ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಿನ ಮುನಿಸು: ಮೀನುಗಾರಿಕೆಗೆ ಹೊಡೆತ

ಸಂಕಷ್ಟದಲ್ಲಿ ಕರಾವಳಿಯ ಮತ್ಸ್ಯೋದ್ಯಮ; ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಮೀನುಗಾರಿಕೆ
Last Updated 11 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಹವಾಮಾನ ವೈಪರೀತ್ಯ ಕರಾವಳಿಯ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ಮೀನುಗಾರಿಕಾ ಋತು ಆರಂಭವಾಗಿ 40 ದಿನ ಕಳೆದರೂ ಪೂರ್ಣ ಪ್ರಮಾಣದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿಲ್ಲ. ಸಾವಿರಾರು ಬೋಟ್‌ಗಳು ಮಲ್ಪೆಯ ಬಂದರಿನಲ್ಲಿ ಲಂಗರು ಹಾಕಿಕೊಂಡಿವೆ.

ಸಮುದ್ರ ಪ್ರಕ್ಷುಬ್ಧ:ಯಾಂತ್ರೀಕೃತ ಮೀನುಗಾರಿಕೆಗೆ ಕಡಲು ಶಾಂತವಾಗಿರಬೇಕು. ಅಲೆಗಳ ಉಬ್ಬರ ಕಡಿಮೆ ಇರಬೇಕು. ಆದರೆ, ಈ ಬಾರಿ ವ್ಯತಿರಿಕ್ತ ವಾತಾವರಣ ಇದ್ದು, ಚಂಡಮಾರುತದ ಪ್ರಭಾವದಿಂದ ಪ್ರಕ್ಷುಬ್ಧಗೊಂಡಿರುವ ಕಡಲು ಇನ್ನೂ ಶಾಂತವಾಗಿಲ್ಲ. ಸಾಗರದಡಿ ವಿದ್ಯುತ್ ಕಾಂತೀಯ ಶಕ್ತಿಯ ಹರಿವು ಹೆಚ್ಚಾಗಿದ್ದು, ಗಾಳಿಯ ಒತ್ತಡದಿಂದ ನೀರಿನ ಸೆಳೆತ ಹೆಚ್ಚಾಗಿ ಕಡಲಿಗಿಳಿಯಲು ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ.

ಪ್ರತಿವರ್ಷ ಆ.1ರಿಂದ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗುತ್ತದೆ. ಪ್ರಕೃತಿಯ ಮುನಿಸಿನಿಂದ ಇದುವರೆಗೂ ಪೂರ್ಣ ಪ್ರಮಾಣದ ಮೀನುಗಾರಿಕೆ ಶುರುವಾಗಿಲ್ಲ. ಕೆಲವರು ಧೈರ್ಯಮಾಡಿ ಕಡಲಿಗಿಳಿದರೂ ಮೀನುಗಳು ಸಿಗುತ್ತಿಲ್ಲ. ಅಲೆಗಳ ಹೊಡೆತಕ್ಕೆ ಬಲೆಗಳು ಹರಿದು ಹೋಗುತ್ತಿವೆ. ಬರಿಗೈಲಿ ಬೋಟ್‌ಗಳು ಮರಳುತ್ತಿವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌.ಸುವರ್ಣ ಬೇಸರ ವ್ಯಕ್ತಪಡಿಸಿದರು.

ಋತುವಿನ ಮೊದಲ 2 ತಿಂಗಳು (ಆಗಸ್ಟ್‌, ಸೆಪ್ಟೆಂಬರ್‌) ಮೀನುಗಳ ಸುಗ್ಗಿ ಇರುತ್ತದೆ. ಆದರೆ, ಈ ಬಾರಿ ಮೀನಿನ ಬರ ಕಾಡುತ್ತಿದೆ. 2 ದಿನಗಳಿಂದ ಬೋಟ್‌ಗಳು ಹಂತಹಂತವಾಗಿ ಸಮುದ್ರಕ್ಕಿಳಿಯುತ್ತಿವೆ. ಮೀನು ಸಿಗದಿದ್ದರೆ ಕಡಲ ಮಕ್ಕಳ ಪರಿಸ್ಥಿತಿ ಗಂಭೀರವಾಗುತ್ತದೆ ಎನ್ನುತ್ತಾರೆ ಅವರು.

ಬಂದರಿನಲ್ಲಿ ಟ್ರಾಲ್‌, ಸಣ್ಣ ಟ್ರಾಲ್‌, ತ್ರಿಸೆವೆಂಟಿ ಸೇರಿ 2,300ಕ್ಕೂ ಹೆಚ್ಚು ಯಾಂತ್ರೀಕೃತ ಬೋಟ್‌ಗಳಿವೆ. ಜತೆಗೆ, ಜಿಲ್ಲೆಯಲ್ಲಿ 300ರಷ್ಟು ನಾಡದೋಣಿಗಳಿವೆ. ಇವುಗಳಲ್ಲಿ ಶೇ 20ರಷ್ಟು ಮಾತ್ರ ಮೀನುಗಾರಿಕೆಗೆ ಇಳಿದಿವೆ ಎಂದು ಕೃಷ್ಣ ಎಸ್‌.ಸುವರ್ಣ ಮಾಹಿತಿ ನೀಡಿದರು.

ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯಗಳ 30,000ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. ಉದ್ಯೋಗ ಇಲ್ಲದೆ ಅವರೂ ಆತಂಕದಲ್ಲಿದ್ದಾರೆ. ಬೇರೆಡೆ ವಲಸೆ ಹೋಗದಂತೆ ಅವರಿಗೆ ನಿತ್ಯ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ ಎಂದು ಬೋಟ್‌ ಮಾಲೀಕ ಹರೀಶ್‌ ಉದ್ಯಮದ ಕಷ್ಟವನ್ನು ವಿವರಿಸಿದರು.

ದೊಡ್ಡ ಟ್ರಾಲ್‌ ಬೋಟ್‌ ಒಮ್ಮೆ ಸಮುದ್ರಕ್ಕಿಳಿದಿದ್ದರೆ ಡೀಸೆಲ್‌, ಮಂಜುಗಡ್ಡೆ, ಕಾರ್ಮಿಕರ ಕೂಲಿ ಸೇರಿ ₹ 4 ಲಕ್ಷದಷ್ಟು ಖರ್ಚಾಗುತ್ತದೆ. ಬಹುತೇಕ ಮಂದಿ ಸಾಲಮಾಡಿ ಬಂಡವಾಳ ಹಾಕುತ್ತಾರೆ. ಮೀನಿನ ಬರದಿಂದ ಹಾಕಿದ ಬಂಡವಾಳ ಸಿಗದೆ ಸಾಲ ಹೆಗಲೇರಿದೆ ಎಂದು ಹರೀಶ್‌ ಬೇಸರ ವ್ಯಕ್ತಪಡಿಸಿದರು.

‘ಸಾಲ ಮರುಪಾವತಿ: ಕಾಲಾವಕಾಶ ನೀಡಿ’

ಬೋಟ್‌ ಮಾಲೀಕರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ಸಾಲ ಮರುಪಾವತಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಮೀನುಗಾರರನ್ನೂ ರೈತರಂತೆ ಕಾಣಬೇಕು ಎಂದು ಒತ್ತಾಯಿಸುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌.ಸುವರ್ಣ.

‘ದುಬಾರಿ ದರ’

ಮಾರುಕಟ್ಟೆಗೆ ಪೂರೈಕೆ ಕಡಿಮೆ ಇರುವುದರಿಂದ ಮೀನಿನ ದರ ಹೆಚ್ಚಾಗಿದೆ. ಕಳೆದವರ್ಷ ಈ ಅವಧಿಯಲ್ಲಿ ₹ 100ಕ್ಕೆ 10 ಸಿಗುತ್ತಿದ್ದ ಬಂಗುಡೆ ಈಗ 4 ಮಾತ್ರ ಸಿಗುತ್ತಿವೆ. ಪಾಂಪ್ಲೆಟ್‌ ದರ ಸಾವಿರದ ಗಡಿ ದಾಟಿದೆ. ಬಹುಬೇಡಿಕೆಯ ಬೂತಾಯಿ, ಕಾಣೆ ಕೂಡ ದುಬಾರಿಯಾಗಿವೆ. ಅಂಜಲ್‌ ಬೇಡಿಕೆಯಷ್ಟು ಸಿಗುತ್ತಿಲ್ಲ.

* ಚಂಡಮಾರುತದ ಪ್ರಭಾವದಿಂದ ಸಾಗರದ ಆಳದಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಈ ಬಾರಿ ನಿರೀಕ್ಷಿತ ಮೀನುಗಾರಿಕೆ ನಡೆದಿಲ್ಲ. ಬೋಟ್‌ಗಳು ಈಗ ಇಳಿಯುತ್ತಿವೆ

-ಗಣೇಶ್‌,ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT