋಟಗಾರಿಕೆ ಇಲಾಖೆಯಿಂದಲೂ ಅದನ್ನು ಪಡೆಯುತ್ತಿದ್ದ. ಇಲ್ಲವೇ ಬಲೆ ಕೊಳ್ಳಲು ಮೀನುಗಾರಿಕೆ ಇಲಾಖೆ ಸಹಾಯಧನ ಬಳಸಿಕೊಳ್ಳುತ್ತಿದ್ದ. ಇಲಾಖೆಗಳು ಪರಸ್ಪರ ಫಲಾನುಭವಿಗಳ ಮಾಹಿತಿ ಹಂಚಿಕೊಳ್ಳದಿರುವುದು, ಸಮನ್ವಯದ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಅರ್ಹರು ಕೆಲವೊಮ್ಮೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಅದನ್ನು ತಪ್ಪಿಸಲು ಈ ವ್ಯವಸ್ಥೆ ಆರಂಭಿಸಲಾಗಿದೆ’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಪಿ.ರಮೇಶ ಕುಮಾರ.

2011ರ ಜನಗಣತಿ ಅನ್ವಯ ಜಿಲ್ಲೆಯಲ್ಲಿ 2,27,731 ಕೃಷಿ ಕುಟುಂಬಗಳು ಇವೆ. ಜುಲೈ 20ರಿಂದ ನೋಂದಣಿ ಕಾರ್ಯ ಆರಂಭಿಸಲಾಗಿದೆ. ರಾಜ್ಯದ 743 ರೈತ ಸಂಪರ್ಕ ಕೇಂದ್ರಗಳು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಸಾಗಿದೆ. ಜಿಲ್ಲೆಯಲ್ಲಿ ಆರು ಸಾವಿರ ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.

‘ಸಾಲಮನ್ನಾ: ದುರುಪಯೋಗ ತಪ್ಪಲಿದೆ’
’ಆದಾಯ ತೆರಿಗೆ ಪಾವತಿದಾರರು ಕೂಡ ಸಬ್ಸಿಡಿಯಲ್ಲಿ ಕೃಷಿ ಸಾಲ ಪಡೆಯುತ್ತಿದ್ದಾರೆ. ಜೊತೆಗೆ ಸಾಲಮನ್ನಾ ಯೋಜನೆಯ ಉಪಯೋಗ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ತೊಂದರೆಯಾಗುವ ಜೊತೆಗೆ ಸರ್ಕಾರಕ್ಕೂ ಹೊರೆಯಾಗಲಿದೆ. ಅದನ್ನು ತಪ್ಪಿಸಲು ಕೃಷಿ ಸಾಲ ಪಡೆಯುವವರು ಇನ್ನು ಮುಂದೆ ಕೆಎಫ್‌ಆರ್‌ಪಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಆಧಾರ್ ಸಂಖ್ಯೆ ಜೋಡಣೆಯಾಗುವುದರಿಂದ ಸಾಲ ಪಡೆಯುವರರ ಎಲ್ಲ ವಿವರವೂ ಕೃಷಿ ಇಲಾಖೆಯ ಬಳಿ ಇರಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

* ಕೆಎಫ್‌ಆರ್‌ಪಿಯಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಇನ್ನು ಮುಂದೆ ಸರ್ಕಾರದ ಸವಲತ್ತುಗಳು ಸಿಗಲಿವೆ. ರೈತರಿಂದ ಒಪ್ಪಿಗೆ ನಂತರವೇ ಅವರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುವುದು
-ಡಾ.ಪಿ.ರಮೇಶಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !