ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ 3 ಗಂಟೆ ರೋಡ್‌ ಷೋ

ಮೈಸೂರು: ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ
Last Updated 6 ಮೇ 2018, 12:41 IST
ಅಕ್ಷರ ಗಾತ್ರ

ಮೈಸೂರು: ಮೋದಿ... ಮೋದಿ, ಭಾರತ್ ಮಾತಾಕೀ ಜೈ, ಬಿಜೆಪಿಗೆ ಜಯವಾಗಲಿ... ಎಂಬ ಘೋಷಣೆ, ಕಲಾ ತಂಡಗಳ ವೈಭವ, ಪಟಾಕಿ ಹಾಗೂ ಸಂಗೀತದ ಅಬ್ಬರದ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮೈಸೂರಿನಲ್ಲಿ ಶನಿವಾರ ಸಂಚಲನ ಮೂಡಿಸಿದರು.

ನರಸಿಂಹರಾಜ, ಚಾಮರಾಜ ಮತ್ತು ಕೃಷ್ಣರಾಜ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡ ಅವರು ಸುಮಾರು ಮೂರು ತಾಸಿಗೂ ಅಧಿಕ ಸಮಯ ರೋಡ್‌ ಷೋ ನಡೆಸಿ ಮತಯಾಚಿಸಿದರು.

ಬೆಳಿಗ್ಗೆ ತಿ.ನರಸೀಪುರ ಮತ್ತು ಪಿರಿಯಾಪಟ್ಟಣದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು ಸಂಜೆ ನಗರಕ್ಕೆ ಬಂದರು. ಮೊದಲು ಎನ್‌.ಆರ್‌.ಕ್ಷೇತ್ರದ ಅಭ್ಯರ್ಥಿ ಸಂದೇಶ್‌ ಸ್ವಾಮಿ ಪರ ಮತಯಾಚಿಸಿದರು. ಹಳೆ ಕೆಸರೆಯ ರಾಜೇಂದ್ರನಗರದಲ್ಲಿ ಸಂಜೆ 5.30 ಸುಮಾರಿಗೆ ರೋಡ್‌ ಷೋಗೆ ಚಾಲನೆ ಲಭಿಸಿತು. ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿದ್ದ ಬೆಂಬಲಿಗರು ಪಕ್ಷದ ಬಾವುಟ ಹಾರಿಸುತ್ತಾ ಪ್ರಚಾರ ವಾಹನದ ಜೊತೆ ಹೆಜ್ಜೆಯಿಟ್ಟರು. ಮೋದಿ ಮತ್ತು ಶಾ ಅವರ ಬೃಹತ್‌ ಗಾತ್ರದ ಕಟೌಟ್‌ಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.

‘ನಿಮ್ಮ ಮನೆ ಬಾಗಿಲಿಗೆ ಶಾ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು, ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರನ್ನು ಬೆಂಬಲಿಸಿ’ ಎಂದು ಸಂಸದ ಪ್ರತಾಪಸಿಂಹ ಮೈಕ್‌ ಹಿಡಿದು ಮನವಿ ಮಾಡುತ್ತಿದ್ದರು.

ರಾಜೇಂದ್ರನಗರ ಮುಖ್ಯರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಿವಾಜಿ ರಸ್ತೆಯ ಮೂಲಕ ಫೌಂಟೇನ್‌ ವೃತ್ತಕ್ಕೆ ರೋಡ್‌ ಷೋ ತಲುಪಿದಾಗ ಇನ್ನಷ್ಟು ಮಂದಿ ಸೇರಿಕೊಂಡರು.

ಎರಡನೇ ಹಂತದಲ್ಲಿ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಎಲ್‌.ನಾಗೇಂದ್ರ ಪರ ಪ್ರಚಾರ ನಡೆಸಿದರು. ಫೌಂಟೇನ್‌ ವೃತ್ತದಿಂದ ಅಶೋಕ ರಸ್ತೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ರೋಡ್‌ ಷೋ ನಡೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶಾ ಭಾಷಣ ಮಾಡಲಿದ್ದಾರೆ ಎಂದು ಧ್ವನಿವರ್ಧಕದಲ್ಲಿ ಮೇಲಿಂದ ಮೇಲೆ ಪ್ರಕಟಿಸುತ್ತಿದ್ದರು. ಆದರೆ, ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿದೊಡನೆ ಶಾ ಅವರು ಪ್ರಚಾರ ವಾಹನದಿಂದ ಇಳಿದು ತಮ್ಮ ವಾಹನದಲ್ಲಿ ಕೃಷ್ಣರಾಜ ಕ್ಷೇತ್ರದ ಪ್ರಚಾರಕ್ಕೆ ತೆರಳಿದರು.

ಬಿಜೆಪಿ ಅಧ್ಯಕ್ಷರು ಮೆರವಣಿಗೆ ಯುದ್ದಕ್ಕೂ ಮಂದಹಾಸ ಬೀರುತ್ತಾ ಅಭಿಮಾನಿಗಳತ್ತ ಕೈಬೀಸಿದರು. ಗೆಲುವಿನ ಚಿಹ್ನೆ ತೋರಿಸಿ ನಗು ಬೀರಿದರು. ಅಭಿಮಾನಿಗಳು ಹೂಗಳ ಸುರಿಮಳೆಗೈಯುತ್ತಿದ್ದರೆ, ಪ್ರಚಾರ ವಾಹನದಲ್ಲಿ ರಾಶಿಬಿದ್ದ ಹೂಗಳನ್ನು ಶಾ ಅವರು ಅಭಿಮಾನಿಗಳ ಮೇಲೆ ಎಸೆದರು.

ಕೃಷ್ಣರಾಜದಲ್ಲಿ ಪ್ರಚಾರ: ಕೊನೆಯ ಹಂತದಲ್ಲಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಎಸ್‌.ಎ.ರಾಮದಾಸ್‌ ಪರ ಮತಯಾಚಿಸಿದರು.  ಶಾ ಅವರನ್ನು ಸ್ವಾಗತಿಸಲು ರಾಮದಾಸ್‌ ಹಾಗೂ ಕಾರ್ಯಕರ್ತರು ನಾರಾಯಣ ಶಾಸ್ತ್ರಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠ ಬಳಿ ಸೇರಿದ್ದರು. ಆದರೆ, ಶಾ ಅವರಿದ್ದ ತೆರೆದ ವಾಹನವು ಶಾಂತಲಾ ಥಿಯೇಟರ್‌ನಿಂದ ಹೊರಟಿತು. ಆಗ ತುಸು ಗೊಂದಲ ಉಂಟಾಯಿತು. ಮಠದ ಬಳಿ ಇದ್ದ ರಾಮದಾಸ್‌ ಅವರನ್ನು ಕರೆಯುವಂತೆ ಕಾರ್ಯಕರ್ತರು ಒತ್ತಾಯಿಸಿದರು. ಬಳಿಕ ರಾಮದಾಸ್‌ ವಾಹನ ಏರಿದರು

ವಾಹನವು ನಂಜುಮಳಿಗೆ ವೃತ್ತ, ಚಾಮುಂಡಿಪುರಂ ವೃತ್ತದ ಮೂಲಕ ವಿದ್ಯಾರಣ್ಯಪುರಂನ ಭೂತಾಳೆ ಪಿಚ್‌ ಬಂತು. ಇಕ್ಕೆಲಗಳಲ್ಲಿ ಸೇರಿದ್ದ ಜನರು ಪುಷ್ಪಾರ್ಚನೆ ಮೂಲಕ ಶಾ ಅವರನ್ನು ಬರಮಾಡಿಕೊಂಡರು. ಕೆಲವರು ಮಹಡಿ, ಬಾಲ್ಕನಿಯಿಂದ ವಾಹನದತ್ತ ಹೂವು ಎಸೆದರು.

ಚಾಮುಂಡಿಪುರಂ ವೃತ್ತದ ಬಳಿ ಬಿ.ವೈ.ವಿಜಯೇಂದ್ರ ಅವರು ವಾಹನವೇರಿ ಅಮಿತ್‌ ಶಾ ಪಕ್ಕ ನಿಂತುಕೊಂಡರು. ಭೂತಾಳೆ ಪಿಚ್‌ನಲ್ಲಿ ವಾಹನ ನಿಲ್ಲಿಸಿ ಭಾಷಣ ಮಾಡಿದರು. ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದರು. 

ಮೆರುಗು ನೀಡಿದ ಕಲಾತಂಡಗಳು: ವಿವಿಧ ಕಲಾ ತಂಡಗಳು ರೋಡ್‌ ಷೋ ಮೆರುಗು ಹೆಚ್ಚಿಸಿದವು. ಗೊರವರ ಕುಣಿತ, ಡೊಳ್ಳು ಕುಣಿತದ ತಂಡಗಳು ಸಾಥ್‌ ನೀಡಿದವು. ಮೆರವಣಿಗೆಯ ಮುಂಭಾಗದಲ್ಲಿದ್ದ ವಾಹನದಲ್ಲಿ ಕಿವಿಗಡಚಿಕ್ಕುವ ಸಂಗೀತ ಕೇಳಿಬರುತ್ತಿದ್ದರೆ, ಯುವಕರು ನೃತ್ಯದ ಮೂಲಕ ರಂಜಿಸಿದರು.

ಸಂಸದ ಪ್ರತಾಪಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ಎಚ್‌.ಮಂಜುನಾಥ್‌ ಮತ್ತು ಸ್ಥಳೀಯ ಮುಖಂಡರು ಪಾಲ್ಗೊಂಡರು.

‘ರಾಜ್ಯವನ್ನು ನಂಬರ್ 1 ಆಗಿಸುವ ಸಂಕಲ್ಪ’

ಮೈಸೂರು: ‘ರಾಜ್ಯದ ಎಲ್ಲಾ ಕಡೆ ಓಡಾಡುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಸುನಾಮಿ ಎದ್ದಿದೆ. ಮೇ 15ಕ್ಕೆ ಸಿದ್ದರಾಮಯ್ಯ ಸರ್ಕಾರ ಹೋಗಿ ಯಡಿಯೂರಪ್ಪ ಸರ್ಕಾರ ಬರಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಶನಿವಾರ ಹೇಳಿದರು. ‘ರಾಜ್ಯವನ್ನು ದೇಶದಲ್ಲೇ ನಂಬರ್‌ ಒನ್‌ ಆಗಿಸುವ ಸಂಕಲ್ಪ ಕೈಗೊಂಡಿದ್ದೇವೆ. ನೀವು ಕೂಡ ಬಿಜೆಪಿ ಗೆಲುವಿಗೆ ಸಂಕಲ್ಪ ಮಾಡಿ. ಮೈಸೂರು ಭಾಗದಲ್ಲಿ ಪಕ್ಷವು 20 ಸ್ಥಾನ ಗೆಲ್ಲಲಿದೆ’ ಎಂದರು.

ಬಿಗಿ ಬಂದೋಬಸ್ತ್‌

ರೋಡ್‌ ಷೋ ಸಾಗಿದ ಹಾದಿಯಲ್ಲಿ ಕೆಲವು ಸೂಕ್ಷ್ಮಪ್ರದೇಶಗಳು ಇದ್ದ ಕಾರಣ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ವಾಹನ ಇಕ್ಕೆಲಗಳಲ್ಲಿ ಭದ್ರತಾ ಸಿಬ್ಬಂದಿ ಗನ್‌ ಹಿಡಿದು ಸಾಗಿದರು. ಅಶೋಕ ರಸ್ತೆಯಲ್ಲಿ ಫೌಂಟೇನ್‌ ವೃತ್ತದಿಂದ ನೆಹರೂ ವೃತ್ತದವರೆಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಅಶೋಕ ರಸ್ತೆಯ ಮಸ್ಜಿದ್‌–ಎ–ಅಜಂ ಮುಂಭಾಗದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಭದ್ರಕೋಟೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT