ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 2 ರಿಯಾಯಿತಿ ದರದಲ್ಲಿ ಫ್ಲ್ಯಾಟ್‌ ಮಾರಾಟ

ವಸತಿ ಸಚಿವ ಎಂ.ಟಿ.ಬಿ ನಾಗರಾಜ್‌ ಪ್ರಕಟಣೆ
Last Updated 2 ಜನವರಿ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ) ಫ್ಲ್ಯಾಟ್‌ಗಳನ್ನು ಶೇ 2ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ವಸತಿ ಸಚಿವ ಎಂ.ಟಿ.ಬಿ ನಾಗರಾಜ್‌ ಬುಧವಾರ ಪ್ರಕಟಿಸಿದರು.

ಕೆಎಚ್‌ಬಿ ನಿರ್ಮಿಸಿರುವ ವಸತಿ ಸಂಕೀರ್ಣಗಳಲ್ಲಿ ಫ್ಲ್ಯಾಟ್‌ಗಳು ಖಾಲಿ ಉಳಿದಿರುವುದರಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಒಳಗೊಂಡಂತೆ ಬೇರೆ ಬೇರೆ ಕಡೆಗಳಲ್ಲಿ 1,178 ಫ್ಲ್ಯಾಟ್‌ಗಳು ಮಾರಾಟವಾಗದೆ ಉಳಿದಿವೆ. ಕೆಂಗೇರಿಯಲ್ಲಿ 70, ಡೈಮಂಡ್ ವಸತಿ ಸಂಕೀರ್ಣದಲ್ಲಿ 130‍ಫ್ಲ್ಯಾಟ್‌ಗಳು ಲಭ್ಯವಿವೆ. ಸೂರ್ಯನಗರ, ಕಲಬುರಗಿ ಹೌಸಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಒಟ್ಟು 486 ಬಿಡಿ ಮನೆಗಳು ಹಾಗೂ 4,182 ನಿವೇಶನಗಳು ಮಾರಾಟವಾಗಿಲ್ಲ. ಯೋಜನೆಗೆ ₹ 482 ಕೋಟಿ ಖರ್ಚು ಮಾಡಲಾಗಿದೆ. ಯಲ್ಲಾಪುರ– ಹಾವೇರಿಯ ದೇವಗಿರಿ, ಬಳ್ಳಾರಿಯ ಕೊಳಗಲ್ಲು, ಮುಂಡರಗಿಯ ಹಲಕುಂದಿಯಲ್ಲಿ ₹ 222 ಕೋಟಿ ಮೊತ್ತದಲ್ಲಿ 4,789 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯ ಸರ್ಕಾರ ಮುಂದಿನ 5 ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪ್ರಸಕ್ತ ವರ್ಷ 4 ಲಕ್ಷ ಮನೆಗಳನ್ನು ಕಟ್ಟಲಾಗುತ್ತಿದೆ. ಇದುವರೆಗೆ 2.13 ಲಕ್ಷ ಮನೆಗಳು ಪೂರ್ಣ ಆಗಿದ್ದು, 1,681 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಅಂಕಿಅಂಶ ನೀಡಿದರು.

ರೈತರಿಂದ ಆತ್ಮಹತ್ಯೆ ಬೆದರಿಕೆ

ಕರ್ನಾಟಕ ಗೃಹ ಮಂಡಳಿ ಸ್ವಾಧೀನ ಮಾಡಿಕೊಂಡಿರುವ ತಮ್ಮ ಜಮೀನಿಗೆ ತಕ್ಷಣ ಪರಿಹಾರ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆಂಗಳೂರು ಜಿಲ್ಲೆಯ ರೈತರಿಬ್ಬರು ವಸತಿ ಸಚಿವ ಎಂ.ಟಿ.ಬಿ ನಾಗರಾಜ್‌ ಅವರಿಗೆ ಬೆದರಿಕೆ ಹಾಕಿದ ಪ್ರಸಂಗ ಪತ್ರಿಕಾಗೋಷ್ಠಿಯಲ್ಲೇ ನಡೆಯಿತು.

ಕೆಎಚ್‌ಬಿ ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡಿಲ್ಲ ಎಂದು ವರದಿಗಾರರು ಸಚಿವರ ಗಮನಕ್ಕೆ ತಂದರು. ಅದಕ್ಕೆ ಇಲಾಖೆಯ ಅಧಿಕಾರಿಗಳು ಏನೋ ಸಮಜಾಯಿಷಿ ನೀಡಿದರು. ಇದರಿಂದ ತೃಪ್ತರಾಗದ ರೈತರು ಸಚಿವರ ಬಳಿಗೆ ಧಾವಿಸಿ, ‘ನಮ್ಮ ಮನೆಯಲ್ಲಿ ಮದುವೆ ನಿಶ್ಚಯವಾಗಿದೆ. ಮಂಡಳಿ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ತಕ್ಷಣ ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.

ಪರಿಹಾರ ನೀಡುವಂತೆ ಹೈಕೋರ್ಟ್‌ ಆದೇಶ ಕೊಟ್ಟಿದೆ. ಆದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೂರಿದರು. ಕೂಡಲೇ ಪರಿಶೀಲಿಸಿ ಪರಿಹಾರದ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT