ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಮಧ್ಯೆಪ್ರವೇಶ; ರೈತರ ಪ್ರತಿಭಟನೆ ಅಂತ್ಯ

ಕುತೂಹಲ ಕೆರಳಿಸಿದ ನಡೆ;
Last Updated 23 ನವೆಂಬರ್ 2018, 20:05 IST
ಅಕ್ಷರ ಗಾತ್ರ

ಬೆಳಗಾವಿ: ಜಾರಕಿಹೊಳಿ ಸಹೋದರರು ಅಧಿಪತ್ಯ ಹೊಂದಿದ ಬೆಳಗಾವಿಯಲ್ಲಿ ಹಲವು ದಿನಗಳಿಂದ ರೈತರು ನಡೆಸುತ್ತಿದ್ದ ಧರಣಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಶುಕ್ರವಾರ ಅಂತ್ಯಗೊಳಿಸಿರುವುದು ಕುತೂಹಲ ಕೆರಳಿಸಿದೆ.

ಸಕ್ಕರೆ ಕಾರ್ಖಾನೆಗಳು ನೀಡಬೇಕಾಗಿದ್ದ ಕಬ್ಬಿನ ಬಾಕಿ ಬಿಲ್‌ ಪಾವತಿಸಬೇಕು ಹಾಗೂ ಕಬ್ಬು ಕಟಾವು, ಸಾಗಾಟದ ವೆಚ್ಚವನ್ನು ಸೇರಿಸಿ ಎಫ್‌ಆರ್‌ಪಿ ದರ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ ವಾರದಿಂದ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಹಾಗೂ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಧರಣಿ ನಡೆಸಿದ್ದರು.

15 ದಿನಗಳೊಳಗೆ ರೈತರಿಗೆ ಬಾಕಿ ಬಿಲ್‌ ಪಾವತಿಸುವಂತೆ ಹಾಗೂ ಎಫ್‌ಆರ್‌ಪಿ ಮೇಲೆ ₹ 300 ಹೆಚ್ಚುವರಿಯಾಗಿ ನೀಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದರೂ ರೈತರು ಧರಣಿ ಮುಂದುವರಿಸಿದ್ದರು. ಮುಖ್ಯಮಂತ್ರಿ ಅವರ ತೀರ್ಮಾನ ತಮಗೆ ತೃಪ್ತಿ ತಂದಿಲ್ಲವೆಂದು ರೈತ ಮುಖಂಡ ಸಿದಗೌಡ ಮೋದಗಿ ಗುರುವಾರದಿಂದ ಆಮರಣ ಉಪವಾಸ ಕೂಡ ಆರಂಭಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯು ಬಾಕಿ ಹಣ ನೀಡಿಲ್ಲವೆಂದು ಇದಕ್ಕಿಂತ ಮುಂಚೆ ಇದೇ ಸಂಘಟನೆಯವರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಆ ಕಾರಣದಿಂದಲೋ ಏನೋ ಸಚಿವರು ಒಮ್ಮೆಯೂ ಪ್ರತಿಭಟನಾ ಸ್ಥಳದತ್ತ ಬಂದಿರಲಿಲ್ಲ. ಇವರಷ್ಟೇ ಅಲ್ಲದೇ, ಜಿಲ್ಲೆಯ 18 ಶಾಸಕರ ಪೈಕಿ ಯಾರೊಬ್ಬರೂ ಇದುವರೆಗೆ ರೈತರನ್ನು ಭೇಟಿ ಮಾಡಿರಲಿಲ್ಲ. ಚರ್ಚಿಸಿರಲಿಲ್ಲ ಎನ್ನುವುದು ಗಮನಾರ್ಹ.

ಡಿಕೆಶಿ ಎಂಟ್ರಿ:ಅಂತರರಾಷ್ಟ್ರೀಯ ನರ್ಸಿಂಗ್‌ ಸಮ್ಮೇಳನದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಸಚಿವ ಡಿ.ಕೆ. ಶಿವಕುಮಾರ್‌, ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ರೈತರ ಜೊತೆ ಮಾತುಕತೆ ನಡೆಸಿದರು.

‘ನಿಮ್ಮೊಂದಿಗೆ ಮಾತುಕತೆ ನಡೆಸಲು ಸರ್ಕಾರದ ಪರವಾಗಿ ಬಂದಿದ್ದೇನೆ. ಸರ್ಕಾರ ರೈತರ ಪರವಾಗಿಯೇ ಇದೆ. 15 ದಿನಗಳೊಳಗೆ ನಿಮ್ಮೆಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ. ಧರಣಿ ಕೈಬಿಡಬೇಕೆಂದು’ ಎಂದು ಮನವಿ ಮಾಡಿದರು.

ಸಚಿವರ ಭರವಸೆಯ ಮೇರೆಗೆ ಸಿದಗೌಡ ಮೋದಗಿ ಅವರು ಎಳನೀರು ಕುಡಿದು, ಆಮರಣ ಉಪವಾಸ ಅಂತ್ಯಗೊಳಿಸಿದರು. ಧರಣಿ ಕೈಬಿಟ್ಟರು.

ನನ್ನನ್ನು ಬಿಟ್ಟು ಏನೂ ನಡೆಯಲ್ಲ;

‘ಬೆಳಗಾವಿಯಲ್ಲಿ ನನ್ನನ್ನು ಬಿಟ್ಟು ಏನೂ ಮಾಡುವುದಕ್ಕೆ ಆಗುವುದಿಲ್ಲ’ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಚಿವ ರಮೇಶ ಜಾರಕಿಹೊಳಿ‌ ನನ್ನ ಸ್ನೇಹಿತ. ಅವರ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಲಾಗುತ್ತಿದೆ. ನಾನು ಸರ್ಕಾರದ ಭಾಗ. ಸಮಸ್ಯೆಗಳು ಬಂದಾಗ ಚರ್ಚಿಸುತ್ತೇನೆ. ಬಳ್ಳಾರಿಯಲ್ಲಿಯೂ ರೈತರ ಸಭೆ ನಡೆಸಿ ಬಂದಿದ್ದೇನೆ. ಬೆಳಗಾವಿಯನ್ನು ಯಾರಿಗೂ ಗುತ್ತಿಗೆ ಕೊಡುವುದಕ್ಕೆ ಆಗುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವ ರಮೇಶ ಜಾರಕಿಹೊಳಿ‌ ತಟಸ್ಥವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಪೌರಾಡಳಿತ ಸಚಿವರಾಗಿ ನಗರಸಭೆ, ಪುರಸಭೆ ಭೇಟಿಗಳಲ್ಲಿ ಅವರು ಬ್ಯುಸಿ ಇರಬೇಕು’ ಎಂದು ಸಲಹೆ ನೀಡಿದರು.

‘ಅವರು ದೊಡ್ಡವರು. ಅವರ ವಿಚಾರವನ್ನು ನಾನು ಹೆಚ್ಚಾಗಿ ಪ್ರಸ್ತಾಪಿಸುವುದಿಲ್ಲ. ಅವರು ತುಂಬಾ ಪ್ರಾಮಾಣಿಕರಿದ್ದಾರೆ. ಕಬ್ಬು ಪೂರೈಸಿದವರಿಗೆ ಬಾಕಿ ಹಣ ಕೊಡುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ಏರ್‌ಪೋರ್ಟ್‌ನಲ್ಲಿ ಯಾರೂ ಇರಲಿಲ್ಲ;

ಗುರುವಾರ ತಡರಾತ್ರಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಡಿ.ಕೆ. ಶಿವಕುಮಾರ್‌ ಅವರನ್ನು ಸ್ವೀಕರಿಸಲು ಪಕ್ಷದ ಯಾವ ನಾಯಕರೂ ಬಂದಿರಲಿಲ್ಲ. ಕೆಎಲ್‌ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರಿಂದ ಅವರನ್ನು ಸ್ವೀಕರಿಸಲು ಸಂಸ್ಥೆಯ ನಿರ್ದೇಶಕರೂ ಆದ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಮಹಾಂತೇಶ ಕವಟಗಿಮಠ ಮಾತ್ರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಶಿವಕುಮಾರ್‌ ಭಾಗವಹಿಸಿದ್ದರೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಹೊರತುಪಡಿಸಿದರೆ ಇನ್ನಾವುದೇ ನಾಯಕರು ಕಾಣಿಸಿಕೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT