ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಗ್ರಾಮವಾಸ್ತವ್ಯಕ್ಕೆ ಪ್ರೇರಣೆ ನೀಡಿದ್ದು ಅಥಣಿ

ಮೊದಲು ತಂಗಿದ್ದು ನಾಗನೂರು ಪಿ.ಕೆ. ಗ್ರಾಮದಲ್ಲಿ
Last Updated 2 ಜೂನ್ 2019, 16:03 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಅವರು ಈ ಹಿಂದೆ ಗ್ರಾಮವಾಸ್ತವ್ಯ ಮಾಡಲು ಪ್ರೇರಣೆಯಾಗಿದ್ದು ಜಿಲ್ಲೆಯ ಅಥಣಿ ಎನ್ನುವುದು ವಿಶೇಷ. ಅವರು ಮೊದಲು ವಾಸ್ತವ್ಯ ಮಾಡಿದ್ದು ಆ ತಾಲ್ಲೂಕಿನ ನಾಗನೂರು ಪಿ.ಕೆ. ಗ್ರಾಮದಲ್ಲಿ.

ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಅವರು, 2006ರಲ್ಲಿ ಕೃಷ್ಣಾ ನದಿಯಲ್ಲಿ ಬಂದ ಪ್ರವಾಹದಿಂದ ಉಂಟಾಗಿದ್ದ ಪರಿಸ್ಥಿತಿ ವೀಕ್ಷಿಸಲು ಬಂದಾಗ ಗ್ರಾಮವಾಸ್ತವ್ಯ ಕಾರ್ಯಕ್ರಮ ಮೊಳೆಯಿತು ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.

ಆಗ ಜಿಲ್ಲೆಯ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಸಹಸ್ರಾರು ಜನ ಸಂತ್ರಸ್ತರಾಗಿದ್ದರು. ಅವರು ನಿರಾಶ್ರಿತರ ಹಲವು ಶಿಬಿರಗಳಿಗೆ ಭೇಟಿ ನೀಡಿ ಅಥಣಿಗೆ ಬರುವ ವೇಳೆಗೆ ಸಂಜೆಯಾಗಿತ್ತು. ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಬಗ್ಗೆ ಚರ್ಚಿಸುತ್ತಿದ್ದರು. ಆಗಿನ ಜಿಲ್ಲಾಧಿಕಾರಿ ಶಾಲಿನಿ ರಜನೀಶ್ ಬೆಳಗಾವಿಗೆ ಹೊರಡುವ ಬಗ್ಗೆ ಅವಸರ ಮಾಡುತ್ತಿದ್ದರು. ‘ಸೂರ್ಯಾಸ್ತಕ್ಕೆ ಮುನ್ನ ಹೆಲಿಕ್ಯಾಪ್ಟರ್ ಹೊರಡಬೇಕು, ಇಲ್ಲವಾದರೆ ತೊಂದರೆಯಾಗುತ್ತದೆ’ ಎನ್ನುವುದು ಆ ಅಧಿಕಾರಿಯ ಆತಂಕವಾಗಿತ್ತು. ಆಗ, ಇಲ್ಲೇ ಎಲ್ಲಾದರೂ ತಂಗಿದರಾಯಿತು ಎಂದ ಮುಖ್ಯಮಂತ್ರಿಗೆ ಅಥಣಿಯ ಆಗಿನ ಶಾಸಕ ಲಕ್ಷ್ಮಣ ಸವದಿ ‘ನಮ್ಮೂರು ನಾಗನೂರು ಪಿ.ಕೆ.ಗೆ ಹೋಗೋಣ’ ಎಂದು ಸಲಹೆ ಮಾಡಿದ್ದರು.

ಅಥಣಿ ಮತ್ತು ನಾಗನೂರು ಪಿ.ಕೆ. ನಡುವೆ ಕೃಷ್ಣಾ ನದಿ ಹರಿಯುತ್ತಿತ್ತು. ಮೂರು ಟ್ರ್ಯಾಕ್ಟರ್‌ಗಳಲ್ಲಿ ಮುಖ್ಯಮಂತ್ರಿಯೊಂದಿಗೆ ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು, ಪತ್ರಕರ್ತರು ರಾತ್ರಿ 9ಕ್ಕೆ ನಾಗನೂರು ಸೇರಿ ಅಲ್ಲಿನ ನಾಗನೂರು ಮಠದಲ್ಲಿ ತಂಗಿದರು.

ರಾತ್ರಿ 1ರವರೆಗೂ ಗ್ರಾಮಸ್ಥರೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದ ಕುಮಾರಸ್ವಾಮಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿದ್ದರು. ಬೆಳಿಗ್ಗೆ 6ರಿಂದ ಗ್ರಾಮ ಪ್ರದಕ್ಷಿಣೆ ಮಾಡಿದ್ದರು. ಬಳಿಕ ರಾಜ್ಯದಲ್ಲಿ ಎಲ್ಲೇ ಪ್ರವಾಸ ಮಾಡಿದರೂ ಹಳ್ಳಿಗಳಲ್ಲಿ ತಂಗುವುದು ಅಲ್ಲಿನ ಸಮಸ್ಯೆಗಳನ್ನು ಅರಿಯಲು ಹಾಗೂ ಪರಿಹಾರ ದೊರಕಿಸಲು ಸೂಕ್ತ ತಾಣ ಎಂದು ನಿರ್ಧರಿಸಿದರು. 20 ತಿಂಗಳಲ್ಲಿ 47 ಗ್ರಾಮಗಳಲ್ಲಿ ತಂಗಿದ್ದರು. ಸಾಲ ಮನ್ನಾ, ಸಾರಾಯಿ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಅಂಗವಿಕಲರಿಗೆ ಗೌರವಧನ, ಸ್ತ್ರೀಶಕ್ತಿ ಗುಂಪಿನ ಬಲವರ್ಧನೆ, ಸಾವಿರ ಪ್ರಾಢಶಾಲೆ ಸ್ಥಾಪನೆ ಇವೆಲ್ಲವೂ ಗ್ರಾಮವಾಸ್ತವ್ಯದಿಂದ ಹೊರಹೊಮ್ಮಿದ ಕಾರ್ಯಕ್ರಮಗಳು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದರು.

ಆದರೆ, ಆ ಗ್ರಾಮದಲ್ಲಿ ಬಳಿಕ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳೇನೂ ನಡೆದಿಲ್ಲ. ಈಗಲೂ ರಸ್ತೆ ಸರಿ ಇಲ್ಲ. ಮಳೆಗಾಲದಲ್ಲಿ ಅವು ಕೆಸರು ಗದ್ದೆಗಳಂತೆ ಆಗುತ್ತವೆ. ಬಯಲು ಬಹಿರ್ದೆಸೆ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT