ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಂಗ ಸುಂದರ ವ್ಯಾಯಾಮ..

Last Updated 21 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೇಸಿಗೆ ಝಳದಲ್ಲಿ ವ್ಯಾಯಾಮ ಮಾಡುವುದುತುಸು ಕಷ್ಟ ಎನಿಸದೆ ಇರದು. ಇಂತಹ ಕಾಲದಲ್ಲಿ ಈಜು ಅಪ್ಯಾಯಮಾನ ಎನಿಸುವ ಕ್ರೀಡೆ. ದೇಹದ ‘ಫಿಟ್ ನೆಸ್’ ಕಾಪಾಡಿಕೊಳ್ಳಲು ಸಹಾಯ ಮಾಡುವ ಇದು ಮೋಜನ್ನು ನೀಡುತ್ತದೆ.

ಬಹಳಷ್ಟು ಜನರು ತಮ್ಮ ದೇಹದ ಸದೃಢವಾಗಿ ಇರಿಸಲು ಆಸಕ್ತಿವಹಿಸುತ್ತಿರುವವರೇ. ಇದಕ್ಕಾಗಿ ಅನೇಕ ಉಪಾಯ, ದಾರಿಯನ್ನು ಕಂಡುಕೊಂಡಿದ್ದಾರೆ. ವೇಗದ ಜೀವನದಲ್ಲಿ ಆರೋಗ್ಯ ಪ್ರಜ್ಞೆ ಜಾಗೃತವಾಗಿದೆ.ಇಷ್ಟು ಆಹಾರ ಸ್ವೀಕರಿಸದರೆ ಇಂತಿಷ್ಟೇ ಕ್ಯಾಲರಿ ಕರಗಿಸಬೇಕು ಎನ್ನುವ ಆರಿವು ಮೂಡುತ್ತಿದೆ. ತಿನ್ನುವ ಆಹಾರದ ಕ್ಯಾಲರಿ ಪ್ರಮಾಣಗಳು ಎಲ್ಲರಿಗೂ ತಿಳಿದರೆ, ಇಷ್ಟೇ ದೂರ ಓಡಬೇಕು. ಇಷ್ಟೇ ವ್ಯಾಯಾಮ ಮಾಡಬೇಕು ಎಂಬ ಅಳತೆ-ಪ್ರಮಾಣಗಳು ಮನಸ್ಸಿಗೆ ತಿಳಿಯುತ್ತಿವೆ.

ದೇಹದ ಎಲ್ಲ ಭಾಗಕ್ಕೂ ವ್ಯಾಯಾಮ ನೀಡುವಶ್ರಮ ಪಡದ, ಬೆವರು ಹರಿಸದ ಪರಿಣಾಮಕಾರಿ ಕ್ರೀಡೆ ಎಲ್ಲರ ಆಯ್ಕೆ. ಈಜು ಈ ಆಯ್ಕೆಯ ಮೊದಲನೆಯದು. ಈ ತೇಲುವ ಆಟವು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಸಿನ ಭಾರಗಳನ್ನು ಇಳಿಸುತ್ತದೆ. ಈಜು ಕಲಿತವರು ಬದುಕನ್ನು ಕಲಿತವರೆಂತಲೇ ಅರ್ಥ. ತುರ್ತು ಸಂದರ್ಭಗಳಲ್ಲಿ ಇದು ಜೀವ ಉಳಿಸುವ ಕಲೆಯಾಗಿದೆ.ಇದನ್ನು ಕಲಿಯಲು ವಯೋಮಾನದ ಮಿತಿಯಿಲ್ಲ.

ಆಯಾಸ ತರದೇ ಉಲ್ಲಾಸ ನೀಡುವ ಈಜು, ಕೊಬ್ಬನ್ನು ಕರಗಿಸುವ, ತೂಕವನ್ನು ಇಳಿಸಿಕೊಳ್ಳಲು ದಾರಿಯಾಗಿದೆ. ಇತರೆ ಕ್ರೀಡೆಗಳಲ್ಲಿ ಕ್ಯಾಲರಿ ಕರಗಿಸಲುಸಮಯ-ಶಕ್ತಿ ವ್ಯಯ ಮಾಡಬೇಕು.ಆದರೆ,ಈಜಿನಲ್ಲಿ ನಾವೆಷ್ಟುಶ್ರಮ ಹಾಕಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ.ಆರೋಗ್ಯವಂತ ವ್ಯಕ್ತಿ ದಿನಕ್ಕೆ ಒಂದು ಗಂಟೆ ಈಜಿದರೆ 500ರಿಂದ 750 ಕ್ಯಾಲರಿ ಕರಗಿಸಬಹುದು. ಹ್ಞಾಂ! ವ್ಯಕ್ತಿಯ ದೇಹದ ತೂಕಕ್ಕೆ ತಕ್ಕಂತೆ ಕರಗಿಸಬೇಕಾದ ಕ್ಯಾಲರಿ ಪ್ರಮಾಣ ಭಿನ್ನವಾಗಿರುತ್ತದೆ.

ಸೂಕ್ತ ತರಬೇತಿ ಅವಶ್ಯ:ಈಜಿಗೆ ಸೂಕ್ತ ತರಬೇತಿ ಅವಶ್ಯವಿದೆ.`ನೀರೊಂದಿಗೆ ಗುದ್ದಾಡುವುದು ವ್ಯರ್ಥ ಕಸರತ್ತು’ ಎಂದು ಈಜು ಕಲಿತವರು ಹೇಳಲಾರರು. ನಿರ್ದಿಷ್ಟ ತರಬೇತಿಯೊಂದಿಗೆ ಈಜಿಗೆ ಇಳಿದರೆ ದೇಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪ್ರಾರಂಭದಲ್ಲಿ ಈ ಕಲೆಯನ್ನು ಸಿದ್ಧಿಸಿಕೊಳ್ಳಲು ತುಸು ಕಷ್ಟವಾಗಬಹುದು. ಆ ನಂತರದಲ್ಲಿ ನಿರ್ದೇಶಿತ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿದರೆ ಈಜಿನ ಎಲ್ಲ ವಿಭಾಗಗಳಲ್ಲೂ ಸಾಮರ್ಥ್ಯ ತೋರಬಹುದು. ಹೀಗಾಗಿಯೇ ನಗರ ಪ್ರದೇಶದ ಪೋಷಕರು ಬೇಸಿಗೆ ರಜೆ ಬಂತೆಂದರೆ ತಮ್ಮ ಮಕ್ಕಳನ್ನು ಈಜು ತರಬೇತಿ ಶಿಬಿರಗಳಿಗೆ ಕಳುಹಿಸುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ಗುರಿ ಇರಬೇಕು: ‘ನೀರಿಗಿಳಿದವರು ದಡ ಸೇರಲೇ ಬೇಕು.’ ಅಸ್ತಿತ್ವದ ಪ್ರಶ್ನೆ ಬಂದರೆ ಗುರಿಯೊಂದಿಗೆ ಮನುಷ್ಯ ಕಾರ್ಯಾಚರಿಸುತ್ತಾನೆ. ಹಾಗೆಯೇ ಈಜು ಪ್ರಿಯರು ನಿರ್ದಿಷ್ಟ ಗುರಿ ಹಾಕಿಕೊಂಡು ಅಭ್ಯಾಸ ಮಾಡಿದರೆ ಉತ್ತಮ ಸಾಧನೆಯನ್ನು ಮಾಡಬಹುದು. ಇದಕ್ಕಾಗಿ ತಮ್ಮ ಹಿಂದಿನ ದಿನದ ಸಾಮರ್ಥ್ಯವನ್ನು ದಿನವೂ ಹೆಚ್ಚಿಸಿಕೊಳ್ಳುತ್ತ ಅಭ್ಯಾಸ ಮಾಡಬೇಕು.

ಹಣ ವ್ಯಯ ಮಾಡಬೇಕಿಲ್ಲ:ದೇಹವನ್ನು ಹುರಿಗಟ್ಟಿಸಲು ಜಿಮ್ ಗಳಲ್ಲಿ ಹಾಕುವ ಶ್ರಮಕ್ಕಿಂತ ಇಲ್ಲಿ ಹೆಚ್ಚಿನ ಶ್ರಮ ಹಾಕುತ್ತೇವೆ. ನೀರಿನಲ್ಲಿ ನಮ್ಮ ದೇಹದ ತೂಕ ಕಡಿಮೆಯಾಗುವುದರಿಂದ ಅಂಗಗಳ ಚಲನೆ ಸುಲಭವಾಗಿ ಆಗುತ್ತದೆ. ನೆಲದ ಮೇಲೆ ನಡೆಯಲು ಹಾಕುವ ಶ್ರಮಕ್ಕಿಂತ ನೀರಿನಲ್ಲಿ ಹಾಕುವ ಶ್ರಮ 44 ಪಟ್ಟು ಹೆಚ್ಚಾಗಿರುತ್ತದೆ. ತೂಕದ ಸಾಧನಗಳನ್ನು ಬೇರೆ ವ್ಯಾಯಾಮಗಳಲ್ಲಿ ಬಳಸುತ್ತೇವೆ. ಆದರೆ ಈಜಿನಲ್ಲಿ ಹೆಚ್ಚು ಹಣ ವ್ಯಯ ಮಾಡಬೇಕಾದ ಅಗತ್ಯ ಇರುವುದಿಲ್ಲ.

ಆರೋಗ್ಯಕ್ಕೆ ಸಹಕಾರಿ: ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ಈಜು ತಡೆಯುತ್ತದೆ. ಉಸಿರಾಟದ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ನರಗಳು ಬಲವಾಗುವುದಲ್ಲದೆ, ದೇಹದಲ್ಲಿ ರಕ್ತ ಪರಿಚಲನೆ ಸುಗಮಗೊಳಿಸುತ್ತದೆ.ಸಂದು ನೋವುಗಳು ನಿವಾರಣೆಯಾಗುತ್ತವೆ. ಸ್ನಾಯುಗಳು ಶಕ್ತಿಯುತವಾಗುತ್ತವೆ. ಬೆನ್ನು ಮೂಳೆ ಬಲವಾಗುತ್ತದೆ. ಅಂಗವಿಕಲರು, ಮರೆವು ಇರುವ ವೃದ್ಧರೂ ತಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಲು ಈಜು ಸಹಕಾರಿಯಾಗಿದೆ.

ಕಸರತ್ತಿಗೆ ಬೆವರು ಹರಿಸಬೇಕಿಲ್ಲ:ಹೆಚ್ಚು ಬೆವರು ಹರಿಸಿದರೆ ವ್ಯಾಯಾಮ ಚೆನ್ನಾಗಿ ಮಾಡಿದ್ದೇವೆಂಬ ಅನುಭವ ಎಲ್ಲರಲ್ಲೂ. ಬೆವರು ಹರಿದ ಕೂಡಲೇ ಆಯಾಸ ಎನಿಸಿ ವ್ಯಾಯಾಮವನ್ನು ಪೂರ್ಣಗೊಳಿಸುವುದಿಲ್ಲ.ಆದರೆ, ಈಜಿನಲ್ಲಿ ಆಯಾಸವೂ ಆಗದು. ಉತ್ತಮ ವ್ಯಾಯಾಮವು ಆಗುತ್ತದೆ. ದೇಹದ ಉಷ್ಣಾಂಶ ಹೆಚ್ಚಾದರೂ ಅದು ಅನುಭವಕ್ಕೆ ಬರದು. ತಂಪಾದ ನೀರು ಇರುವುದರಿಂದ ಬೆವರು ಹರಿಯುವುದಿಲ್ಲ.

ಮಾನಸಿಕ ಸದೃಢತೆಗೆ ಉಪಕಾರಿ:ಮಾನಸಿಕ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಈಜು ಸಹಕಾರಿ. ಒತ್ತಡ ಸಂದರ್ಭಗಳನ್ನು ಸುಲಭವಾಗಿ, ಸರಳವಾಗಿ ನಿಭಾಯಿಸುವುದನ್ನು ಕಲಿಸಿಕೊಡುತ್ತದೆ. ಖಿನ್ನತೆಯನ್ನೂ ದೂರ ಮಾಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ನೀರಿಗೆ ಇಳಿಯುವ ಮೊದಲು

* ವಾರ್ಮ್‌ ಅಪ್‌ ವ್ಯಾಯಾಮ ಅವಶ್ಯ.
* ಕೈ ಕಾಲುಗಳನ್ನು ಸ್ಟ್ರೆಚ್‌ ಮಾಡಬೇಕು.
* ನೀರು ಕುಡಿಯಬೇಕು
* ನೀರಿನ ಉಷ್ಣಾಂಶಕ್ಕೆ ಹೊಂದಿಕೊಳ್ಳಲು ಸ್ನಾನ ಮಾಡಬೇಕು

***

ಆರೋಗ್ಯ ರಕ್ಷಣೆಗೆ ಈಜಿಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ದೇಹವನ್ನು ತಂಪಾಗಿಡುವುದರೊಂದಿಗೆ ಖುಷಿ ನೀಡುವ ಈಜು, ಫಿಟ್ ನೆಸ್ ಗೆ ಸಹಕಾರಿ ಕೂಡ. ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ತೊಂದರೆಗಳು ಬರದಂತೆ ಇದು ಕಾಪಾಡುತ್ತದೆ.

– ದಾಮಿನಿ ಗೌಡ, ಈಜು ಪಟು

ಈಜು ಕಲಿತರೆ ನಮ್ಮ ದೇಹ ಸಾಮರ್ಥ್ಯದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಬಹುದು. ನೀರಿಗೆ ಇಳಿದಾಗ ನಮ್ಮ ಸಹಜ ತೂಕವು ಅನುಭವಕ್ಕೆ ಬರುವುದಿಲ್ಲ. ಹೀಗಾಗಿ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುತ್ತದೆ. ಫಿಟ್‌ ನೆಸ್‌ ಕಾಪಾಡಿಕೊಳ್ಳಲು ವಾರಕ್ಕೆ ಒಮ್ಮೆ ಈಜಬೇಕು.

–ಸುಂದರೇಶ್‌ ಸತ್ಯನಾರಾಯಣ, ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT