ಸಾಲ ಮನ್ನಾ ಅಲ್ಲ, ಪ್ರಚಾರ ತಂತ್ರ: ಬಿಜೆಪಿ

7

ಸಾಲ ಮನ್ನಾ ಅಲ್ಲ, ಪ್ರಚಾರ ತಂತ್ರ: ಬಿಜೆಪಿ

Published:
Updated:

ಬೆಳಗಾವಿ: ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ರೈತರ ಸಾಲ ಮನ್ನಾ ವಿಷಯ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಗಂಭೀರ ಚರ್ಚೆಗೆ ವಸ್ತುವಾಯಿತು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ಈ ಕುರಿತು ವಿಸ್ತೃತ ಚರ್ಚೆ ಅಗತ್ಯವಿರುವುದರಿಂದ ಗುರುವಾರ ಮಧ್ಯಾಹ್ನ ವಿಷಯವನ್ನು ಎತ್ತಿಕೊಳ್ಳುವುದಾಗಿ ರೂಲಿಂಗ್‌ ನೀಡಿದರು.

ಬಿಜೆಪಿಯ ಕೆ.ಜಿ.ಬೋಪಯ್ಯ, ‘ಸಾಲ ಮನ್ನಾ ಯೋಜನೆಗೆ ಎಷ್ಟು ರೈತರನ್ನು ಗುರುತಿಸಲಾಗಿದೆ, ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ, ಈವರೆಗಿನ ವಿಳಂಬಕ್ಕೆ ಕಾರಣಗಳೇನು’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ‘ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕುಗಳ 22.48 ಲಕ್ಷ, ಸಹಕಾರ ಸಂಘಗಳ 20.38 ಲಕ್ಷ ರೈತರು ಯೋಜನೆಗೆ ಅರ್ಹರಿದ್ದಾರೆ. ಕಂದಾಯ ಇಲಾಖೆ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ ರೈತರ ಮಾಹಿತಿ ಅಳ
ವಡಿಸಲಾಗುತ್ತಿದೆ. ರಾಜ್ಯದ 6,500 ಬ್ಯಾಂಕ್ ಶಾಖೆಗಳಿಂದ ಮಾಹಿತಿ ಸಂಗ್ರಹಿಸಿ ಪರಿಶೀಲಿಸಬೇಕಾಗಿರುವುದರಿಂದ ವಿಳಂಬವಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾವಾರು ಸಾಲ ಮನ್ನಾ ಯೋಜನೆ ಪಟ್ಟಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸಾಲ ಮನ್ನಾ ಸೌಲಭ್ಯ ಪಡೆಯಲು 50 ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಸಾಮಾನ್ಯ ರೈತರು ಉತ್ತರ ನೀಡಲು ಸಾಧ್ಯವಿಲ್ಲ. ಈ ಯೋಜನೆ ಕೇವಲ ಪ್ರಚಾರದ ತಂತ್ರ’ ಎಂದು ಸಂದೇಹ ವ್ಯಕ್ತಪಡಿಸಿದರು.

ಬಿಜೆಪಿಯ ಜಗದೀಶ ಶೆಟ್ಟರ್, ‘ಜಾಹೀರಾತಿನಲ್ಲಿ ₹ 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಕೇವಲ ₹ 50 ಕೋಟಿ ಬಿಡುಗಡೆಯಾಗಿದೆ. ₹ 46 ಸಾವಿರ ಕೋಟಿ ಯಾವಾಗ ಬಿಡುಗಡೆ ಮಾಡುತ್ತೀರಿ? ರೈತರು ಬೀದಿಗೆ ಬಿದ್ದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಪಿಎಲ್‍ಡಿ ಬ್ಯಾಂಕುಗಳನ್ನು ಸಾಲ ಮನ್ನಾ ವ್ಯಾಪ್ತಿಗೆ ಒಳಪಡಿಸುವಂತೆ ಒತ್ತಾಯಿಸಿದರೆ, ಸಾಲ ಮನ್ನಾದ ಅರ್ಜಿಗಳನ್ನು ತಂತ್ರಾಂಶಕ್ಕೆ ಅಪ್‍ಲೋಡ್ ಮಾಡುವ ಕಾಲಾವಧಿ ವಿಸ್ತರಣೆ ಮಾಡುವಂತೆ ವಿಶ್ವೇಶ್ವರ ಹೆಗಡೆ ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಬಿ.ಎಸ್. ಯಡಿಯೂರಪ್ಪ, ‘ಆರು ತಿಂಗಳಿನಿಂದಲೂ ಸಾಲ ಮನ್ನಾ ವಿಷಯವೇ ಚರ್ಚೆಯಾಗುತ್ತಿದೆ. ಪೂರ್ತಿ ಹಣ ಬಿಡುಗಡೆ ಮಾಡಲು ನಾಲ್ಕು ವರ್ಷ ಬೇಕು ಎನ್ನುತ್ತಿದ್ದೀರಿ. ಇದು ಕೇವಲ ಪ್ರಚಾರದ ಕಾರ್ಯಕ್ರಮ’ ಎಂದು ಟೀಕಿಸಿದರು.

ಬಿಜೆಪಿಯ ಪಿ. ರಾಜೀವ್ ಸೇರಿದಂತೆ ಹಲವು ಶಾಸಕರು ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದರು. ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ ಮಧ್ಯಪ್ರವೇಶಿಸಿ, ‘ವಿರೋಧ ಪಕ್ಷದ ಸದಸ್ಯರು ಆಕ್ಷೇಪಗಳನ್ನಷ್ಟೇ ಹೇಳುತ್ತಿದ್ದಾರೆ. ನಮ್ಮ ಬಳಿ ಸಕಾರಾತ್ಮಕ ಮಾಹಿತಿಗಳಿವೆ. ಚರ್ಚೆಗೆ ಅವಕಾಶ ಕೊಡಿ’ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !