ಶುಕ್ರವಾರ, ಡಿಸೆಂಬರ್ 13, 2019
26 °C
ಫಾಸ್ಟ್ಯಾಗ್‌ ಮಾಡಿಸದಿದ್ದರ ಡಿ.1ರಿಂದ ದುಪ್ಪಟ್ಟು ಟೋಲ್‌

10 ದಿನದಲ್ಲಿ ಫಾಸ್ಟ್ಯಾಗ್‌ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ 40 ಟೋಲ್‌ ಫ್ಲಾಜಾಗಳಲ್ಲಿ ಡಿಸೆಂಬರ್‌ 1ರಿಂದ ರಾಷ್ಟ್ರೀಯ ವಿದ್ಯುನ್ಮಾನ ಟೋಲ್‌ ಸಂಗ್ರಹ (ಫಾಸ್ಟ್ಯಾಗ್‌) ವ್ಯವಸ್ಥೆ ಕಡ್ಡಾಯಗೊಳ್ಳಲಿದೆ.

‘ವಾಹನಗಳ ಮಾಲೀಕರು ಈಗಿನಿಂದಲೇ ಫಾಸ್ಟ್ಯಾಗ್‌ಗಳನ್ನು ಖರೀದಿಸಿ ತಮ್ಮ ವಾಹನಗಳ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಅಳವಡಿಸಬೇಕು. ಬಹುತೇಕ ಎಲ್ಲ ಬ್ಯಾಂಕ್‌ ಶಾಖೆಗಳಲ್ಲಿ, ಟೋಲ್‌ ಫ್ಲಾಜಾಗಳಲ್ಲಿ ಸಿಗಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ಆರ್‌.ಕೆ.ಸೂರ್ವವಂಶಿ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿ.1ರಿಂದ ಟೋಲ್‌ಫ್ಲಾಜಾಗಳಲ್ಲಿನ ಒಂದು ದ್ವಾರ ಹೊರತುಪಡಿಸಿ ಉಳಿದೆಲ್ಲ ದ್ವಾರಗಳೂ ಫಾಸ್ಟ್ಯಾಗ್‌ ರೀಡರ್ ಅಳವಡಿಸಲಾದ ದ್ವಾರಗಳಾಗಿರುತ್ತವೆ. ಒಂದು ದ್ವಾರ ಮಾತ್ರ ಫಾಸ್ಟ್ಯಾಗ್‌ ಮತ್ತು ನಗದು ಪಾವತಿಯ ಅವಕಾಶ ಇರುವ ಹೈಬ್ರಿಡ್‌ ದ್ವಾರ ಆಗಿರುತ್ತದೆ. ಫಾಸ್ಟ್ಯಾಗ್‌ ಮಾಡಿಸದವರು ಇದೇ ದ್ವಾರದಲ್ಲಿ ಉದ್ದದ ಸರದಿಯಲ್ಲಿ ಕಾಯಬೇಕಾಗುತ್ತದೆ. ಫಾಸ್ಟ್ಯಾಗ್‌ ಮಾಡಿಸದವರು ಇತರ ದ್ವಾರಗಳಲ್ಲಿ ಸಾಗಿದ್ದೇ ಆದರೆ ಟೋಪ್‌ ಶುಲ್ಕದ ದುಪ್ಪಟ್ಟು ಶುಲ್ಕ ವಿಧಿಸಿ ವಾಹನವನ್ನು ಬಿಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಏನೆಲ್ಲ ದಾಖಲೆ ಬೇಕು?: ಫಾಸ್ಟ್ಯಾಗ್‌ ಪಡೆಯಲು ವಾಹನ ನೋಂದಣಿ ಪ್ರಮಾಣಪತ್ರ, ವಾಹನದ ಮಾಲೀಕನ ಪಾಸ್‌ಪೋರ್ಟ್‌ ಆಕಾರದ ಭಾವಚಿತ್ರ, ಗುರುತಿನ ಚೀಟಿ (ಡಿಎಲ್‌, ಆಧಾರ್‌, ಪ್ಯಾನ್‌, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್‌) ಬೇಕು ಎಂದರು.

ರೀಚಾರ್ಜ್‌ ಹೇಗೆ?

ಕ್ರೆಡಿಟ್‌ ಕಾರ್ಡ್‌, ಡಿಬಿಟ್‌ ಕಾರ್ಡ್‌, ನೆಫ್ಟ್‌, ಆರ್‌ಟಿಜಿಎಸ್‌ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ರೀಚಾರ್ಜ್ ಮಾಡಿಸಬಹುದು. ಕನಿಷ್ಠ ರೀಚಾರ್ಜ್‌ ಮೊತ್ತ ₹ 100, ಗರಿಷ್ಠ ಮೊತ್ತ ₹ 1 ಲಕ್ಷ. ಎಸ್‌ಬಿಐನಲ್ಲಿ ಒಂದು ಫಾಸ್ಟ್ಯಾಗ್‌ ಪಡೆಯಲು ಗರಿಷ್ಠ ₹ 500 ಪಾವತಿಸಬೇಕಾಗುತ್ತದೆ. ಇದರಲ್ಲಿ ₹250 ಕಾರ್ಡ್‌ ದರವಾಗಿರುತ್ತದೆ. ಉಳಿದ ದುಡ್ಡು ರೀಚಾರ್ಜ್‌ಗೆ ಜಮಾಗೊಳ್ಳುತ್ತದೆ. ಇತರ ಬ್ಯಾಂಕ್‌ಗಳು ದರಗಳೂ ಇದರ ಆಸುಪಾಸಿನಲ್ಲೇ ಇವೆ.

ಫಾಸ್ಟ್ಯಾಗ್‌ ಕಡ್ಡಾಯದ ಬಗ್ಗೆ ಹಲವು ಮಾಧ್ಯಮಗಳ ಮೂಲಕ ಮನವರಿಕೆ ಮಾಡಲಾಗುತ್ತಿದೆ. ಇದರಿಂದ ಹಣ, ಸಮಯ ಉಳಿತಾಯವಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಆರ್‌.ಕೆ.ಸೂರ್ಯವಂಶಿ ಪ್ರತಿಕ್ರಿಯಿಸಿದರು.
 

ಪ್ರತಿಕ್ರಿಯಿಸಿ (+)