ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಮುಗಿದ ಬಳಿಕ ಬರುವ ಬೆಂಬಲ ಬೆಲೆ!

ಕೃಷಿ ಬೆಲೆ ಆಯೋಗದ ಸಭೆಯಲ್ಲಿ ರೈತರ ಅಸಮಾಧಾನ
Last Updated 19 ಅಕ್ಟೋಬರ್ 2019, 11:35 IST
ಅಕ್ಷರ ಗಾತ್ರ

ಬಳ್ಳಾರಿ: ‘ಪ್ರತಿ ವರ್ಷ ಸಮರ್ಪಕ ಬೆಲೆ ಸಿಗದೆ ರೈತರು ಕಡಿಮೆ ಬೆಲೆಗೆ ಬೆಳೆಗಳನ್ನೆಲ್ಲ ಮಾರಾಟ ಮಾಡಿದ ಬಳಿಕ ಬೆಂಬಲ ಬೆಲೆ ಘೋಷಿಸುವುದು ಸರಿಯಲ್ಲ. ಬೆಳೆಗಳು ಮಾರುಕಟ್ಟೆಗೆ ಬರುವ ಹಂತದಲ್ಲೇ ಬೆಂಬಲ ಬೆಲೆ ನಿಗದಿ ಮಾಡಿ ಘೋಷಿಸಬೇಕು’ ಎಂದು ರೈತರು ಕೃಷಿ ಬೆಲೆ ಆಯೋಗದ ಅಧ್ಯಕ್ಷಹನುಮನಗೌಡ ಬೆಳಗುರ್ಕಿಯವರನ್ನು ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಗವು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರಾದ ದರೂರು ವಿ.ಎಂ.ಶಿವಶಂಕರ್, ವಿರೂಪಾಕ್ಷ, ಲಕ್ಷ್ಮಿಕಾಂತಗೌಡ ಹಾಗೂ ದರೂರು ಪುರುಷೋತ್ತಮಗೌಡ, ‘ಅತಿವೃಷ್ಠಿ, ಅನಾವೃಷ್ಠಿಯ ನಡುವೆಯೇ ಕಷ್ಟಪಟ್ಟು ಬೆಳೆಗೆಬೆಳೆಗೆ ಸರಿಯಾದ ಬೆಲೆ ಸಿಕ್ಕುವುದೋ ಇಲ್ಲವೋ ಎಂಬ ಆತಂಕವನ್ನು ದಿನವೂ ರೈತರು ಅನುಭವಿಸಿರುತ್ತಾರೆ. ಮಾರುಕಟ್ಟೆಗೆ ತರುವ ಹೊತ್ತಿನಲ್ಲೂ ಆತಂಕ ಕಡಿಮೆಯಾಗಿರುವುದಿಲ್ಲ. ನಿರೀಕ್ಷಿತ ಬೆಲೆ ದೊರಕದೇ, ವಾಪಸು ಒಯ್ಯಲಾಗದೇ ಮಾರಾಟ ಮಾಡಿದ ಬಳಿಕ ಸರ್ಕಾರವು ಬೆಂಬಲ ಬೆಲೆ ಘೋಷಿಸುವುದು ವಿಪರ್ಯಾಸ’ ಎಂದರು.

‘ಕಿರುಧಾನ್ಯ ಸಜ್ಜೆ ಪ್ರತಿ ಕ್ವಿಂಟಲ್‌ಗೆ ₹1600ರಿಂದ 1900ರವರೆಗೆ ಮಾರಾಟವಾಗುತ್ತದೆ ಎಂದು ಎಪಿಎಂಸಿ ಅಧಿಕಾರಿ ಸಭೆಗೆ ತಿಳಿಸಿದಾಗ, ಆಕ್ಷೇಪಿಸಿದ ಹನುಮನಗೌಡ, ಸಜ್ಜೆಗೆ ₹2000 ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಆದರೂ ರೈತರೂ ಕಡಿಮೆ ಬೆಲೆಗೆ ಏಕೆ ಮಾರಾಟ ಮಾಡಬೇಕು. ಎಲ್ಲಖರೀದಿದಾರರ ಅಂಗಡಿ ಮುಂದೆ ಬೆಂಬಲ ಬೆಲೆಯ ಫಲಕವನ್ನು ಕೂಡಲೇ ಅಳವಡಿಸಿ’ ಎಂದು ಸೂಚಿಸಿದರು.

ಈ ಸಂದರ್ಭದಲ್ಲೇ ರೈತರು, ಬೆಂಬಲ ಬೆಲೆ ತಡವಾಗಿ ಘೋಷಿಸುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅಧ್ಯಕ್ಷರು, ‘ಯಾವ ಬೆಳೆಯು ಯಾವ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬುದನ್ನು ಗುರುತಿಸಿಕೊಂಡು ಬೆಲೆ ನಿಗದಿ ಮಾಡಲು ಚಿಂತನೆ ನಡೆದಿದೆ. ಬೆಳೆವಾರು ಮತ್ತು ಕಾಲವಾರು ವೇಳಾಪಟ್ಟಿಯನ್ನು ಹಾಕಿಕೊಂಡು ಅದರಂತೆ ಬೆಲೆ ನಿಗದಿ ಮಾಡಿದರೆ ರೈತರಿಗೆ ತೊಂದರೆಯಾಗುವುದಿಲ್ಲ ಎಂಬ ಅರಿವು ಆಯೋಗಕ್ಕೂ ಇದೆ’ ಎಂದು ಸ್ಪಷ್ಟಪಡಿಸಿದರು.

ಕಾರ್ಖಾನೆ ಆರಂಭಿಸಿ: ಕಂಪ್ಲಿಯ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಸೋನಾ ಮಸೂರಿ ಮತ್ತು ದಪ್ಪ ಭತ್ತಕ್ಕೆ ಒಂದೇ ಬೆಲೆ ನಿಗದಿ ಮಾಡಬಾರದು ಎಂದು ಕೆಲವು ರೈತರು ಆಗ್ರಹಿಸಿದರು.

ತಪಾಸಣಾ ಕೇಂದ್ರವೇ ಇಲ್ಲದ ಎಪಿಎಂಸಿ!
ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿಯಲ್ಲಿ ತಪಾಸಣೆ ಕೇಂದ್ರವೇ ಇಲ್ಲ. ತೂಕ ಯಂತ್ರ ಕೆಟ್ಟಿದೆ. ಸಿಸಿ ಕ್ಯಾಮರಾಗಳಿಲ್ಲ. ಖರೀದಿದಾರರು ಅಧಿಕೃತ ರಸೀದಿ ನೀಡದೆ ಬಿಳಿ ರೈತರಿಗೆ ಚೀಟಿಯಲ್ಲಿ ಲೆಕ್ಕ ಬರೆದುಕೊಡುತ್ತಿದ್ದಾರೆ. ಎಷ್ಟು ಪ್ರಮಾಣದಲ್ಲಿ ಯಾವ ಬೆಳೆ ಮಾರುಕಟ್ಟೆಗೆ ಬಂತು? ಎಷ್ಟು ಮಾರಾಟವಾಯಿತು ಎಂಬುದರ ಲೆಕ್ಕವೇ ಇಲ್ಲ. ಮಾರುಕಟ್ಟೆಗೆ ಬರುವ ಪ್ರತಿ ವಾಹನದಿಂದಎಪಿಎಂಸಿ ಕಾರ್ಯದರ್ಶಿ ₨ 1 ಸಾವಿರ ಪಡೆದುಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ. ಕೂಡಲೇ ಇವುಗಳನ್ನು ಸರಿಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಂ.ಶಿವಶಂಕರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆದಾರರ ಅಸಹಕಾರದಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿತ್ತು. ಮಾರುಕಟ್ಟೆಯಲ್ಲಿ ಸದ್ಯ ಎಲ್ಲವೂ ತೆರೆದ ಸಭಾಂಗಣಗಳಿಲ್ಲ. ತೆರೆದ ಸಭಾಂಗಣದಲ್ಲಿ ಒಣಗಲು ಹಾಕಿದ್ದ ಬೆಳೆಗಳು ಮಳೆಯಿಂದ ನಷ್ಟ ಹೊಂದಿರುವುದರಿಂದ ಬೆಳೆಗಾರರಿಗೆ ಪರಿಹಾರವನ್ನು ದೊರಕಿಸುವ ಪ್ರಯತ್ನ ನಡೆದಿದೆ’ ಎಂದು ಅಧಿಕಾರಿ ಸಮಜಾಯಿಷಿ ನೀಡುತ್ತಿದ್ದಂತೆ, ಎದ್ದು ನಿಂತ ಶಿವಶಂಕರ್‌, ‘ಅಧಿಕಾರಿಯು ವಿಷಯಾಂತರ ಮಾಡಿ ಸಭೆ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT