ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಜಾತ್ರೆಯ ಸಂಭ್ರಮದಲ್ಲಿ ಮೀನುಗಾರರ ಕಣ್ಮರೆಯ ನೋವು

ಭಟ್ಕಳದ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ
Last Updated 16 ಜನವರಿ 2019, 8:52 IST
ಅಕ್ಷರ ಗಾತ್ರ

ಭಟ್ಕಳ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಹಿಂದಿರುಗಲಿ ಎಂದು ತಾಲ್ಲೂಕಿನ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದಲ್ಲಿ ಮಾರಿಜಾತ್ರಾ ಮಹೋತ್ಸವವು ನಡೆಯುತ್ತಿದೆ‌. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ ವಿಶೇಷ ಪೂಜೆ ಸಲ್ಲಿಸಿ, ಮೀನುಗಾರರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾರಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ‘ಉಡುಪಿಯ ಮಲ್ಪೆಯಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈವರೆಗೂ ಅವರ ಪತ್ತೆಯಾಗಿಲ್ಲ. ಈ ಏಳು ಮಂದಿಯಲ್ಲಿ ಇಲ್ಲೇ ಸಮೀಪದ ಹರೀಶ್ ಮೊಗೇರ ಎಂಬ ಯುವಕ ಕೂಡ ಇದ್ದಾನೆ. ಇದು ಬೇಸರದ ಸಂಗತಿಯಾಗಿದ್ದು, ಅವರೆಲ್ಲ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ಹರೀಶ್, ರಜೆಯಲ್ಲಿ ಊರಿಗೆ ಬರುವವನಾಗಿದ್ದ. ಆದರೆ, ಮಾರಿಜಾತ್ರೆಗೇ ಬರುವ ಉದ್ದೇಶದಿಂದ ರಜೆ ಪಡೆದಿರಲಿಲ್ಲ’ ಎಂದು ತಿಳಿಸಿದರು.

ವಿಜೃಂಭಣೆಯಿಂದ ಆಯೋಜನೆ: ‘ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಜಾತ್ರಾ ಮಹೋತ್ಸವವು ಈ ಬಾರಿಯೂ ವಿಜೃಂಭಣೆಯಿಂದ ಆಯೋಜನೆಗೊಂಡಿದೆ. ಸಾವಿರಾರು ಭಕ್ತರೂ ಬಂದು ಪೂಜೆ, ಹರಕೆ, ಕಾಣಿಕೆ ಸಲ್ಲಿಸಿದ್ದಾರೆ. ಆದರೆ, ಇದರ ನಡುವೆ ಮೀನುಗಾರರು ನಾಪತ್ತೆಯಾಗಿರುವಸಂಗತಿ ಎಲ್ಲರನ್ನೂ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಿದೆ.

ಉಜಿರೆ ಶ್ರೀರಾಮ ಕ್ಷೇತ್ರದ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ‌ ಸಲ್ಲಿಸಿದರು.

‘ಸುವರ್ಣ ತ್ರಿಭುಜ’ ಹೆಸರಿನ ದೋಣಿಯಲ್ಲಿ ಮೀನುಗಾರಿಕೆ ಡಿಸೆಂಬರ್‌ 13ರಂದು ತೆರಳಿದ್ದ ಏಳು ಮೀನುಗಾರರು ಡಿಸೆಂಬರ್‌ 15ರ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಪೈಕಿ ಉತ್ತರ ಕನ್ನಡ ಜಿಲ್ಲೆಯ ಐದು ಮೀನುಗಾರರು ಸೇರಿದ್ದು, ಕುಟುಂಬ ಸದಸ್ಯರು ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT