ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೇ ವಂಚನೆ; ಶಾಸಕರ ವಿರುದ್ಧ ಎಫ್ಐಆರ್‌

ಏಳು ಹಾಲಿ, ಒಬ್ಬರು ಮಾಜಿ ಸದಸ್ಯರ ವಿರುದ್ಧ ಪ್ರಕರಣ * ನಕಲಿ ಬಿಲ್ ಕೊಟ್ಟು ಭತ್ಯೆ ಪಡೆದ ಆರೋಪ
Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ತಪ್ಪು ವಿಳಾಸ ಕೊಟ್ಟು ಮತದಾನದ ಹಕ್ಕನ್ನು ಬದಲಿಸಿಕೊಂಡಿದ್ದ ಹಾಗೂ ನಕಲಿ ಬಿಲ್‌ ಸಲ್ಲಿಸಿ ಹೆಚ್ಚುವರಿ ಭತ್ಯೆಗಳನ್ನು ಪಡೆಯುವ ಮೂಲಕ ಸರ್ಕಾರಕ್ಕೇ ವಂಚಿಸಿದ್ದ ಆರೋಪಗಳಡಿ ವಿಧಾನಪರಿಷತ್‌ನ ಏಳು ಹಾಲಿ ಸದಸ್ಯರು ಹಾಗೂ ಒಬ್ಬರು ಮಾಜಿ ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಸದಸ್ಯರ ವಿರುದ್ಧ ರಾಯಚೂರಿನ ಆರ್‌.ಜೆ.ಎಚ್. ರಾಮಣ್ಣ ಎಂಬುವರು ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ‘ಸೂಕ್ತ ರೀತಿ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ವಿಧಾನಸೌಧ ಪೊಲೀಸರಿಗೆ ನಿರ್ದೇಶಿಸಿದೆ.

ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಪರಿಷತ್ತಿನ ಸದಸ್ಯರಾದ ಕಾಂಗ್ರೆಸ್‌ನ ಎಸ್‌.ರವಿ, ರಘು ಆಚಾರ್,ಆರ್.ಬಿ.ತಿಮ್ಮಾಪೂರ, ಎನ್‌.ಎಸ್.ಬೋಸರಾಜು, ಅಲ್ಲಂ ವೀರಭದ್ರಪ್ಪ, ಜೆಡಿಎಸ್‌ನ ಎನ್.ಅಪ್ಪಾಜಿಗೌಡ, ಸಿ.ಆರ್.ಮನೋಹರ್ ಹಾಗೂ ಎಂ.ಡಿ.ಲಕ್ಷ್ಮಿನಾರಾಯಣ್ (ನಿವೃತ್ತರಾಗಿದ್ದಾರೆ) ವಿರುದ್ಧ ವಂಚನೆ (ಐಪಿಸಿ 420), ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು (177), ಅಪರಾಧದ ಉದ್ದೇಶದಿಂದ ಗುಂಪುಗೂಡುವುದು (149) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ಸೋಮವಾರ ರಾತ್ರಿ ಎಫ್‌ಐಆರ್ ಮಾಡಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಗೆ ಒಳಗಾಗಿ ಕೆಲವರು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೆ ಕೆಲವರು ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ. ‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜನಪ್ರತಿನಿಧಿ ಕಾಯ್ದೆಯಡಿ ಇಂಥ ಪ್ರಕರಣ ವರದಿಯಾಗಿದೆ. ಹೀಗಾಗಿ, ಕಾನೂನು ತಜ್ಞರ ಸಲಹೆ ಕೋರಿದ್ದೇವೆ. ಸದಸ್ಯರಿಗೆ ಕೋರ್ಟ್ ಆದೇಶದ ಪ್ರತಿಯ ಸಮೇತ ನೋಟಿಸ್ ಕಳುಹಿಸಲಿದ್ದೇವೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ಏನಿದು ಪ್ರಕರಣ: 2016ರ ಬಿಬಿಎಂಪಿ ಚುನಾವಣೆಯಲ್ಲಿ ಮೇಯರ್, ಉಪಮೇಯರ್ ಸ್ಥಾನಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಎಂಟು ಎಂಎಲ್‌ಸಿಗಳು ತಾವು ಬಿಬಿಎಂಪಿ ವ್ಯಾಪ್ತಿಯಲ್ಲೇ ನೆಲೆಸಿರುವುದಾಗಿ ಚುನಾವಣಾ ಅಧಿಕಾರಿಗಳಿಗೆ ಸುಳ್ಳು ವಿಳಾಸ ನೀಡಿ ಮತದಾನ ಮಾಡಿರುವುದಾಗಿ ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದರು. ನಂತರದ ದಿನಗಳಲ್ಲಿ ಈ ಸದಸ್ಯರು ‘ನಾವು ವಿಧಾನಸೌಧದ ಕಲಾಪಗಳಿಗೆ ತವರು ಕ್ಷೇತ್ರಗಳಿಂದ ಬರುತ್ತಿದ್ದೇವೆ’ ಎಂದು ಬಿಲ್ ಕೊಟ್ಟು ಪ್ರಯಾಣ ಹಾಗೂ ಇತರೆ ಭತ್ಯೆಗಳನ್ನು ಪಡೆದುಕೊಂಡಿದ್ದು ವಿವಾದ ಸೃಷ್ಟಿಸಿತ್ತು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಪದ್ಮನಾಭರೆಡ್ಡಿ, ‘ಎಂಟು ಮಂದಿಯ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ, ರಾಜ್ಯ ಚುನಾವಣಾ ಆಯೋಗಕ್ಕೆ ಹಾಗೂ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೆ. ಮೇಲ್ನೋಟಕ್ಕೆ ಅಕ್ರಮ ಸಾಬೀತಾಗಿರುವುದಾಗಿ ಬಿಬಿಎಂಪಿ ಆಯುಕ್ತರು ಸಹ ಚುನಾವಣಾ ಆಯುಕ್ತರಿಗೆ ವರದಿ ಕೊಟ್ಟಿದ್ದರು. ಆ ನಂತರ ಯಾವುದೇ ಕ್ರಮವಾಗಲಿಲ್ಲ’ ಎಂದು ಹೇಳಿದರು.

ಚುನಾವಣಾ ಆಯುಕ್ತರು ಆಗಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಅಕ್ರಮದ ವರದಿ ಕೊಟ್ಟಿದ್ದರು. ಸದಸ್ಯರಿಂದ ವಿವರಣೆ ಪಡೆದಿದ್ದ ಅವರು, ‘‍ಸದಸ್ಯರು ನೈತಿಕವಾಗಿ ತಪ್ಪು ಮಾಡಿದ್ದಾರೆ. ಆದರೆ, ಶಿಕ್ಷೆ ಕೊಡುವ ಅಧಿಕಾರ ನನಗಿಲ್ಲ’ ಎಂದು ಹೇಳಿ ಈ ಪ್ರಕರಣದಿಂದ ಹಿಂದೆ ಸರಿದಿದ್ದರು ಎಂದು ಮೂಲಗಳು ಹೇಳಿವೆ.

ಇದೀಗ ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ರಾಯಚೂರಿನ ರಾಮಣ್ಣ, ಕೋರ್ಟ್‌ ಮೊರೆ ಹೋಗಿದ್ದಾರೆ. ‘ತನಿಖೆ ನಡೆಯಲಿ. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಕೆಲ ಸದಸ್ಯರು ಹೇಳಿದ್ದಾರೆ.

ಐದು ವರ್ಷದಲ್ಲಿ ₹ 235 ಕೋಟಿ ಭತ್ಯೆ!

ಆರ್‌ಟಿಐ ಮಾಹಿತಿ ಪ್ರಕಾರ 2013ರ ಮೇ ನಿಂದ 2018ರ ಏಪ್ರಿಲ್‌ವರೆಗೆ ವಿಧಾನಸಭಾ ಸದಸ್ಯರಿಗೆ ₹ 203 ಕೋಟಿ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ₹ 32.78 ಕೋಟಿಯನ್ನು ಸರ್ಕಾರ ಭತ್ಯೆ ರೂಪದಲ್ಲಿ ನೀಡಿದೆ.

ಬಂಧಿಸಲು ಅವಕಾಶವಿದೆ

‘ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಾದರೆ ಸಭಾಪತಿಗಳೇ ಕ್ರಮ ಜರುಗಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ಗಳು ಸಹ ಇರುವುದರಿಂದ ಪೊಲೀಸರಿಗೆ ಬಂಧಿಸಲು ಅವಕಾಶವಿದೆ. ಸದಸ್ಯತ್ವ ರದ್ದಾಗುವ ಸಾಧ್ಯತೆ ಕಡಿಮೆ’ ಎಂದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅಭಿಪ್ರಾಯಪಟ್ಟರು.

***

ಇದೊಂದು ಆಧಾರರಹಿತ ಆರೋಪ. ರಾಜಕೀಯ ದ್ವೇಷದಿಂದ ಈ ರೀತಿ ಮಾಡಲಾಗಿದೆ. ನಾನು ಸದ್ಯ ತೆಲಂಗಾಣದಲ್ಲಿದ್ದು, ನಗರಕ್ಕೆ ಬಂದ ನಂತರ ದೂರು ಪರಿಶೀಲಿಸಿ ಪ್ರತಿಕ್ರಿಯಿಸುತ್ತೇನೆ

ಎನ್‌.ಎಸ್.ಬೋಸರಾಜ್,ವಿಧಾನ ಪರಿಷತ್ ಸದಸ್ಯರು

***

ಪಡೆದಿರುವ ಭತ್ಯೆ ವಿವರ (ಬಿಬಿಎಂಪಿ ಆಯುಕ್ತರ ವರದಿ ಪ್ರಕಾರ)

ಹೆಸರು - ಸ್ವ–ಕ್ಷೇತ್ರ - ಪ್ರಯಾಣದ ಅಂತರ - ಪಡೆದ ಭತ್ಯೆ

ಅಲ್ಲಂ ವೀರಭದ್ರಪ್ಪ - ಬಳ್ಳಾರಿ - 306 ಕಿ.ಮೀ - ₹3,20,700

ಆರ್‌.ಬಿ.ತಿಮ್ಮಾಪುರ - ಬಾಗಲಕೋಟೆ - 538 ಕಿ.ಮೀ - ₹5,51,500

ರಘು ಆಚಾರ್ - ಚಿತ್ರದುರ್ಗ - 202 ಕಿ.ಮೀ - ₹1,01,500

ಎಂ.ಡಿ.ಲಕ್ಷ್ಮಿನಾರಾಯಣ - ತುರುವೆಕೆರೆ - 129 ಕಿ.ಮೀ - ₹4,46,400

ಎನ್‌.ಎಸ್.ಬೋಸರಾಜು - ರಾಯಚೂರು - 476 ಕಿ.ಮೀ - ₹ 7,38,500‌

ಎಸ್.ರವಿ;ರಾಮನಗರ - 62 ಕಿ.ಮೀ - ₹2,36,050

ಸಿ.ಆರ್.ಮನೋಹರ್ - ಕೋಲಾರ - 95 ಕಿ.ಮೀ - ₹1,31,250

ಅಪ್ಪಾಜಿಗೌಡ - ಮಂಡ್ಯ - 112 ಕಿ.ಮೀ - ₹5,24,200

ಒಟ್ಟು - ₹30,50,100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT