ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಅವಘಡ: ಕಣ್ಣಿಗೆ ಗಾಯವಾದವರಿಗೆ ವಿಶೇಷ ವಾರ್ಡ್‌

ದಿನ ಪೂರ್ತಿ ಸೇವೆಗೆ ಸಜ್ಜಾದ ಮಿಂಟೊ ಆಸ್ಪತ್ರೆ
Last Updated 27 ಅಕ್ಟೋಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ದೀಪಾವಳಿಹಬ್ಬದ ನಿಮಿತ್ತ ಕಣ್ಣಿಗೆ ಗಾಯಮಾಡಿಕೊಂಡು ಬರುವ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಆರಂಭಿಸಲಿದ್ದೇವೆ. 18ರಿಂದ 20 ವೈದ್ಯರು ಸೇರಿದಂತೆ ನರ್ಸ್ ಹಾಗೂ ತಂತ್ರಜ್ಞರು ಕೂಡ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್ ತಿಳಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರಿಗಾಗಿ ಪ್ರತ್ಯೇಕ ವಾರ್ಡ್ ಸೌಲಭ್ಯ ಕಲ್ಪಿಸಲಾಗುವುದು. ಗಾಯಾಳುಗಳಿಗೆಹಬ್ಬದ ನಿಮಿತ್ತ ದಿನದ 24 ಗಂಟೆಯೂ ಚಿಕಿತ್ಸೆ ನೀಡಲಿದ್ದೇವೆ’ ಎಂದರು.

ರಜೆ ಇಲ್ಲ: ‘ನವೆಂಬರ್ ಮೊದಲ ವಾರದಿಂದಲೇ ಎಲ್ಲ ವೈದ್ಯರು, ನರ್ಸ್‌ಗಳು, ತಂತ್ರಜ್ಞರು ಹಾಗೂ ಸಿಬ್ಬಂದಿಗೆ ರಜೆ ಪಡೆಯದಂತೆ ಸೂಚಿಸಲಾಗಿದೆ. ಹಬ್ಬ ಮುಗಿಯುವ ತನಕ ಎಲ್ಲ ಸಿಬ್ಬಂದಿ ಆಸ್ಪತ್ರೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಔಷಧಿ, ಶಸ್ತ್ರ ಚಿಕಿತ್ಸೆ ಉಪಕರಣಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ. ಗಾಯಾಳುಗಳಿಗೆ ಯಾವುದೇ ಸಮಯದಲ್ಲೂ ಚಿಕಿತ್ಸೆ ನೀಡಲು ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಕಳೆದ ವರ್ಷ 65 ಮಂದಿಗೆ ಚಿಕಿತ್ಸೆ: ‘ಕಳೆದ ವರ್ಷವೈದ್ಯರು, ಪಟಾಕಿಯಿಂದ ಕಣ್ಣು ಹಾನಿ ಮಾಡಿಕೊಂಡ 65 ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡವರಲ್ಲಿ 10 ರಿಂದ 14 ವರ್ಷದ ಬಾಲಕರೇ ಹೆಚ್ಚಾಗಿದ್ದರು. 29 ಮಂದಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಹಾನಿಗೊಳಗಾಗಿದ್ದ 16 ಮಂದಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಉಳಿದವರು ಸಣ್ಣ-ಪುಟ್ಟ ಗಾಯ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದರು’ ಎಂದು ತಿಳಿಸಿದರು.

‘ಹೆಲ್ಮೆಟ್ ಧರಿಸಿಯೇ ಪಟಾಕಿ ಹಚ್ಚಿ’

‘ಮಕ್ಕಳು ರಾಕೆಟ್, ಹೂಕುಂಡ ಹಾಗೂ ಬಾಂಬ್‌ ಪಟಾಕಿಗಳನ್ನು ಹಚ್ಚಬಾರದು. ಪಾಲಕರ ಜೊತೆ ಸೇರಿಯೆ ಚಿಕ್ಕ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಬೇಕು. ಪಟಾಕಿ ಹಚ್ಚಲು ಹೆಲ್ಮೆಟ್ ಧರಿಸಬೇಕು’ ಎಂದು ವೈದ್ಯರು ಸಲಹೆ ನೀಡಿದರು.

‘ಜನ ವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದರಿಂದನೆರೆಹೊರೆಯವರಿಗೆ ತೊಂದರೆಯಾಗುವುದರಿಂದ ಬಯಲು ಪ್ರದೇಶಗಳಲ್ಲಿ ಪಟಾಕಿ ಸಿಡಿಸಬೇಕು. ರಾಕೆಟ್ ಹಚ್ಚುವ ವೇಳೆ ಎಚ್ಚರದಿಂದ ಇರಬೇಕು’ ಎಂದರು.

ನೆರವಿಗೆ ಸಹಾಯವಾಣಿ

ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಗಾಯ ಮಾಡಿಕೊಂಡವರಿಗೆ ಮಾಹಿತಿ ನೀಡಲು ಆಸ್ಪತ್ರೆಯಲ್ಲಿ ‘ಹೆಲ್ಪ್‌ಲೈನ್’ ಸೇವೆ ಆರಂಭಿಸಲಾಗಿದೆ. ದಿನದ 24 ಗಂಟೆಯೂ ಕರೆ ಮಾಡಬಹುದಾಗಿದೆ.

ಸಹಾಯವಾಣಿ ಸಂಖ್ಯೆ: 080–26701646,

ಕಣ್ಣಿನ ಬ್ಯಾಂಕ್: 948 1740137

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT