ಶುಕ್ರವಾರ, ಡಿಸೆಂಬರ್ 6, 2019
20 °C
ಹೆಚ್ಚುತ್ತಿದೆ ಆರ್‌ಎಫ್‌ಐಡಿ ಸಾಧನ ಖರೀದಿ: ಹಣ– ಮಾಹಿತಿ ಸೋರಿಕೆಗೆ ಕಂಗಾಲಾದ ಬಳಕೆದಾರರು

ಫಾಸ್ಟ್ಯಾಗ್: ಮಾಹಿತಿ ಕಳವಿಗೆ ಹೊಸದಾರಿ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆದ್ದಾರಿ ಬಳಕೆ ಶುಲ್ಕ ಸಂಗ್ರಹಕ್ಕೆ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿರುವ ಬೆನ್ನಲ್ಲೇ, ಬಳಕೆದಾರರ ಖಾಸಗಿ ಮಾಹಿತಿಯನ್ನು ಸುಲಭವಾಗಿ ಕದಿಯಬಹುದಾದ ರೇಡಿಯೊ ತರಂಗಾಂತರ ಗುರುತು ಸಾಧನಗಳ (ಆರ್‌ಎಫ್‌ಐಡಿ) ಖರೀದಿ ಹೆಚ್ಚಾಗುತ್ತಿರುವುದು ಮಾಹಿತಿ ಸುರಕ್ಷತೆಗೆ ಆತಂಕ ತಂದೊಡ್ಡಿದೆ.

‘ಕಡಿಮೆ ಅಂತರದಲ್ಲಿ ವೈರ್‌ಲೆಸ್‌ ಮೂಲಕ ಮಾಹಿತಿ ವರ್ಗಾವಣೆ ಸಾಧ್ಯವಾಗುವುದರಿಂದ ಆರ್‌ಎಫ್‌ಐಡಿ ಸಾಧನವನ್ನು ಫಾಸ್ಟ್ಯಾಗ್‌ನಲ್ಲಿ ಅಳವಡಿಸಲಾಗಿದೆ. ಕೇವಲ ₹1,500ದಿಂದ ₹2,000ಕ್ಕೆ ಈ ಸಾಧನಗಳು ದೊರೆಯುತ್ತಿದ್ದು, ಲಕ್ಷಾಂತರ ಜನ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಇದು ಮುಂದೆ ದುರ್ಬಳಕೆಗೆ ಕಾರಣವಾಗುವ ಅಪಾಯವಿದೆ’ ಎನ್ನುತ್ತಾರೆ ಸೈಬರ್‌ ಸುರಕ್ಷತಾ ತಜ್ಞೆ ಶುಭಮಂಗಳ ಸುನೀಲ್‌. 

ಹೇಗೆ ದುರ್ಬಳಕೆ?: ಫಾಸ್ಟ್ಯಾಗ್‌ ಬಳಕೆ ವೇಳೆ ನಮ್ಮ ಬ್ಯಾಂಕ್‌ ಖಾತೆಯ ವಿವರವನ್ನೂ ನೀಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಯಾಗುತ್ತದೆ. ಈ ಆರ್‌ಎಫ್‌ಐಡಿ ಸ್ಕ್ಯಾನರ್‌ಗಳ ಮೂಲಕ ನಮ್ಮ ವೈಯಕ್ತಿಕ ಮಾಹಿತಿ ಅಲ್ಲದೆ, ಬ್ಯಾಂಕ್‌ ಖಾತೆಯ ವಿವರವನ್ನೂ ಪಡೆಯಲಾಗುತ್ತದೆ. ಈ ಮಾಹಿತಿಯನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವುದು ಆತಂಕಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

‘ಆರ್‌ಎಫ್‌ಐಡಿ ಮೂಲಕ ಸಂಗ್ರಹಿಸುವ ದತ್ತಾಂಶಗಳನ್ನು ಡಾರ್ಕ್‌ ವೆಬ್‌ನಲ್ಲಿ ಬಿಟ್‌ಕಾಯಿನ್‌ ಅಥವಾ ಬೇರೆ ಡಿಜಿಟಲ್‌ ಕರೆನ್ಸಿ ಮೂಲಕ ಮಾರಾಟ ಮಾಡುವುದರಿಂದ ಹಣ ಹೋಗುವುದು ತಿಳಿಯುವುದೇ ಇಲ್ಲ’ ಎಂದರು.

ಹೇಗೆ ಸಿಗುತ್ತದೆ ಒಟಿಪಿ?: ನಮ್ಮ ಖಾತೆ ಮೂಲಕ ವಹಿವಾಟು ನಡೆಸಬೇಕೆಂದರೆ ಮೊದಲು ನಮಗೆ ನಕಲಿ ಕರೆ ಮಾಡುತ್ತಾರೆ. ನಾವು ಮಾತನಾಡುತ್ತಿದ್ದ ವೇಳೆ ‘ಸ್ನಿಪ್ಪಿಂಗ್‌’ ಮಾಡುವುದರಿಂದ ನಮ್ಮ ಒಟಿಪಿ ನಮಗಿಂತ ಮೊದಲು ಅವರಿಗೆ ಸಿಗುತ್ತದೆ. ಕರೆ ಕಡಿತಗೊಳಿಸಿದ ಮೇಲೆ ನಮಗೆ ಒಟಿಪಿ ಬಂದರೂ, ನಮ್ಮ ಖಾತೆಯಲ್ಲಿನ ಹಣ ಮೊದಲೇ ತೆಗೆದುಕೊಂಡಿರುತ್ತಾರೆ.

ಮಾಯವಾಗುತ್ತಿದೆ ವ್ಯಾಲೆಟ್‌ನಲ್ಲಿನ ಹಣ!

‘ಫಾಸ್ಟ್ಯಾಗ್‌ನಡಿ ಶುಲ್ಕ ಪಾವತಿ ವೇಳೆ ವ್ಯಾಲೆಟ್‌ನಲ್ಲಿ ₹250 ಇರಲೇಬೇಕು ಎಂದು ಕಡ್ಡಾಯ ಮಾಡಿದ್ದಾರೆ. ಬಳಕೆದಾರರಿಗೆ ಗೊತ್ತಾಗದೆ ಇದರಲ್ಲಿ ಹಣ ಕಡಿತವಾಗುತ್ತಿದೆ. ಈ ಬಗ್ಗೆ ನಮ್ಮ ಕೇಂದ್ರಕ್ಕೆ ನಿತ್ಯ ದೂರುಗಳು ಬರುತ್ತಿವೆ’ ಎಂದು ಶುಭಮಂಗಳ ಹೇಳಿದರು. 

‘ಹಣ ಕಳೆದುಕೊಂಡವರು ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿರಬಹುದು. ಆದರೆ, ಸೈಬರ್‌ ವಿಭಾಗಕ್ಕೆ ಈವರೆಗೂ ದೂರು ಬಂದಿಲ್ಲ’ ಎಂದು ಹೆಸರು ಹೇಳಲು ಬಯಸದ, ಸೈಬರ್‌ ಕ್ರೈಂ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು