ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿಮಾ ಪರಿಹಾರ ಹಣ ಏರ್‌ಟೆಲ್‌ ಖಾತೆಗೆ!

ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದೇ ಏರ್‌ಟೆಲ್‌ಗೆ ಜೋಡಣೆ ಮಾಡಿದ್ದ ರೈತರು
Last Updated 5 ಜೂನ್ 2020, 1:56 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದೇ ಏರ್‌ಟೆಲ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆ ಮಾಡಿರುವುದರಿಂದ ಬೆಳೆ ವಿಮಾ ಪರಿಹಾರದ ಹಣ ರೈತರ ಖಾತೆಗೆ ಹೋಗದೆ, ಏರ್‌ಟೆಲ್‌ಗೆ ಖಾತೆಯಲ್ಲಿ ಜಮೆ ಆಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಇದನ್ನು ತಪ್ಪಿಸಲು ಎಲ್ಲ ರೈತರೂ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಗಳಿಗೇ ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೂವು ಬೆಳೆಗಾರರು ಮತ್ತು ಮೆಕ್ಕೆ ಜೋಳ ಬೆಳೆದು ನಷ್ಟ ಹೊಂದಿದ ರೈತರಿಗೆ ತಲಾ ₹5,000 ಲಾಕ್‌ಡೌನ್‌ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಈ ಹಣ ಅವರ ಖಾತೆಗೆ ಜಮೆ ಆಗಬೇಕಿದ್ದರೆ, ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಮಾಡಿಲ್ಲವಾದರೆ, ತಕ್ಷಣ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ರೈತರ ಸಭೆ ನಡೆಸಿದಾಗ ಕೆಲವು ರೈತರು ಬೆಳೆ ವಿಮೆ ಪರಿಹಾರದ ಹಣ ಬಂದಿಲ್ಲ ಎಂದು ದೂರು ನೀಡಿದರು. 68 ರೈತರ ಮಾಹಿತಿ ತರಿಸಿದಾಗ ಕೇವಲ 8 ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಆಗಿತ್ತು. ಉಳಿದ 60 ರೈತರಿಗೂ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗದೇ, ಏರ್‌ಟೆಲ್‌ ಖಾತೆಗೆ ಹೋಗಿತ್ತು. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಬ್ಯಾಂಕ್‌ ಖಾತೆಯನ್ನು ಏರ್‌ಟೆಲ್‌ಗೆ ಜೋಡಣೆ ಮಾಡಿದ್ದ ಸಂಖ್ಯೆಯನ್ನು ನೀಡಿದ್ದರು ಎಂದು ಪಾಟೀಲ ವಿವರಿಸಿದರು.

ಮುಂದುವರೆದ ನಕಲಿ ಬೀಜ ಮಾರಾಟ ಜಾಲ ಪತ್ತೆ: ವಿಚಕ್ಷಣ ದಳದಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರೆದಿದೆ. ಮೆಕ್ಕೆಜೋಳದಂತೆ ನಕಲಿ ಹತ್ತಿಬೀಜ ಮಾರಾಟ ಜಾಲವೂ ಪತ್ತೆಯಾಗಿದೆ. ರಾಯಚೂರಿನ ತುರುವೆಹಾಳದಲ್ಲಿ ಕಳೆದ ಬುಧವಾರ ತೇಜಸ್ ಎನ್ನುವ ಆಂದ್ರ ಮೂಲಕ ಖಾಸಗಿ ಕಂಪೆನಿಗೆ ಸೇರಿದ ಮೈ ಸೀಡ್ಸ್ ಹೆಸರಿನ ಕಳಪೆ ನೂರು ಕೆಜಿ ಕಳಪೆ ಹತ್ತಿಬೀಜ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಳೆದ ಹದಿನೈದು ದಿನಗಳ ಹಿಂದೆ ಈ ಖಾಸಗಿ ಕಂಪೆನಿಯಿಂದ ಬೀಜ ಕೊಂಡು ಬಿತ್ತಿದ ರೈತರಿಗೆ ಸಸಿ ಬಂದಿಲ್ಲ.ಇದನ್ನು ಗಮನಿಸಿದ ರಾಯಚೂರು ಎಡಿ ಹಾಗೂ ವಿಚಕ್ಷಣಾದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅದೇ ರೀತಿ ಮೇ.30 ರಂದು ಯಾದಗಿರಿಯ ಗೋದಾಮಿನಲ್ಲಿ ಹೈದರಾಬಾದಿನ ಮೂಲದ ಕಂಪೆನಿಯೊಂದು ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ದಾಳಿಯಲ್ಲಿ ಸುಮಾರು 34,595 ಕ್ವಿಂಟಲ್ ಹತ್ತಿಬೀಜ ವಶಪಡಿಸುಕೊಳ್ಳಲಾಗಿದ್ದು, ಅನಧಿಕೃತ ಸಂಗ್ರಹ ಹಾಗೂ ಪ್ಯಾಕಿಂಗ್ ದಂಧೆ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ವಶಪಡಿಸಿಕೊಂಡ ಹತ್ತಿಬೀಜಗಳನ್ನು ಗುಣಮಟ್ಟ ಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT