ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ ಆರಂಭವಾಗುತ್ತಲೇ ಕೊಡಗಿನಲ್ಲಿ ಭತ್ತದ ಕೃಷಿಯತ್ತ ರೈತರ ಚಿತ್ತ

Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮುಂಗಾರು ಮಳೆ ಬಿರುಸುಗೊಳ್ಳುತ್ತಿದ್ದಂತೆ ‌ತಾಲ್ಲೂಕಿನಲ್ಲಿ ಕೃಷಿ ಕಾರ್ಯವೂ ವೇಗ ಪಡೆದುಕೊಳ್ಳುತ್ತಿದೆ. ತಾಲ್ಲೂಕಿನ ರೈತರೂ ಕೃಷಿ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ.

ಎಲ್ಲೆಡೆ ಕೋವಿಡ್‌ 19 ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕಿನ ಜತೆಜತೆಗೆ ಈ ಬಾರಿಯ ಬೇಸಾಯದ ಕಡೆಗೆ ಗಮನ ನೀಡುತ್ತಿದ್ದಾರೆ. ಗದ್ದೆ, ಹೊಲಗಳನ್ನು ಹದಗೊಳಿಸುವ ಕಾರ್ಯವನ್ನು ಬಿರುಸಿನಿಂದ ನಡೆಸುತ್ತಿದ್ದಾರೆ. ಭತ್ತ, ಜೋಳ, ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

‌‘ಸಾಧಾರಣ ಮಳೆಯಾಗಿ ಭೂಮಿಯಲ್ಲಿ ತೇವಾಂಶವಿದ್ದುದರಿಂದ ಟ್ರಾಕ್ಟರ್‌, ಪವರ್‌ ಟಿಲ್ಲರ್, ಕೆಲವೆಡೆ ನೇಗಿಲಿನ ಮೂಲಕ ಉಳುಮೆ ಕಾರ್ಯ ನಡೆಸುತ್ತಿದ್ದೇವೆ. ಈ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುವುದರಿಂದ, ಭತ್ತದ ಹೊರತು ಇತರ ಬೆಳೆ ಬೆಳೆಯುವುದು ಕಷ್ಟ. ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತೇವೆ. ಮುಂಗಾರಿನ ಸಮಯದಲ್ಲಿ ಮಾತ್ರ ಭತ್ತ ಬೆಳೆಯುತ್ತೇವೆ’ ಎಂದು ಕೃಷಿಕ ತಮ್ಮಯ್ಯ ಹೇಳಿದರು.

ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 50 ಕ್ಚಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇರಿಸಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕೃಷಿ ಇಲಾಖೆ ಕ್ರಮಕೈಗೊಂಡಿದೆ.

ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಳೆಯಾಗಿದ್ದರಿಂದ ಭತ್ತದ ಗದ್ದೆಗಳ ಮೇಲೆ ಗುಡ್ಡ ಕುಸಿದು, ರೈತರು ನಷ್ಟ ಅನುಭವಿಸಿದ್ದರು. ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಕುಡಿಗಾಣ, ಇನಿಕನಳ್ಳಿ, ಬೆಂಕಳ್ಳಿ, ಕುಮಾರಳ್ಳಿ ಗ್ರಾಮಗಳಲ್ಲಿ ತೊರೆಗಳು ಗದ್ದೆಯ ಮೇಲೆ ಹರಿದು, ಬಿತ್ತಿದ್ದ ಪೈರು ಕೊಳೆತು ಹೋಗಿತ್ತು. ಆದರೂ, ಈ ಭಾಗದ ರೈತರು ಭತ್ತದ ಕೃಷಿಯಿಂದ ವಿಮುಖರಾಗಿಲ್ಲ.

ತಾಲ್ಲೂಕಿನಲ್ಲಿ ಭತ್ತದ ಕೃಷಿಗೆ ಸಂಬಂಧಿಸಿದಂತೆ 700 ಕ್ವಿಂಟಲ್‌ ಬಿತ್ತನೆ ಬೀಜವನ್ನು ಒದಗಿಸಲು ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಕೃಷಿ ಇಲಾಖೆಯಿಂದ ಬೇಡಿಕೆ ಸಲ್ಲಿಸಲಾಗಿದೆ. ಬಿಆರ್2655 (ಬಾಂಗ್ಲಾರೈಸ್), ಇಂಟಾನ್, ತುಂಗಾ, ಐಆರ್64, ತನು, ಅತಿರ ಭತ್ತದ ಬೀಜ ವಿತರಿಸಲಾಗುತ್ತಿದೆ. ಭತ್ತದ ಕೃಷಿ ಕೈಗೊಳ್ಳಲು ಇನ್ನೂ ಕಾಲಾವಕಾಶವಿದ್ದು, ಉತ್ತಮ ಮಳೆಯ ಅವಶ್ಯಕತೆಯಿದೆ. ಎಲ್ಲ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್ ತಿಳಿಸಿದ್ದಾರೆ.

ಕಳೆದ ವರ್ಷ ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಈ ಪೈಕಿ 9240 ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗಿತ್ತು. ಈ ಬಾರಿ ಕನಿಷ್ಠ 9,500 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ರೈತರು ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT