ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಕೊಟ್ಟರೂ ಬಾರದ ಪರಿಹಾರ! ಅಹವಾಲು ಆಲಿಸದ ಸಿಎಂ ವಿರುದ್ಧ ರೈತರ ಆಕ್ರೋಶ

Last Updated 29 ಜನವರಿ 2020, 11:24 IST
ಅಕ್ಷರ ಗಾತ್ರ

ಬೆಳಗಾವಿ: ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲು ಬೆಳಿಗ್ಗೆಯಿಂದಲೂ ಕಾದು ಕುಳಿತಿದ್ದ ತಮ್ಮನ್ನು ಭೇಟಿಯಾಗದೆ ಹೊರಟು ಹೋದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತ‍ಪಡಿಸಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಇಲ್ಲಿನ ಪ್ರವಾಸಿಮಂದಿರದಕ್ಕೆ ಬಂದಿದ್ದ ಮುಖ್ಯಮಂತ್ರಿ ಭೇಟಿಯಾಗುವುದಕ್ಕಾಗಿ ರೈತ ಮುಖಂಡರು ಗೇಟಿನಲ್ಲಿ ಕಾದಿದ್ದರು. ಅವರನ್ನು ಪೊಲೀಸರು ಪ್ರವಾಸಿಮಂದಿರದೊಳಕ್ಕೆ ಕರೆದುಕೊಂಡು ಹೋಗಿ ಮನವಿ ಸಲ್ಲಿಸಲು ವ್ಯವಸ್ಥೆ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಅವರ ಅಹವಾಲು ಆಲಿಸಲಿಲ್ಲ. ತರಾತುರಿಯಲ್ಲಿ ಪತ್ರಿಕಾಗೋಷ್ಠಿ ಮುಗಿಸಿದ ಮುಖ್ಯಮಂತ್ರಿ ಸವದತ್ತಿ ತಾಲ್ಲೂಕಿನ ಇಂಚಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಗೇಟಿನಲ್ಲಿ ಪ್ರತಿಭಟಿಸಿದ ರೈತರು, ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಪ್ರವಾಸಿ ಮಂದರಿದಿಂದ ತೆರಳುತ್ತಿದ್ದ ಶಾಸಕ ಅಭಯ ಪಾಟೀಲ ಕಾರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕರು ಮನವಿ ಸ್ವೀಕರಿಸಿ ರೈತರನ್ನು ಸಮಾಧಾನಪಡಿಸಿದರು. ‘ಸಮಯದ ಅಭಾವದಿಂದಾಗಿ ಮುಖ್ಯಮಂತ್ರಿ ಇಲ್ಲಿಂದ ಬೇಗ ತೆರಳಿದರು. ನಿಮ್ಮ ಬೇಡಿಕೆಗಳನ್ನು ಅವರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತೇನೆ. ಸರ್ಕಾರ ನಿಮ್ಮೊಂದಿಗೆ ಇದೆ’ ಎಂದು ಭರವಸೆ ನೀಡಿದರು.

‘ಗೋಕಾಕ ತಾಲ್ಲೂಕಿನ ಬೀರನಗಡ್ಡಿ ಗ್ರಾಮದ ನೆರೆ ಸಂತ್ರಸ್ತ 160 ಮಂದಿಗೆ ಪರಿಹಾರವಾಗಿ ತಲಾ ₹ 10ಸಾವಿರ ಚೆಕ್‌ ನೀಡಲಾಗಿತ್ತು. ಆದರೆ, ಅವರ ಖಾತೆಗೆ ಈವರೆಗೂ ಹಣ ಬಂದಿಲ್ಲ. ಗೋಕಾಕ ತಹಶೀಲ್ದಾರ್‌ ರೈತರಿಗೆ ಬೋಗಸ್ ಚೆಕ್‌ ನೀಡಿ ವಂಚಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಚೂನಪ್ಪ ಪೂಜಾರಿ ಒತ್ತಾಯಿಸಿದರು.

‘ಪ್ರವಾಹ ಹಾಗೂ ಅತಿವೃಷ್ಟಿಯಿಂದ ಮನೆಗಳು ಹಾನಿಯಾಗಿರುವ ಬಹುತೇಕರಿಗೆ ಇನ್ನೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಕಬ್ಬಿನ ಬಿಲ್ ಬಾಕಿ ಬಾರದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಅಳಲು ಆಲಿಸುವುದಕ್ಕೆ ಮುಖ್ಯಮಂತ್ರಿ ಆದ್ಯತೆ ನೀಡದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT