ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಹ್ಯಾಕ್‌: ಹೈಕೋರ್ಟ್‌ ಮೊರೆ ಹೋಗಲು ನಿರ್ಧಾರ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅರುಣ್‌ ಮಾಚಯ್ಯ
Last Updated 26 ಜೂನ್ 2018, 13:12 IST
ಅಕ್ಷರ ಗಾತ್ರ

ಮಡಿಕೇರಿ: ‘ವಿಧಾನಸಭೆ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕ್‌ ಮಾಡಿರುವ ಸಂಶಯ ವ್ಯಕ್ತವಾಗಿದ್ದು ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದೇನೆ’ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅರುಣ್‌ ಮಾಚಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2013ರಲ್ಲಿ ಇವಿಎಂ –2 ಅನ್ನು ಬಳಸದಂತೆ ಸುಪ್ರಿಂ ಕೋರ್ಟ್‌ ಆದೇಶವಿದ್ದರೂ ಅದೇ ಯಂತ್ರವನ್ನು ಬಳಸಲಾಗಿದೆ. 13 ಲಕ್ಷದಷ್ಟು ಇವಿಎಂಗಳು ರಾಜ್ಯದಲ್ಲಿದ್ದರೂ ಉತ್ತರ ಪ್ರದೇಶ ಹಾಗೂ ಗುಜರಾತ್‌ನಿಂದ ತರಿಸಲಾಗಿತ್ತು. ಇದರ ಉದ್ದೇಶವೇನು’ ಎಂದು ಪ್ರಶ್ನಿಸಿದರು.

‘ಮತ ಹಾಕುವ ನೆಪದಲ್ಲಿ ಕೆಲವು ಮತಗಟ್ಟೆಗಳಿಗೆ ಹ್ಯಾಕ್‌ ತಂಡದ ಸದಸ್ಯರು ಇವಿಎಂ ಕೆಳಭಾಗಕ್ಕೆ ಒಂದು ಮಾದರಿಯ ಸಾಧನ ಅಳವಡಿಸಿ ಹೋಗಿದ್ದಾರೆ. ಎರಡು ಕಿ.ಮೀ. ದೂರದಲ್ಲಿ ಲ್ಯಾಪ್‌ಟಾಪ್‌ ಬಳಸಿ, ಹ್ಯಾಕ್‌ ಮಾಡಲಾಗಿದೆ. ಮತದಾನ ಮುಕ್ತಾಯ ಆಗುವುದಕ್ಕೂ ಮೊದಲು ಮತ್ತೊಬ್ಬ ಬಂದು ಆ ಸಾಧನ ವಾಪಸ್ ತೆಗೆದುಕೊಂಡು ಹೋಗಿರುವ ಮಾಹಿತಿಯಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದವರು ಕೆಲವು ದಿನಗಳಿಂದ ಭೂಗತರಾಗಿದ್ದು, ಸಂಪರ್ಕಕ್ಕೂ ಸಿಗುತ್ತಿಲ್ಲ. ಕೊಡಗಿನಲ್ಲಿ ಪ್ರೊಫೆಸರ್‌ ಒಬ್ಬರು ತಂಡದ ನೇತೃತ್ವ ವಹಿಸಿರುವ ಸಂಶಯವಿದೆ’ ಎಂದು ಆಪಾದಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲೂ ಇವಿಎಂ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ. ಮಂಗಳೂರಿನಲ್ಲಿ ಕಳೆದವಾರ ಪರಾಜಿತ ಅಭ್ಯರ್ಥಿಗಳು ಸಭೆ ನಡೆಸಿ, ಜಪಾನ್‌ನ ಪ್ರತಿಷ್ಠಿತ ಕಂಪೆನಿಯ ಪರಿಣಿತರನ್ನೂ ಸಂಪರ್ಕಿಸಿದ್ದೆವು. ಅವರು ಇವಿಎಂ ಹ್ಯಾಕ್‌ ಮಾಡಲು ಸಾಧ್ಯವಿದೆ ಎಂಬ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದರು.

‘ನಾಪೋಕ್ಲು ಭಾಗದ ಮತಗಟ್ಟೆಗಳಲ್ಲಿ ಯಾವುದೇ ಚುನಾವಣೆಯಲ್ಲೂ ಶೇ 70ಕ್ಕಿಂತ ಹೆಚ್ಚಿನ ಮತದಾನ ನಡೆದ ಉದಾಹರಣೆಯೇ ಇಲ್ಲ. ಆದರೆ, ಈ ಬಾರಿ ಚುನಾವಣೆಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ಶೇ 85ಕ್ಕಿಂತ ಹೆಚ್ಚಿನ ಮತದಾನ ನಡೆಯಲು ಏನು ಕಾರಣ’ ಎಂದು ಸಂಶಯ ವ್ಯಕ್ತಪಡಿಸಿದರು.

‘45 ದಿನಗಳ ಒಳಗೆ ಆಕ್ಷೇಪಣೆಗಳಿದ್ದರೆ ದೂರು ಸಲ್ಲಿಸಲು ಅವಕಾಶವಿದೆ. ಹೀಗಾಗಿ, ಜಿಲ್ಲಾ ಚುನಾವಣಾ ಅಧಿಕಾರಿಗಳು, ಸೈಬರ್‌ ಕ್ರೈಂಗೂ ದೂರು ನೀಡುತ್ತಿರುವೆ. ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ನಮ್ಮ ದೇಶದಲ್ಲಿ ಅದು ಸಾಧ್ಯವಾಗಿಲ್ಲ. ಕೆಲವು ದೇಶಗಳಲ್ಲಿ ರದ್ದುಗೊಳಿಸಿರುವ ಇವಿಎಂಗಳನ್ನೇ ನಮ್ಮಲ್ಲಿ ಬಳಕೆ ಮಾಡಲಾಗುತ್ತಿದೆ’ ಎಂದು ಆಪಾದಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಅರುಣ್‌ ಮಾಚಯ್ಯ 13 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT