ಫ್ಲೆಕ್ಸ್‌ ತೆರವು: ಗಿಲೀಟಿನ ಪ್ರಮಾಣಪತ್ರ ಸಲ್ಲಿಕೆ ನಿಲ್ಲಿಸಿ ಹೈಕೋರ್ಟ್ ಚಾಟಿ

7

ಫ್ಲೆಕ್ಸ್‌ ತೆರವು: ಗಿಲೀಟಿನ ಪ್ರಮಾಣಪತ್ರ ಸಲ್ಲಿಕೆ ನಿಲ್ಲಿಸಿ ಹೈಕೋರ್ಟ್ ಚಾಟಿ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ಸ್ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

"ಇಂತಹ ಗಿಲೀಟಿನ ಪ್ರಮಾಣಪತ್ರ ಸಲ್ಲಿಸುವುದನ್ನು ನಿಲ್ಲಿಸಿ" ಎಂದು ಹೈಕೋರ್ಟ್ ಚಾಟಿ ಬೀಸಿದೆ.

ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ತೆರವಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ಮುಂದುವರಿಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ಮುಖ್ಯ ಕಾರ್ಯದರ್ಶಿ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅದರಲ್ಲಿದ್ದ ಒಕ್ಕಣಿಕೆ ಮತ್ತು ಪದಬಳಕೆ ಬಗ್ಗೆ, ವಿಶೇಷವಾಗಿ 'ಪ್ರಯತ್ನಿಸುತ್ತೇವೆ' ಎಂಬ ಪದದ ಬಗ್ಗೆ ಕನಲಿ ಕೆಂಡವಾದ ದಿನೇಶ್ ಮಾಹೇಶ್ವರಿ ಅವರು ಕುಪಿತರಾದರು.

"ನೀವು ಹೈಕೋರ್ಟ್ ಕಣ್ಣೊರೆಸುವ ತಂತ್ರ ಮಾಡುವುದನ್ನು ಸಹಿಸುವುದಿಲ್ಲ" ಎಂದು ಪುನಃ ಗುಡುಗಿದರು.

ಸಿಜೆ ಹೇಳಿದ್ದೇನು?:

• "ನಿಮ್ಮ ಕೈಯ್ಯಲ್ಲಿ ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್‌ಮುಕ್ತ ಮಾಡಲು ಸಾಧ್ಯವೇ ಇಲ್ಲವೇ ಎಂದು ಹೇಳಿಬಿಡಿ. ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ" ಎಂದು ಬಿಬಿಎಂಪಿ ಪರ ವಕೀಲ ಶ್ರೀನಿಧಿಗೆ ಚಾಟಿ.

• ಅವರನ್ನು ಕರೆದು ಮೀಟಿಂಗ್ ಮಾಡಿದ್ದೇವೆ... ಇವರ ಜೊತೆ ಚರ್ಚಿಸಿದದ್ದೇವೆ... ಇನ್ಯಾವುದೋ ಠರಾವು ಪಾಸು ಮಾಡಿದ್ದೇನೆ.... ಕಾರ್ಯ ಪ್ರಗತಿಯಲ್ಲಿದೆ.... ಪ್ರಯತ್ನಿಸುತ್ತಿದ್ದೇವೆ.....  ಈ ರೀತಿಯ ಸಬೂಬುಗಳನ್ನು ಕೇಳಲು ನಾನು ಸುತಾರಾಂ ತಯಾರಿಲ್ಲ.

• ಫ್ಲೆಕ್ಸ್ ಕೇಸ್‌ಗಳ ದಿನ ನಿತ್ಯದ ವಿಚಾರಣೆಗೆಂದೇ ಎಸಿಎಂಎಂ ಕೋರ್ಟ್‌ನಲ್ಲಿ ಪ್ರತ್ಯೇಕ ಕೋರ್ಟ್ ಸ್ಥಾಪಿಸುತ್ತೇನೆ. ಈ ತಿಂಗಳ ಅಂತ್ಯದಲ್ಲಿ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿ ಆದೇಶ ನೀಡಬೇಕು.

• ಜಾಮೀನು ಕೋರಿ ಸಲ್ಲಿಸುವ ಅರ್ಜಿಗಳು ನೇರ ಹೈಕೋರ್ಟ್‌ಗೆ ಬರುತ್ತವೆ ಎಂಬುದು ನೆನಪಿರಲಿ.

• ಅಧಿಕಾರಿಗಳು ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ನಾನು ಮಾಡಿಸುತ್ತೇನೆ.

• ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ಫ್ಲೆಕ್ಸ್‌ಗಳು ಮಾತ್ರವಲ್ಲದೆ ಖಾಸಗಿ ಸ್ವತ್ತುಗಳ ವ್ಯಾಪ್ತಿಯಲ್ಲಿರುವ ಫ್ಲೆಕ್ಸ್‌ಗಳ ತೆರವಿಗೂ ಕ್ರಮ ಕೈಗೊಳ್ಳಿ.

• ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ಏನೇನು ನಡರಯುತ್ತಿದೆ ಎಂಬ ಬಗ್ಗೆ ಆಗಸ್ಟ್ 14ರೊಳಗೆ ನನಗೆ ನಿಖರ ಹಾಗೂ ಸ್ಪಷ್ಟ ವರದಿ ಸಲ್ಲಿಸಬೇಕು.

• ಪ್ರಮಾಣಪತ್ರದಲ್ಲಿ ಒಂದೇ ಒಂದು ಶಬ್ದ ಸತ್ಯಕ್ಕೆ ದೂರವಾಗಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು.

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !