ಕುಂದವಾಡ ಕೆರೆಯಲ್ಲಿ ಮೀನುಗಳ ಸಾವು; ಮಾಲಿನಗೊಂಡ ನೀರು? ಕಣ್ಮರೆಯಾದ ಪಕ್ಷಿಗಳು

ಬುಧವಾರ, ಏಪ್ರಿಲ್ 24, 2019
31 °C

ಕುಂದವಾಡ ಕೆರೆಯಲ್ಲಿ ಮೀನುಗಳ ಸಾವು; ಮಾಲಿನಗೊಂಡ ನೀರು? ಕಣ್ಮರೆಯಾದ ಪಕ್ಷಿಗಳು

Published:
Updated:
Prajavani

ದಾವಣಗೆರೆ: ಕುಂದವಾಡ ಕೆರೆಯಲ್ಲಿ ಹತ್ತು ದಿನಗಳಿಂದ ಮೀನುಗಳು ಸಾಯುತ್ತಿವೆ. ನೀರು ಕೆಟ್ಟು ವಾಸನೆ ಬೀರುತ್ತಿದ್ದು, ನಗರಕ್ಕೆ ಅಲ್ಲಿಂದ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ. ದೇಶ, ವಿದೇಶಗಳ ನೂರಾರು ಪಕ್ಷಿಗಳು ಒಮ್ಮೆಲೇ ಕಣ್ಮರೆಯಾಗಿವೆ. 

ನಗರದ ಮುಕ್ಕಾಲು ಭಾಗಕ್ಕೆ ಕುಂದವಾಡ ಕೆರೆಯಿಂದಲೇ ನೀರು ಪೂರೈಸಲಾಗುತ್ತದೆ. ಇಂತಹ ಕಡುಬೇಸಿಗೆಯಲ್ಲಿ ನೀರು ಸರಬರಾಜು ನಿಲ್ಲಿಸಿರುವುದು, ಪ್ರತಿದಿನ ಮೀನುಗಳು ಸಾಯುತ್ತಿರುವುದು, ಪಕ್ಷಿಗಳು ಮಾಯವಾಗಿರುವುದು ನಗರದ ನಾಗರಿಕರ ಹಾಗೂ ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ.

4.9 ಕಿ.ಮೀ ಸುತ್ತಳತೆಯ 265 ಎಕರೆ ವಿಸ್ತೀರ್ಣದ ಈ ಕುಂದವಾಡ ಕೆರೆ 0.2 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 3,650 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಈ ಕೆರೆಯ ನೀರನ್ನು ಪ್ರತಿ ದಿನ 20 ಮಿಲಿಯನ್‌ ಲೀಟರ್‌ನಂತೆ ನಾಲ್ಕು ತಿಂಗಳು ಬಳಕೆ ಮಾಡಬಹುದು. ಈಗ ಕೆರೆ ಅರ್ಧದಷ್ಟು ತುಂಬಿದ್ದು, ಇಡೀ ಬೇಸಿಗೆಗೆ ಆಗುವಷ್ಟು ನೀರು ಸಂಗ್ರಹಿಸಲಾಗಿತ್ತು. ಆದರೆ, ಕೆರೆ ನೀರು ಕೆಟ್ಟ ವಾಸನೆ ಸೂಸುತ್ತಿರುವುದರಿಂದ ಇಡೀ ಕೆರೆ ನೀರು ಮಲಿನಗೊಂಡಿದೆಯೇ? ಇದು ಬಳಕೆಗೆ ಯೋಗ್ಯವೇ? ಎಂಬ ಪ್ರಶ್ನೆಗಳು ನಾಗರಿಕರನ್ನು ಕಾಡುತ್ತಿವೆ.

ನೀರು ಮಲಿನಗೊಳ್ಳಲು ಕಾರಣಗಳೇನು?

ಕೆರೆಗೆ ತುಂಗಭದ್ರಾ ನದಿಯ ನೀರೇ ಆಸರೆ. ಕಾಲುವೆ ಹಾಯ್ದು ಬರುವ ನೀರಿಗೆ ಗದ್ದೆ, ಅಡಿಕೆ ತೋಟಗಳಿಗೆ ರೈತರು ಬಳಸುವ ರಸಾಯನಿಕ ಗೊಬ್ಬರ, ಔಷಧ ಎಲ್ಲವೂ ಸೇರ್ಪಡೆಯಾಗುತ್ತಿವೆ. ಈ ನೀರೇ ಕೆರೆಯಲ್ಲಿ ಬಹಳ ಕಾಲದಿಂದ ಸಂಗ್ರಹಗೊಂಡು ಮಲಿನಗೊಂಡಿರಬಹುದು. ಅಥವಾ ಕೆರೆ ಸುತ್ತ ಕೊಳಚೆ ನೀರು ಬಹಳ ದಿನಗಳಿಂದ ಸಂಗ್ರಹಗೊಂಡಿದ್ದು, ಅದು ಕೆರೆ ನೀರಿನ ಜತೆ ಸೇರಿರುವುದರಿಂದ ವಾಸನೆ ಬರುತ್ತಿರಬಹುದು ಎಂದು ಪರಿಸರಾಸಕ್ತರು ಅಂದಾಜಿಸುತ್ತಿದ್ದಾರೆ.

‘ನೀರಿನಲ್ಲಿ ರಸಾಯನಿಕ ಅಂಶ ಹೆಚ್ಚಾಗಿರುವುದರಿಂದ ಆಕ್ಸಿಜನ್‌ ಕಡಿಮೆಯಾಗಿ ಮೀನುಗಳು ಸಾಯುತ್ತಿವೆ. ಮೀನುಗಳಿಗೆ ಬೇಕಾದ ಪಾಚಿಯೂ ನಾಶವಾಗಿದೆ. ಪಕ್ಷಿಗಳಿಗೆ ಬೇಕಾದ ಆಹಾರವೂ ನೀರಿನಲ್ಲಿ ಸಿಗದಿದ್ದರಿಂದ ಕಳೆದ ಒಂದು ವಾರದ ಹಿಂದೆ ಇದ್ದಂತಹ ವಿವಿಧ ಜಾತಿಯ ನೂರಾರು ಪಕ್ಷಿಗಳು ಈಗ ದಿಢೀರ್ ಕಣ್ಮರೆಯಾಗಿವೆ’ ಎಂದು ಪಕ್ಷಿತಜ್ಞ ಪ್ರೊ.ಎಸ್‌. ಶಿಶುಪಾಲ ಆತಂಕದಿಂದ ಹೇಳಿದರು.

‘ಹತ್ತು ದಿವಸಗಳಿಂದ ಮೀನುಗಳು ಸಾಯುತ್ತಿವೆ. ನೀರು ಕಲುಷಿತಗೊಂಡಿರುವುದಕ್ಕೂ ಇರಬಹುದು ಅಥವಾ ಬಿಸಿಲಿನ ತಾಪದಿಂದಲೂ ಸಾಯುತ್ತಿರಬಹುದು. ಪಾಲಿಕೆ ತಕ್ಷಣ ನೀರು ಪರೀಕ್ಷಿಸಿ, ಶುದ್ಧಗೊಳಿಸಿ, ಮೀನಿನ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸದ್ಯಕ್ಕೆ ಕುಂದವಾಡ ಕೆರೆ ನೀರು ಬಳಕೆ ನಿಷೇಧಿಸಲಾಗಿದೆ. ಪರ್ಯಾಯವಾಗಿ ರಾಜನಹಳ್ಳಿ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತಿದೆ. ಪಕ್ಷಿಗಳಿಂದ ಕೆರೆ ನೀರು ಗಲೀಜು ಆಗಿದೆ ಎಂಬ ಮಾಹಿತಿ ಇದೆ. ನೀರಿನ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ’ ಎಂದು ಪಾಲಿಕೆ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್‌ ಮಂಜುನಾಥ ತಿಳಿಸಿದರು.  

* ನೀರು ಕೆಟ್ಟ ವಾಸನೆ ಬರುತ್ತಿದೆಂಬ ದೂರುಗಳ ಹಿನ್ನೆಲೆಯಲ್ಲಿ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಪ್ರಯೋಗಾಲಯಕ್ಕೆ ಈಗಾಗಲೇ ಕಳುಹಿಸಲಾಗಿದೆ.
–ಮಂಜುನಾಥ, ಸಹಾಯಕ ಕಾರ್ಯಪಾಲಕ ಎಂಜಿನಿಯರ್    

* ಪ್ರತಿ ದಿನ ಮೀನುಗಳು ಸಾಯುತ್ತಿವೆ ಎಂದು ಕೆರೆ ಬಳಕೆದಾರರ ಸಂಘದ ಪದಾಧಿಕಾರಿಗಳು ದೂರು ನೀಡಿದ್ದಾರೆ. ಜೀವದ ಮೀನುಗಳನ್ನು ಹಿಡಿಯಲು ಪಾಲಿಕೆ ಅವಕಾಶ ಮಾಡಿಕೊಡಬೇಕು.
–ಉಮೇಶ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !