ಸೈಬರ್ ಅಪರಾಧಕ್ಕೆ ರಾಜ್ಯದಲ್ಲಿ ಮೊದಲ ಶಿಕ್ಷೆ!

7

ಸೈಬರ್ ಅಪರಾಧಕ್ಕೆ ರಾಜ್ಯದಲ್ಲಿ ಮೊದಲ ಶಿಕ್ಷೆ!

Published:
Updated:

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣದ ಆರೋಪಿಗೆ ಶಿಕ್ಷೆಯಾಗಿದ್ದು, ಯುವತಿಯ ಗೌರವಕ್ಕೆ ಧಕ್ಕೆ ತಂದಿದ್ದ ಶಿವಪ್ರಸಾದ್ ಸಜ್ಜನ್ (38) ಎಂಬ ವಕೀಲ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.

ಸಜ್ಜನ್ ವಿರುದ್ಧ 2008ರಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ, ಆತನಿಗೆ ₹ 25 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಎಲ್‌ಎಲ್‌ಬಿ ಓದಿದ ಟೆಕಿ: ಮೊದಲು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದ ಬಾಗಲಕೋಟೆಯ ಸಜ್ಜನ್‌ಗೆ, ಸಹೋದ್ಯೋಗಿ ಯುವತಿ ಜತೆ ಮನಸ್ತಾಪ ಉಂಟಾಗಿತ್ತು. ಆಕೆಗೆ ಬುದ್ಧಿ ಕಲಿಸಲೆಂದು ಆತ ಅಶ್ಲೀಲ ಫೋಟೊಗಳನ್ನು ಇಂಟರ್‌ನೆಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅವುಗಳಿಗೆ ಯುವತಿಯ ಮುಖವನ್ನು ಹೊಂದಿಸಿದ್ದ. ಬಳಿಕ ಆ ಫೋಟೊಗಳನ್ನು ಸ್ನೇಹಿತರಿಗೆ ಇ–ಮೇಲ್‌ನಲ್ಲಿ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 67ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ, ಎಲ್‌ಎಲ್‌ಬಿ ಕೋರ್ಸ್‌ ಮುಗಿಸಿದ್ದ. ಬಳಿಕ ತನ್ನ ಪರವಾಗಿ ಆರೋಪಿಯೇ ವಾದ ಮಂಡಿಸಿದ್ದ. ತಾಂತ್ರಿಕ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಧೀಶರು, ಆರೋಪಿ ವಕೀಲನನ್ನು ಅಪರಾಧಿ ಎಂದು ಘೋಷಿಸಿದರು.

‘ಪ್ರಕರಣ ದಾಖಲಾದ ಹತ್ತು ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆಯಾಗಿದೆ. ಈ ಅವಧಿಯಲ್ಲಿ ಮೂವರು ತನಿಖಾಧಿಕಾರಿಗಳು ಬದಲಾಗಿದ್ದರೆ, ಇಬ್ಬರು ಅಧಿಕಾರಿಗಳು ನಿವೃತ್ತರಾಗಿದ್ದಾರೆ’ ಎಂದು ಸಿಐಡಿಯ ಸೈಬರ್ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !