ಸೋಮವಾರ, ಅಕ್ಟೋಬರ್ 14, 2019
29 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ಗೆ ಸವಾಲು ಹಾಕಿದ ಮಾಜಿ ಸಿಎಂ

ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ

Published:
Updated:
Prajavani

ಕಳಸ: ‘ಮೈತ್ರಿ ಸರ್ಕಾರದ ಅವಧಿಯಲ್ಲಿ ಖಜಾನೆ ಲೂಟಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ದಾಖಲೆ ಸಹಿತ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. 

ತಾಲ್ಲೂಕಿನ ಎಸ್.ಕೆ. ಮೇಗಲ್ ಮತ್ತು ಕಾರಗದ್ದೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಮನೆಗೆ ಭಾನುವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ‘ನಳಿನ್‌ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಖಜಾನೆ ಲೂಟಿಯಾಗಿದ್ದರೆ ಸಿಬಿಐಗೆ ವಹಿಸಿ ತನಿಖೆ ಮಾಡಿಸಲಿ’ ಎಂದರು.

‘ಬೊಕ್ಕಸ ಬರಿದಾಗಿಲ್ಲ. ಯಡಿಯೂರಪ್ಪ ಸರ್ಕಾರಕ್ಕೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವ ವಿವೇಚನೆ ಇಲ್ಲ. ನೆರೆ ಪರಿಹಾರದಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರು ಹಣ ನುಂಗಲು ಮುಂದಾಗಿದ್ದಾರೆ. ಈ ಬಗ್ಗೆ ಯಾವ ತನಿಖೆ ಮಾಡಿಸುತ್ತಾರೆ ಎಂಬುದನ್ನು ಯಡಿಯೂರಪ್ಪ ತಿಳಿಸಬೇಕು’ ಎಂದರು. ‘ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ರೈತರು ಎಂದರೆ ಯಾರೆಂದು ಗೊತ್ತಿದೆಯಾ? ರೈತರ ಕಷ್ಟ ಸುಖಕ್ಕೆ ಅವರು ಸ್ಪಂದಿಸಿದ ಉದಾಹರಣೆ ಇದೆಯಾ? ಅವರಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ? ಬಿಜೆಪಿ ಶಕ್ತಿಯುತವಾಗಿರುವವರೆಗೆ ಮೋದಿ ಅಥವಾ ಇನ್ನಾರದೊ ಹೆಸರಲ್ಲಿ ಅವರು ರಾಜಕೀಯ ಮಾಡುತ್ತಾರೆ’ ಎಂದು ಉತ್ತರಿಸಿದರು.

ಇದನ್ನೂ ಓದಿ... ಕುಮಾರಸ್ವಾಮಿ ಏನು ಪ್ರಧಾನಿಯೇ?: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನೆ

ಕೇಂದ್ರ ಎರಡನೇ ಕಂತಿನಲ್ಲಿ ರಾಜ್ಯಕ್ಕೆ ಪರಿಹಾರದ ಹಣ ನೀಡುವುದಿಲ್ಲ. ಆ ನಿರೀಕ್ಷೆ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ‘ನನ್ನ ವೇತನದಲ್ಲಿ ಎಸ್.ಕೆ. ಮೇಗಲ್ ಚಂದ್ರೇಗೌಡ ಕುಟುಂಬಕ್ಕೆ ₹2 ಲಕ್ಷ, ಕಾರಗದ್ದೆಯ ರೈತ ಚಂದ್ರೇಗೌಡ ಕುಟುಂಬಕ್ಕೆ ₹1 ಲಕ್ಷ ನೀಡಿದ್ದೇನೆ. ತಾಲ್ಲೂಕಿನಲ್ಲಿ ತೋಟ, ಗದ್ದೆಗೆ ಹಾನಿಯಾದ 38 ರೈತರಿಗೆ ₹10 ಸಾವಿರ ವೈಯಕ್ತಿಕವಾಗಿ ನೀಡಿದ್ದೇನೆ. ಸರ್ಕಾರಕ್ಕೆ ಈ ಮೂಲಕವಾದರೂ ಜ್ಞಾನೋದಯ ಆಗಲಿ ಎಂದು ನಾನೇ ಹಣ ವಿತರಿಸುತ್ತಿದ್ದೇನೆ’ ಎಂದೂ ಅವರು ಹೇಳಿದರು.

ಲೂಟಿಯಾದ ಹಣವೇ ಸಾಕಿತ್ತು
ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ‘ಕೇಂದ್ರ ಮತ್ತು ರಾಜ್ಯದಲ್ಲಿ ಪ್ರತಿಪಕ್ಷಗಳು ಆಡಳಿತ ನಡೆಸಿದ ಸಂದರ್ಭದಲ್ಲಿ ಖಜಾನೆ ಲೂಟಿ ಮಾಡಲಾಗಿದೆ. ಲೂಟಿ ಮಾಡಿದ ಹಣವೇ ಪರಿಹಾರ ವಿತರಿಸಲು ಸಾಕಾಗುತ್ತಿತ್ತು’ ಎಂದರು.

ಇದನ್ನೂ ಓದಿ... ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಹುಚ್ಚು: ಕೆ.ಎಸ್‌ ಈಶ್ವರಪ್ಪ

Post Comments (+)