ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಸಿದ್ಧ ಹಸ್ತ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪ; ಕನ್ನಡದಲ್ಲಿ ಭಾಷಣ ಆರಂಭ
Last Updated 5 ಮೇ 2018, 8:53 IST
ಅಕ್ಷರ ಗಾತ್ರ

ಮುಧೋಳ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಸಿದ್ಧ ಹಸ್ತರು ಎಂದು ದೇಶ ವಿದೇಶದಲ್ಲೂ ಕುಖ್ಯಾತಿ ಪಡೆದಿದ್ದಾರೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಲೇವಡಿ ಮಾಡಿದರು.

ನಗರದ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ‘ಕರ್ನಾಟಕ ಜನತೆಗೆ ಹೃದಯ ಪೂರ್ವಕ ನಮಸ್ಕಾರ’ ಎಂದು ಆದಿತ್ಯನಾಥ ಕನ್ನಡದಲ್ಲಿ ಭಾಷಣ ಆರಂಭಿಸಿದರು.

‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ಸಂಘಟನೆಗಳನ್ನು ದಮನ ಮಾಡಲು ಹವಣಿಸುತ್ತಿದೆ. ಜಿಹಾದಿಗಳಿಗೆ ಸಹಕಾರ ನೀಡುತ್ತಿದೆ. ರಾಜ್ಯದಲ್ಲಿ ಆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯ ಹೊಣೆಗಾರಿಕೆ ಸಿದ್ದ
ರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ. ಹಿಂದೂಗಳು ಒಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸುತ್ತಿದ್ದರು’ ಎಂದು ದೂರಿದರು.

‘ಶ್ರೀರಾಮನ ಜನ್ಮ ಸ್ಥಳ ಉತ್ತರ ಪ್ರದೇಶ, ಹನುಮಂತನ ಜನ್ಮ ಸ್ಥಳ ಕರ್ನಾಟಕ. ಈಗ ಶ್ರೀರಾಮ ಹನುಮ ಕೂಡಿದ್ದಾರೆ. ರಾಜ್ಯದಲ್ಲಿ ರಾಮರಾಜ್ಯ ನಿರ್ಮಾಣವಾಗುವುದು ಖಚಿತ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿತ್ತು ಇನ್ನು ಅದು ಸಾಧ್ಯವಿಲ್ಲ ಅದು ಬಂದಾಗುತ್ತದೆ. ಕೇಂದ್ರದ ಹಲವಾರು ಜನಪರ ಯೋಜನೆಗಳಿಗೆ ಸಿದ್ದರಾಮಯ್ಯ ಸಹಕಾರ ನೀಡಲಿಲ್ಲ ತ್ರಿವಳಿ ತಲಾಖ್ ಪ್ರತಿಬಂಧ ಇದು ಸನ್ಮಾನಿಕ ಅಭಿಯಾನ ಇದಕ್ಕೆ ಸಹಕಾರ ನೀಡಲಿಲ್ಲ. ಇದು ಬ್ರಷ್ಟಾಚಾರ ವಿಕಾಸ ಸರ್ಕಾರ ಎಂದು ಜರಿದ ಯೋಗಿ ಜನನಾಯಕ ಗೊವಿಂದ ಕಾರಜೋಳ ತಮ್ಮ ಅಭಿವೃದ್ಧಿ ಕೆಲಸದಿಂದ ಗುರುತಿಸಿಕೊಂಡಿದ್ದಾರೆ ಇವರನ್ನು ಬಹುಮತ ಅಂತರದಿಂದ ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ ‘ನಾನು ನಿಮ್ಮ ಮನೆಯ ಮಗನಂತೆ. ಮುಧೋಳ ಕ್ಷೇತ್ರದ ಜನತೆ ಈ ಬಾರಿಯೂ ಆಶೀರ್ವದಿಸಿ ನನ್ನನ್ನು ವಿಧಾನಸಭೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್.ಪಂಚಗಾಂವಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ನಾಗಪ್ಪ ಅಂಬಿ, ಚುನಾವಣಾ ಪ್ರಭಾರಿ ಸಿ.ವಿ.ಲೋಕೇಶಗೌಡ, ಸಂಚಾಲಕ ಗಂಗಾಧರ ಜೋಷಿ, ಅರುಣ ಕಾರಜೋಳ, ಉದಯ ಸಾರವಾಡ, ವಿಜಯ ನಿರಾಣಿ ವೇದಿಕೆಯಲ್ಲಿದ್ದರು.

ರೋಡ್ ಷೋ ರದ್ದು, ಗೊಂದಲ

ಮಧ್ಯಾಹ್ನ 1 ಗಂಟೆಗೆ ಯೋಗಿ ಆದಿತ್ಯನಾಥ ಮುಧೋಳಕ್ಕೆ ಬರಬೇಕಿತ್ತು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರ್‌ಎಂಜಿ ಕಾಲೇಜ್ ಮೈದಾನದವರೆಗೆ ರೋಡ್ ಷೋ ಎಂದು ನಿಗದಿ ಮಾಡಲಾಯಿತು. ಮಧ್ಯಾಹ್ನ ಒಂದು ಗಂಟೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾರ್ಯಕರ್ತರು ಜಮಾಯಿಸಿದರು. ಸುಮಾರು 3 ಗಂಟೆಗೆ ಬಂದ ಯೋಗಿ ಆದಿತ್ಯನಾಥ ನೇರವಾಗಿ ವೇದಿಕೆಗೆ ಬಂದರು ಅವರು ಬಂದಾಗ ಕುರ್ಚಿಗಳು ಭರ್ತಿಯಾಗಲಿಲ್ಲ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇದ್ದ ಕಾರ್ಯಕರ್ತರು 15 ನಿಮಿಷ ತಡವಾಗಿ ವೇದಿಕೆ ಹತ್ತಿರ ಬರುವಂತಾಯಿತು. ಸುಡು ಬಿಸಿಲು ಲೆಕ್ಕಿಸದೆ ಜನಸಾಗರ ಕಾಲೇಜ್ ಮೈದಾನಕ್ಕೆ ಕಾರ್ಯಕರ್ತರು ಓಡುತ್ತಾ ಬಂದರು.

ಆದರೆ ರೋಡ್ ಷೋ ನೋಡಲು ನಿಂತಿದ್ದ ಜನರಿಗೆ ಯೋಗಿ ಆದಿತ್ಯನಾಥ ವೇದಿಕೆ ಹೋಗಿದ್ದು ತಿಳಿಯದೆ, ಈಗ ಬರುತ್ತಾರೆ ಎಂದು ಕಾಯುತ್ತ ನಿಂತಿದ್ದರು. ತಂಬಾಕ ಚೌಕ, ಗಾಂಧಿ ಸರ್ಕಲ್, ಶಿವಾಜಿ ವೃತ್ತದಲ್ಲಿ ನಿಂತಿದ್ದ ಸಾವಿರಾರು ಜನರು, ಮಹಿಳೆಯರು ಮಕ್ಕಳು ನಿರಾಸೆಯಿಂದ ಮನೆಗೆ ಹಿಂದಿರುಗಿದರು.

ಸಿದ್ದರಾಮಯ್ಯಗೆ ಭಯ!

‘ಕಾಂಗ್ರೆಸ್ ಸರ್ಕಾರ, ರೈತವಿರೋಧಿ, ಯುವ ಜನಾಂಗದ ವಿರೋಧಿ, ಮಹಿಳೆಯರ ದೀನ ದಲಿತರ ವಿರೋಧಿ ಸರ್ಕಾರ. ಇದು ಜಾತಿ ಧರ್ಮ ಒಡೆಯುವ ಸರ್ಕಾರ ಇಂಥ ಕಾರ್ಯಗಳನ್ನು ಮಾಡಿದ ಸಿದ್ದರಾಮಯ್ಯ ನೀವು ಪದೇ ಪದೇ ಕರ್ನಾಟಕಕ್ಕೆ ಏಕೆ ಬರುತ್ತಿರಿ? ಎಂದು ನನ್ನನ್ನು ಕೇಳುತ್ತಾರೆ. ನಾನು ಉತ್ತರ ಪ್ರದೇಶದಲ್ಲಿ 86 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. ಎಲ್ಲ ಅನೈತಿಕ ಚಟುವಟಿಕೆಗಳಿಗೆ ಪೂರ್ಣ ವಿರಾಮ ನೀಡಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇನೆ. ಸಜ್ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಾನು ಆಡಳಿತ ಮಾಡಿದ್ದು ಈಗ ಒಂದು ವರ್ಷ ಅಷ್ಟೆ. ಇಂತಹದ್ದೇ ಆಡಳಿತ ಕರ್ನಾಟಕಕ್ಕೆ ಬಂದರೆ ಎಂಬ ಆತಂಕ, ಭಯ ಸಿದ್ದರಾಮಯ್ಯ ಅವರಿಗೆ ಇದೆ’ ಎಂದು ಯೋಗಿ ಆದಿತ್ಯನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT