ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ: ರೈತರು ಆತಂಕದಲ್ಲಿ

Last Updated 10 ಜೂನ್ 2019, 20:01 IST
ಅಕ್ಷರ ಗಾತ್ರ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಬಾರದ ಪರಿಣಾಮ ರೈತರು ಆತಂಕದಲ್ಲಿ ಮುಳುಗಿದ್ದು ಮುಗಿಲಿನತ್ತ ಮುಖ ಮಾಡುವಂತಾಗಿದೆ.

ಇತ್ತ ಬಿತ್ತನೆ ಅವಧಿ ಮುಗಿಯುತ್ತದೆ ಎಂಬ ಆತಂಕದಿಂದ ಕೆಲ ರೈತರು ಒಣ ಮಣ್ಣಿನಲ್ಲಿ ಹೆಸರು ಕಾಳು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ವರುಣನ ಕೃಪೆ ಆಗದೇ ರೈತರ ಗೋಳು ಹೇಳತೀರದಾಗಿದೆ.

ಎರಡು ವಾರಗಳ ಹಿಂದೆ ಮಳೆ ಮುಖ ತೋರಿಸಿದಂತೆ ಮಾಡಿ ಆಲಿಕಲ್ಲು ಮಳೆ ಸುರಿದು ಮರೆಯಾದ ಬಳಿಕ ಮಳೆಯ ಸುಳಿವೇ ಇಲ್ಲ. ಹವಾಮಾನ ಇಲಾಖೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರವೇಶ ಮಾಡುವುದಾಗಿ ಹೇಳಿದರೂ ಜೂನ್ 10 ಕಳೆದರೂ ಮಳೆ ಆಗಿಲ್ಲ.

ಸತತ ಐದು ವರ್ಷಗಳಿಂದ ಈ ಭಾಗದಲ್ಲಿ ಬರದ ಛಾಯೆ ಉಂಟಾಗಿ ರೈತರು ನಿತ್ಯಜೀವನಕ್ಕೂ ಪರದಾಡಬೇಕಾಗಿದೆ. ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಉದ್ಯೋಗ ಅರಸಿ ಗುಳೆ ಹೋಗುವಂತಾಗಿದೆ. ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ.

ಬಿತ್ತನೆಗೆ ಸಿದ್ಧತೆ: ಮುಂಗಾರು ಬಿತ್ತನೆಗಾಗಿ ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಕೃಷಿ ಇಲಾಖೆ ರಿಯಾಯಿತಿ ದರದ ಬೀಜವನ್ನು ವಿತರಿಸುತ್ತಿದೆ. ರೈತರು ಸಾಲ ಮಾಡಿ ಹೆಸರು ಕಾಳು ಬೀಜ ಖರೀದಿಸಿದ್ದಾರೆ. ಕೆಲವು ರೈತರು ಮಳೆರಾಯ ಕೃಪೆ ತೋರುತ್ತಾನೆ ಎಂಬ ಭರವಸೆ ಮೇಲೆ ಒಣ ಮಣ್ಣಿನಲ್ಲಿ ಹೆಸರು ಬಿತ್ತನೆಗೆ ಮುಂದಾಗಿರುವುದು ಕಾಣುತ್ತದೆ. ಆದರೆ ತಾಲ್ಲೂಕಿನಲ್ಲಿ ನೀರಾವರಿ ಆಶ್ರಿತ ಪ್ರದೇಶ ಇರುವುದರಿಂದ ಹತ್ತಿ, ಮೆಕ್ಕೆಜೋಳ, ಈರುಳ್ಳಿ ಬಿತ್ತನೆಗೆ ಮಳೆ ಬಿದ್ದ ಮೇಲೆ ಮುಂದಾಗಬೇಕಿದೆ.

ಕೃಷಿ ಇಲಾಖೆ ಬೆಳೆವಾರು ಬಿತ್ತನೆ ಗುರಿ ಸಿದ್ಧಪಡಿಸಿದ್ದು,ಮೆಕ್ಕೆ ಜೋಳ 6500 ಹೆಕ್ಟೇರ್, ಹೆಸರು 8000 ಹೆಕ್ಟೇರ್, ಹೈಬ್ರಿಡ್ ಜೋಳ 500 ಹೆಕ್ಟೇರ್, ಶೆಂಗಾ 500 ಹೆಕ್ಟೇರ್, ಸೂರ್ಯಕಾಂತಿ 1000 ಹೆಕ್ಟೇರ್, ಬಿಟಿ ಹತ್ತಿ 4000 ಹೆಕ್ಟೆರ್, ಕಬ್ಬು 500 ಹೆಕ್ಟೇರ್ ಸೇರಿದಂತೆ 21 ಸಾವಿರ ಹೆಕ್ಟೇರ್ ಜಮೀನನಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ.

ಬೀಜ ಪೂರೈಕೆ: ಈಗಾಗಲೇ 86 ಕ್ವಿಂಟಲ್ ಹೆಸರು, 10 ಕ್ವಿಂಟಲ್ ಉದ್ದು ಸಂಗ್ರಹವಿದೆ, ಇದರಲ್ಲಿ 38 ಕ್ವಿಂಟಲ್ ಹೆಸರು, 20 ಕೆಜಿ ಉದ್ದು ಮಾರಾಟವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿದೇಶಕ ಚನ್ನಪ್ಪ ಅಂಗಡಿ ಮಾಹಿತಿ ನೀಡಿದರು.

ತೇವಾಂಶದ ಕೊರತೆ: ಹೆಸರು ಬಿತ್ತನೆ ಅವಧಿ ಮುಗಿಯುತ್ತಿದೆ. ಹೀಗಾಗಿ ತೇವಾಂಶದ ಕೊರತೆ ನಡುವೆ ಬಿತ್ತಬೇಕಾದ ಅನಿವಾರ್ಯತೆ ಇದೆ. ಆದರೂ ಜೂನ್ 30ರವರೆಗೂ ಹೆಸರು ಬಿತ್ತಬಹುದೆಂದು ಕೃಷಿ ಅಧಿಕಾರಿ ಅಂಗಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT