ಸೋಮವಾರ, ಡಿಸೆಂಬರ್ 9, 2019
20 °C
ನಿರೀಕ್ಷೆಯಲ್ಲಿದ್ದ ಬೆಳೆಗಾರರಲ್ಲಿ ನಿರಾಸೆ ಮೂಡಿಸಿದ ಸರ್ಕಾರ

ಮೊಳಕಾಲ್ಮುರು: ಜಾರಿ ಆಗದ ಶೇಂಗಾ ‘ಪ್ಯಾಕೇಜ್’

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ತೀವ್ರ ಸಂಕಷ್ಟದಲ್ಲಿರುವ ಶೇಂಗಾ ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ‘ಶೇಂಗಾ ಪ್ಯಾಕೇಜ್‌’ ಇನ್ನೂ ಜಾರಿ ಹಂತದಲ್ಲೇ ಉಳಿದಿದ್ದು, ನಿರೀಕ್ಷೆಯಲ್ಲಿದ್ದ ಬೆಳೆಗಾರರಲ್ಲಿ ನಿರಾಸೆ ಮೂಡಿದೆ.

ಬಯಲುಸೀಮೆ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಮಳೆ ಆಶ್ರಿತ ವಾಣಿಜ್ಯ ಬೆಳೆ ಶೇಂಗಾ. ಈ ಬೆಳೆ ನಂಬಿಕೊಂಡು ರೈತರು ಬದುಕು ರೂಪಿಸಿಕೊಂಡಿದ್ದಾರೆ. ಒಂದು ದಶಕದಿಂದ ಮಳೆ ಕೊರತೆ, ರೋಗಬಾಧೆ ಸೇರಿ ಹಲವು ಸಮಸ್ಯೆಗಳಿಂದ ಶೇಂಗಾ ರೈತರ ಕೈಗೆಟುಕುತ್ತಿಲ್ಲ. ಶೇಂಗಾ ಬೆಳೆಯಿಂದ ರೈತರು ವಿಮುಖರಾಗುವುದನ್ನು ತಪ್ಪಿಸುವ ಉದ್ದೇಶದಿಂದ 2018-19ನೇ ಸಾಲಿನಲ್ಲಿ ಸರ್ಕಾರ ₹50 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ರೂಪಿಸಿತ್ತು.

ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಶೇಂಗಾ ಬೆಳೆಗಾರರ ಸಂಕಷ್ಟದ ಬಗ್ಗೆ ಚರ್ಚೆಯಾಗಿತ್ತು. ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿದ ಸಮ್ಮಿಶ್ರ ಸರ್ಕಾರ ‘ಶೇಂಗಾ ಪ್ಯಾಕೇಜ್’ ಘೋಷಣೆ ಮಾಡಿತ್ತು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ತುಮಕೂರು ಜಿಲ್ಲೆಯ ಶಿರಾ, ಪಾವಗಡ ಹಾಗೂ ಮಧುಗಿರಿ ತಾಲ್ಲೂಕು ವ್ಯಾಪ್ತಿಗೆ ಇದು ಅನ್ವಯವಾಗುತ್ತಿತ್ತು. ಆದರೆ, ಈವರೆಗೆ ಇದು ಅನುಷ್ಠಾನಗೊಳ್ಳಲಿಲ್ಲ ಎಂಬ ಕೊರಗು ಬೆಳೆಗಾರರಲ್ಲಿ ಇದೆ.

ಹೊಸ ತಳಿ ಸಂಶೋಧನೆ, ಬೀಜ ಸರಬರಾಜು, ಬಿತ್ತನೆ ಬೀಜಕ್ಕೆ ರಿಯಾಯಿತಿ, ಪರಿಹಾರ, ಬೆಂಬಲ ಬೆಲೆಗೆ ಮೀಸಲಿಟ್ಟ ಅನುದಾನ ಬಳಕೆ ಮಾಡುವುದು ಪ್ಯಾಕೇಜ್‌ ಉದ್ದೇಶವಾಗಿತ್ತು. ಯಾವುದೇ ಶಾಶ್ವತ ನೀರಾವರಿ ಸೌಲಭ್ಯವಿಲ್ಲದ ಈ ಭಾಗದ ರೈತರಲ್ಲಿ ಇದು ಆಶಾಭಾವನೆ ಮೂಡಿಸಿತ್ತು. ಬಹುದಿನಗಳ ಒತ್ತಾಯದ ಬಳಿಕ ಇಂತಹದೊಂದು ಪ್ಯಾಕೇಜ್ ರೈತರಿಗೆ ಸಿಕ್ಕಿದೆ. ಆದರೆ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪ್ಯಾಕೇಜ್‌ ಕನಸಾಗಿಯೇ ಉಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತರು.

ಪ್ರಸಕ್ತ ವರ್ಷ ಶೇಂಗಾ ಬಿತ್ತನೆ ಬೀಜದ ಬೆಲೆ ಕ್ವಿಂಟಲ್‌ಗೆ ₹10 ಸಾವಿರವಿತ್ತು. ಬರ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ರೈತರು ದುಬಾರಿ ಬೆಲೆ ತೆತ್ತು ಬೀಜ ಖರೀದಿಸಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಸಕಾಲಕ್ಕೆ ಮಳೆ ಬಾರದೇ ಇದ್ದರೂ ಶೇಂಗಾ ರೈತರ ಕೈಹಿಡಿಯುವ ಲಕ್ಷಣ ಕಾಣುತ್ತಿದೆ. ಬೆಂಬಲ ಬೆಲೆ ಸಿಕ್ಕರೆ ಅನುಕೂಲ ಎಂಬ ನಿರೀಕ್ಷೆ ರೈತರಲ್ಲಿದೆ.

‘ಆಂಧ್ರಪ್ರದೇಶದಲ್ಲಿ ಶೇಂಗಾ ಬೆಳೆಗೆ ಉತ್ತಮ ಉತ್ತೇಜನ ಸಿಗುತ್ತಿದೆ. ಸಬ್ಸಿಡಿ ದರದಲ್ಲಿ ಬೀಜ ವಿತರಣೆ, ಖರೀದಿ ಕೇಂದ್ರ ಸೇರಿ ಹಲವು ಸೌಲಭ್ಯ ನೀಡಲಾಗುತ್ತಿದೆ. ನೆರೆ ಮತ್ತು ಬರಕ್ಕೆ ತುತ್ತಾದ ಬೆಳೆಗೆ ನಷ್ಟ ಪರಿಹಾರವೂ ಸಿಗುತ್ತದೆ. ಪಕ್ಕದಲ್ಲೇ ಇರುವ ಮೊಳಕಾಲ್ಮುರು ರೈತರಿಗೆ ಮಾತ್ರ ಇಂತಹ ಸೌಲಭ್ಯ ದೊರಕುತ್ತಿಲ್ಲ. ಆಂಧ್ರಪ್ರದೇಶದ ಮಾದರಿಯಲ್ಲಿ ಶೇಂಗಾ ಬೆಳೆಗೆ ಉತ್ತೇಜನ ನೀಡಬೇಕು’ ಎಂದು
ಒತ್ತಾಯಿಸುತ್ತಾರೆ ಬೆಳೆಗಾರ ಶ್ರೀನಿವಾಸ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು