ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನಸಿನ ಕನ್ನಡಿ ‘ಬ್ರೆತ್’

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಪ್ರಮುಖ ಆಕರ್ಷಣೆ ‘ಬ್ರೆತ್’. ಇರಾನಿ ನಿರ್ದೇಶಕಿ ನರ್ಗೀಸ್‌ ಅಬ್ಯಾರ್‌ ಕಲ್ಪನೆಯಲ್ಲಿ ಅರಳಿರುವ ಈ ಚಿತ್ರದಲ್ಲಿ ಮಗುವಿನ ಮನಸಿನ ಭಾವನೆಗಳನ್ನು ಪ್ರೇಕ್ಷಕರಿಗೆ ದಾಟಿಸುವ ನಿರ್ದೇಶಕಿಯ ಜಾಣ್ಮೆ ಪ್ರೇಕ್ಷಕರ ಮನತಟ್ಟುತ್ತದೆ.

ಒಂದೇ ಕುಟುಂಬದ ನಾಲ್ಕು ಮಕ್ಕಳು, ಅಪ್ಪ ಹಾಗೂ ಅಜ್ಜಿಯರ ಕಥೆ ಇಲ್ಲಿದೆ. ನವಿರು ಭಾವದ ಮಕ್ಕಳ ಚಿತ್ರ ಇದು. ಮಕ್ಕಳನ್ನು ಬಡಿಯುವ ಮೇಷ್ಟ್ರುಗಳಂತೆಯೇ, ಅವರ ಮುಗ್ಧತೆಯನ್ನು, ಕನಸುಗಾರಿಕೆಯನ್ನು ವ್ಯವಸ್ಥೆ ಕೊಂದು ಹಾಕುತ್ತದೆ. ಚಿತ್ರದ ಪ್ರಮುಖ ಆಕರ್ಷಣೆ ಬಹಾರ. ಅವಳ ಉಯ್ಯಾಲೆಯ ಚಲನೆ ಸಿನಿಮಾದ ಕ್ಲೈಮ್ಯಾಕ್ಸ್‌. ಕೊನೆಯ ದೃಶ್ಯದಲ್ಲಿ ಬಹಾರಳ ಇಲ್ಲದಿರುವಿಕೆಯನ್ನು ನಿರ್ದೇಶಕಿ ಧ್ವನಿಪೂರ್ಣವಾಗಿ ನಿರೂಪಿಸುತ್ತಾರೆ. ಯುದ್ಧ ನುಂಗಿಕೊಳ್ಳುವ ಬಹಾರಳ ಕನಸು ಹಾಗೂ ಅವಳ ಕಾರ್ಟೂನ್‌ ಚಿತ್ರದಂತೆ ನಮ್ಮ ಮನದಲ್ಲಿ ದಟ್ಟ ವಿಷಾದವೊಂದು ಬಾಂಬ್‌ ದಾಳಿಯ ಕಾರ್ಮೋಡದಿಂದ ಮುತ್ತಿಕೊಳ್ಳುತ್ತದೆ.

ಬಹಾರ ತಂದೆ ಅನುಭವಿಸುವ ಅಸ್ತಮಾ ಕಾಯಿಲೆ ವ್ಯಕ್ತಿಯ ಮತ್ತು ಕುಟುಂಬದ ಉಸಿರುಗಟ್ಟಿಸಿದರೆ, ಯುದ್ಧ ದೇಶದ ಉಸಿರುಗಟ್ಟಿಸಿಬಿಡುತ್ತದೆ ಎಂಬ ಆಲೋಚನೆಯನ್ನು ಸಿನಿಮಾ ಮಾರ್ಮಿಕವಾಗಿ ಹೇಳುತ್ತದೆ. ಮಕ್ಕಳ ಮನಸನ್ನು ಘಾಸಿ ಮಾಡುವ ನೂರಾರು ಸರಣಿ ಪ್ರಸಂಗಗಳು ಈ ಚಿತ್ರದಲ್ಲಿವೆ. ಅದರಲ್ಲೂ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳನ್ನು ನಿರ್ದೇಶಕಿ ಮಾರ್ಮಿಕವಾಗಿ ಚಿತ್ರಿಸುತ್ತಾಳೆ.

ಆಕೆಗೆ ಹೇಳಲು ಬಹಳಷ್ಟು ವಿಷಯಗಳಿವೆ. ಆದರೆ ಹೇಳಲಾರದ ಉಸಿರುಗಟ್ಟುವಿಕೆಯ ಒದ್ದಾಟವೇ ಚಿತ್ರವನ್ನು ಅದ್ಭುತವಾಗಿ ನಿರೂಪಿಸುತ್ತಾ ಹೋಗುತ್ತದೆ. ಕೆಲವು ದೃಶ್ಯಗಳನ್ನಂತೂ ಜೀವನದುದ್ದಕ್ಕೂ ಮರೆಯಲು ಸಾಧ್ಯವೇ ಆಗುವುದಿಲ್ಲ. ಈ ಚಿತ್ರದಲ್ಲಿ ಮಕ್ಕಳ ನಟನೆಯು ಬಾಲ್ಯದ ಸಹಜ ನಡವಳಿಕೆ ಎಂಬಂತೆಯೇ ಮೂಡಿಬಂದಿದೆ. ಬಹಾರ ನಮ್ಮ ಮನಸ್ಸಿನ ಭಾಗವೇ ಆಗಿಬಿಡುತ್ತಾಳೆ. ಗಫೂರನ ಅಸ್ತಮಾ ನಮ್ಮನ್ನೂ ಕಾಡುತ್ತದೆ. ಇರಾನ್ ಮೇಲೆ ಇರಾಕ್ ಸುರಿಸಿದ ಬಾಂಬುಗಳ ಜೊತೆಗೆ ಮೇಷ್ಟ್ರುಗಳೂ ಬಾಲ್ಯವನ್ನು ಕಾಡುವ ವಿಲನ್‌ಗಳಾಗಿ ಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT