ಡಿಕೆಶಿ ವಿರುದ್ಧ ಎಫ್‌ಐಆರ್‌, ಐದೇ ದಿನದಲ್ಲಿ ಬಿ–ರಿಪೋರ್ಟ್‌!

7
ಜಾಹೀರಾತು ಫಲಕದ ಚೌಕಟ್ಟು ತೆರವುಗೊಳಿಸದ ಆರೋಪ

ಡಿಕೆಶಿ ವಿರುದ್ಧ ಎಫ್‌ಐಆರ್‌, ಐದೇ ದಿನದಲ್ಲಿ ಬಿ–ರಿಪೋರ್ಟ್‌!

Published:
Updated:

ಬೆಂಗಳೂರು: ಜಾಹೀರಾತು ಫಲಕ ಅಳವಡಿಕೆಗೆ ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಆರೋಪದಡಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾದ ಐದೇ ದಿನಗಳಲ್ಲಿ ಬ್ಯಾಟರಾಯನಪುರ ಪೊಲೀಸರು ಬಿ–ರಿಪೋರ್ಟ್‌ ಸಿದ್ಧಪಡಿಸಿದ್ದಾರೆ.

ಹೈಕೋರ್ಟ್‌ ನಿರ್ದೇಶನದಂತೆ ನಗರದಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದರು. ಜಾಹೀರಾತು ಫಲಕ ಅಳವಡಿಸಲು ನಿರ್ಮಿಸಿದ ಲೋಹದ ಚೌಕಟ್ಟುಗಳನ್ನು ಸ್ವತ್ತಿನ ಮಾಲೀಕರು ಸೆ.6ರ ಒಳಗೆ ತೆರವುಗೊಳಿಸಬೇಕು ಎಂದು ಪಾಲಿಕೆ ಸೂಚಿಸಿತ್ತು. ಈ ಗಡುವು ಮುಗಿದ ಬಳಿಕವೂ ತೆರವುಗೊಳಿಸದವರ ವಿರುದ್ಧ ಪಾಲಿಕೆ ಪ್ರಕರಣ ದಾಖಲಿಸುತ್ತಿದೆ.  

ಮೈಸೂರು ರಸ್ತೆಯ ಪಂತರಪಾಳ್ಯದ ಬಳಿ ಸಚಿವ ಶಿವಕುಮಾರ್‌ ಅವರಿಗೆ ಸೇರಿದ ಜಾಗದಲ್ಲಿರುವ ಲೋಹದ ಚೌಕಟ್ಟು ತೆರವುಗೊಳಿಸದ ಬಗ್ಗೆ ರಾಜರಾಜೇಶ್ವರಿ ನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್‌ ಅವರು ಬ್ಯಾಟರಾಯನಪುರ ಪೊಲೀಸ್‌ ಠಾಣೆಗೆ ಸೆ. 24ರಂದು ದೂರು ನೀಡಿದ್ದರು.

ಈ ಪ್ರಕರಣದ ತನಿಖೆಯನ್ನು 29ರಂದೇ ಪೂರ್ಣಗೊಳಿಸಿರುವ ಬ್ಯಾಟರಾಯನಪುರದ ಪೊಲೀಸರು, ‘ಆರೋಪ ಸಾಬೀತುಪಡಿಸುವ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಶಿವಕುಮಾರ್‌ ನಿರಪರಾಧಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ದೂರುದಾರರು ಸಹ ಆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ’ ಎಂದು ವರದಿ ಸಿದ್ಧಪಡಿಸಿದ್ದಾರೆ. ಆ ವರದಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್‌ ಪರಿಶೀಲನೆ ನಡೆಸುತ್ತಿದ್ದು, ಅವರ ಅನುಮತಿ ಸಿಗುತ್ತಿದ್ದಂತೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಇದೊಂದು ಸಣ್ಣ ಪ್ರಕರಣ. ಮೊದಲ ದಿನ ದೂರು ಕೊಟ್ಟಿದ್ದವರೇ, ಮರುದಿನ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.  ಅದನ್ನು ಆಧರಿಸಿ ಕಾನೂನು ಪ್ರಕಾರವೇ ಬಿ–ರಿಪೋರ್ಟ್‌ ಸಿದ್ಧಪಡಿಸಿದ್ದೇವೆ. ಅದರ ಸಲ್ಲಿಕೆಯಷ್ಟೇ ಬಾಕಿಯಿದೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೌಕಟ್ಟು ತೆಗೆದಿಲ್ಲವೆಂದು ದೂರು ಕೊಟ್ಟಿದ್ದೆ. ಅಂದೇ ತೆರವು ಮಾಡಿದ್ದರಿಂದ, ಮರುಹೇಳಿಕೆ ಕೊಟ್ಟೆ. ಆ ಬಳಿಕವೇ ಪೊಲೀಸರು, ಬಿ–ರಿಪೋರ್ಟ್‌ ಹಾಕಿದ್ದಾರೆ. ಯಾರೊಬ್ಬರೂ ನನ್ನ ಮೇಲೆ ಒತ್ತಡ ಬೀರಿಲ್ಲ’ ಎಂದು ದೂರುದಾರ ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲ್ಲೇಶ್ವರದಲ್ಲಿ ಬಿಎಂಟಿಸಿ ಒಡೆತನದ ಜಾಗದಲ್ಲಿ ಅಳವಡಿಸಿದ್ದ ಜಾಹೀರಾತು ಚೌಕಟ್ಟುಗಳನ್ನು ತೆರವುಗೊಳಿಸದ ಆರೋಪದಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸೆಪ್ಟೆಂಬರ್ 22ರಂದು ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲೇ ಇದೆ. 

***

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಮೇಲ್ವಿಚಾರಣೆ ಮಾಡುವಂತೆ ಡಿಸಿಪಿ ರವಿ ಚನ್ನಣ್ಣನವರ ಅವರಿಗೆ ಸೂಚಿಸಿದ್ದೇನೆ

-ಟಿ.ಸುನೀಲ್‌ಕುಮಾರ್, ನಗರ ಪೊಲೀಸ್ ಕಮಿಷನರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !