ಶನಿವಾರ, ಸೆಪ್ಟೆಂಬರ್ 21, 2019
21 °C
ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೀನುಗಾರರ ಕುಟುಂಬ: ಚಿಂತಾಕ್ರಾಂತರಾದ ಮನೆ ಮಂದಿ

‘ಸುವರ್ಣ ತ್ರಿಭುಜ ಮುಳುಗಿದ್ದು ಅನುಮಾನ’

Published:
Updated:
Prajavani

ಕಾರವಾರ/ ಗೋಕರ್ಣ: ನಾಲ್ಕೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ದೋಣಿಯ ಅವಶೇಷಗಳು ಬುಧವಾರ ಪತ್ತೆಯಾದವು. ಆದರೆ, ಅದರಲ್ಲಿದ್ದ ಏಳು ಮೀನುಗಾರರು ಏನಾದರು ಎಂಬ ಬಗ್ಗೆ ಯಾರಿಂದಲೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಇದು ಅವರ ಕುಟುಂಬಸ್ಥರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಮನೆಗಳಲ್ಲಿ ನೀರವ ಮೌನ ಆವರಿಸಿದೆ.

ಗೋಕರ್ಣ ಸಮೀಪದ ಮಾದನಗೇರಿಯ ಮೀನುಗಾರ ಸತೀಶ ಈಶ್ವರ ಹರಿಕಂತ್ರ ಅದೇ ದೋಣಿಯಲ್ಲಿದ್ದರು. ಅದರ ಅವಶೇಷಗಳು ಪತ್ತೆಯಾದ ಸುದ್ದಿ ಕೇಳಿದ ಬಳಿಕ ಅವರ ತಂದೆ ಮತ್ತು ತಾಯಿ ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆಯಿಂದ ನೀರನ್ನೂ ಸೇವಿಸದೇ ಮಗ ಬರುವುದನ್ನೇ ಕಾಯುತ್ತಿದ್ದರು. 

ಸತೀಶ ಅವರ ತಂದೆ ಈಶ್ವರ ಲೋಕಪ್ಪ ಹರಿಕಂತ್ರ ‘ಪ್ರಜಾವಾಣಿ’ ಜತೆ ಮಾತನಾಡುತ್ತಾ, ದೋಣಿ ಮುಳುಗಿದ್ದರ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ತಮ್ಮ ಮಗ ಇನ್ನೂ ಬದುಕಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾಪತ್ತೆಯಾದ ಜಾಗದಲ್ಲೇ ದೋಣಿ ಮುಳುಗಿದ್ದರೆ ಅದರ ಅವಶೇಷ ಮೊದಲೇ ಪತ್ತೆಯಾಗಬೇಕಿತ್ತು. ಅಲ್ಲಿ ನೂರಾರು ದೋಣಿಗಳು ಸಂಚರಿಸುತ್ತವೆ. ಅಲ್ಲೇ ಎಲ್ಲ ರೀತಿಯಲ್ಲೂ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲೂ ಮುಳುಗಿದ ಕುರುಹು ಸಹ ಪತ್ತೆಯಾಗಿಲ್ಲ. ಈಗ ಅದೇ ಸ್ಥಳದಲ್ಲಿ 60 ಮೀಟರ್ ಕೆಳಗೆ ಅವಶೇಷ ಕಂಡುಬಂದಿದೆ ಎನ್ನುತ್ತಿದ್ದಾರೆ. ಹಾಗಾದರೆ ಅದರಲ್ಲಿದ್ದ ಏಳು ಜನರ ಪೈಕಿ ಒಬ್ಬರ ಕಳೇಬರವಾದರೂ ಸಿಗಬೇಕಿತ್ತು. ದೋಣಿಯ ಯಾವುದಾದರೂ ವಸ್ತು ತೇಲಿಕೊಂಡು ಬರಬೇಕಾಗಿತ್ತು’ ಎಂದರು.

‘ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಲ್ಲರೂ ಸೇರಿ ಈ ವಿಷಯವನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಇದರಲ್ಲಿ ಯಾವುದೋ ಹುನ್ನಾರ ನಡೆದಿದೆ’ ಎಂದು ಗುಮಾನಿ ವ್ಯಕ್ತಪಡಿಸಿದರು.

ಕುಮಟಾದ ಹೊಲನಗದ್ದೆಯ ಮೀನುಗಾರ ಲಕ್ಷ್ಮಣ ಅವರ ಮನೆಯಲ್ಲೂ ಇಂಥದ್ದೇ ಪರಿಸ್ಥಿತಿಯಿದೆ. ಅವರ ಸಹೋದರ ಗೋವಿಂದ ಹರಿಕಂತ್ರ, ‘ನಮಗೆ ಯಾರಿಂದಲೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಕೇವಲ ಮಾಧ್ಯಮದಲ್ಲಿ ಬಂದದ್ದಷ್ಟೇ ಗೊತ್ತಿದೆ’ ಎಂದು ಬೇಸರಿಸಿದರು.

‘ದೋಣಿಯಲ್ಲಿದ್ದವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಗೊತ್ತಿಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ. ನೌಕಾಪಡೆ, ಪೊಲೀಸ್, ಮೀನುಗಾರಿಕಾ ಇಲಾಖೆ... ಹೀಗೆ ಯಾರಿಂದಾದರೂ ಮಾಹಿತಿ ಬಂದರೆ ಅಧಿಕೃತವಾಗುತ್ತದೆ. ಆದರೆ, ಯಾರೂ ಏನೂ ಹೇಳುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ನಿ ಮೂರು ದಿನದ ಬಾಣಂತಿ: ‘ಸತೀಶನ ಪತ್ನಿ ಮೂರು ದಿನದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅವಳಿಗೆ ಆಘಾತವಾಗಬಹುದು ಎಂದು ದೋಣಿ ಮುಳುಗಿದ ವಿಷಯವನ್ನು ಇನ್ನೂ ಹೇಳಿಲ್ಲ. ಅವಳು ತವರು ಮನೆಯಲ್ಲಿದ್ದಾಳೆ. ಮಗ ನಾಪತ್ತೆಯಾಗುವಾಗ ತನ್ನ ಹೆಂಡತಿ ಗರ್ಭಿಣಿ ಎಂಬ ವಿಷಯವೂ ಗೊತ್ತಿಲ್ಲವಾಗಿತ್ತು’ ಎಂದು ಈಶ್ವರ ಲೋಕಪ್ಪ ಹರಿಕಂತ್ರ ಕಣ್ಣೀರು ಸುರಿಸಿದರು.

ಮುಖ್ಯಮಂತ್ರಿ ಜತೆ ಸಭೆ ರದ್ದು: ‘ಶುಕ್ರವಾರ ಬೆಳ್ಳಿಗೆ ಮಲ್ಪೆಯಿಂದ ಒಬ್ಬರು ಕರೆ ಮಾಡಿ ಮುಖ್ಯಮಂತ್ರಿ ಇಲ್ಲಿಯೇ ಇದ್ದಾರೆ. ಅವರ ಜತೆ ಸಭೆಯಿದೆ. ಕೂಡಲೇ ಹೊರಟು ಬನ್ನಿ ಎಂದು ತಿಳಿಸಿದ್ದರು. ನಾವು ಹೊನ್ನಾವರದ ಮಂಕಿಯವರೆಗೆ ಹೋಗಿದ್ದೆವು. ನಂತರ ಬರುವುದು ಬೇಡ, ಸಭೆ ರದ್ದಾಗಿದೆ ಎಂದು ಪುನಃ ಕರೆ ಮಾಡಿ ಹೇಳಿದರು. ನಾನು ಬೇರೆ ದಾರಿಯಿಲ್ಲದೇ ತಿರುಗಿ ಮನೆಗೆ ಬಂದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ದೋಣಿಯಲ್ಲಿದ್ದವರು: ಮಾಲೀಕ ಮಲ್ಪೆಯ ಚಂದ್ರಶೇಖರ (40), ಉಡುಪಿಯ ದಾಮೋದರ (40), ಕುಮಟಾ ತಾಲ್ಲೂಕಿನ ಹೊಲನಗದ್ದೆಯ ಲಕ್ಷ್ಮಣ (42), ಮಾದನಗೇರಿಯ ಸತೀಶ (34), ಹರೀಶ (28), ರಮೇಶ್ (30) ಹಾಗೂ ಹೊನ್ನಾವರ ತಾಲ್ಲೂಕಿನ ಮಂಕಿಯ ರವಿ (27). ಇವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Post Comments (+)