ಶುಕ್ರವಾರ, ಡಿಸೆಂಬರ್ 6, 2019
20 °C
* ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಕೃತ್ಯ * ಅವಕಾಶದ ಆಮಿಷವೊಡ್ಡಿ ಯುವತಿಯರಿಂದ ಹಣ ಪಡೆದು ನಾಪತ್ತೆ

ಸಿನಿಮಾ ಹೆಸರಿನಲ್ಲಿ ವಂಚನೆ; ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಸತೀಶ್‌ ಅಲಿಯಾಸ್ ನಿಖಿಲ್‌ಗೌಡ ಎಂಬಾತನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಸರುಘಟ್ಟ ರಸ್ತೆಯ ಕಿರ್ಲೊಸ್ಕರ್‌ ಲೇಔಟ್ ನಿವಾಸಿ ಸತೀಶ್, 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿರುವ ಮಾಹಿತಿ ಇದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 28ರವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿ, ‘ನೀವು ಸುಂದರವಾಗಿದ್ದೀರಾ. ನನಗೆ ನಿರ್ದೇಶಕರು ಹಾಗೂ ನಟರು ಪರಿಚಯವಿದ್ದಾರೆ. ಅವರ ಸಿನಿಮಾದಲ್ಲಿ ನಟಿಸಲು ನಿಮಗೆ ಅವಕಾಶ ಕೊಡಿಸುತ್ತೇನೆ. ಜೊತೆಗೆ, ಆಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಅಭಿನಯಿಸಲೂ ಅನುಕೂಲ ಮಾಡಿಕೊಡುತ್ತೇನೆ. ಅದಕ್ಕೆ ₹ 40 ಸಾವಿರ ನೀಡಬೇಕು’ ಎಂದಿದ್ದ. ಆತನ ಮಾತು ನಂಬಿದ್ದ ಯುವತಿ, ಮುಂಗಡವಾಗಿ ₹ 25 ಸಾವಿರ ಕೊಟ್ಟಿದ್ದರು’ ಎಂದು ಮೂಲಗಳು ಹೇಳಿವೆ.

‘ಯಾವುದೇ ಅವಕಾಶ ಕೊಡಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ನಾಪತ್ತೆಯಾಗಿದ್ದ. ಆತನ ಕೃತ್ಯದಿಂದ ನೊಂದ ಯುವತಿ ದೂರು ನೀಡಿದ್ದರು. ತನಿಖೆ ನಡೆಸಿ, ಯಶವಂತಪುರ ವಸತಿಗೃಹವೊಂದರಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಯಿತು’ ಎಂದು ಮೂಲಗಳು ತಿಳಿಸಿವೆ.

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ: ‘ವಂಚಿಸುವುದನ್ನೇ ಆರೋಪಿ ವೃತ್ತಿ ಮಾಡಿಕೊಂಡಿದ್ದ. ನಟರು, ನಿರ್ದೇಶಕರು, ತಂತ್ರಜ್ಞರ ಭಾವಚಿತ್ರಗಳನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ ಆತ, ಆ ಖಾತೆ ಮೂಲಕ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅದನ್ನು ಯುವತಿಯರು ಸ್ವೀಕರಿಸುತ್ತಿದ್ದಂತೆ ಚಾಟಿಂಗ್ ಮಾಡಲಾರಂಭಿಸಿದ್ದ’ ಎಂದು ಮೂಲಗಳು ಹೇಳಿವೆ.

‘ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಅಭಿನಯಿಸಲು ನಟಿಯರು ಹಾಗೂ ರೂಪದರ್ಶಿಗಳು ಬೇಕಾಗಿದ್ದಾರೆ. ಅದಕ್ಕೆ ಆಯ್ಕೆ ಮಾಡಬೇಕಾದರೆ ಫೋಟೊ ಶೂಟ್ ಮಾಡಿಸಬೇಕು. ಕೆಲ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿ, ಸದಸ್ವತ್ವದ ಕಾರ್ಡ್ ಪಡೆಯಬೇಕು. ಆ ನಂತರವೇ ಅವಕಾಶ ಸಿಗುತ್ತದೆಂದು ಆರೋಪಿ ಹೇಳುತ್ತಿದ್ದ. ಆತನ ಮಾತು ನಂಬಿ ಯುವತಿಯರು ಹಣ ನೀಡುತ್ತಿದ್ದರು. ಅದಾದ ನಂತರ ಫೇಸ್‌ಬುಕ್ ಖಾತೆ ಬ್ಲಾಕ್ ಮಾಡಿ, ಮೊಬೈಲ್‌ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುತ್ತಿದ್ದ’ ಎಂದು ಮೂಲಗಳು ಹೇಳಿವೆ.

‘ಬಟ್ಟೆ ಅಳತೆ ಪಡೆಯುತ್ತಿದ್ದ’

‘ಜಾಹೀರಾತಿನಲ್ಲಿ ನಟಿಸಲು ಅವಕಾಶ ಸಿಕ್ಕಿರುವುದಾಗಿ ಹೇಳಿ ಯುವತಿಯರಿಗೆ ಕರೆ ಮಾಡುತ್ತಿದ್ದ ಆರೋಪಿ, ‘ನಿಮ್ಮ ಬಟ್ಟೆ ಅಳತೆಯನ್ನು ಕಳುಹಿಸಿ. ಹೊಸ ಬಟ್ಟೆ ಸಿದ್ಧಪಡಿಸಬೇಕಿದೆ’ ಎಂದು ಹೇಳುತ್ತಿದ್ದ. ‘ವಿದೇಶದಲ್ಲಿ ಶೂಟಿಂಗ್ ಇದೆ. ಪಾಸ್‌ಪೊರ್ಟ್ ಮಾಡಿಸಿ’ ಎಂತಲೂ ಆತ ಹೇಳುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು