ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ತಪ್ಪಲು ಸಂತೋಷ ಲಾಡ್ ಕಾರಣ

ಶಾಸಕ ಬಿ.ಎಂ.ನಾಗರಾಜ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆ
Last Updated 17 ಏಪ್ರಿಲ್ 2018, 5:41 IST
ಅಕ್ಷರ ಗಾತ್ರ

ಸಿರುಗುಪ್ಪ: ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕ ಬಿ.ಎಂ.ನಾಗರಾಜರಿಗೆ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್‌ ಟಿಕೆಟ್‌ ನೀಡದೇ ಇರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಗಾಂಧಿವೃತ್ತದಲ್ಲಿ ಸಚಿವ ಸಂತೋಷ್‌ಲಾಡ್‌ರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಮನೆಯಿಂದ ಕಾರ್ಯಕರ್ತರು ಮೆರವಣಿಗೆ ಹೊರಟು ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸಚಿವ ಸಂತೋಷ್‌ಲಾಡ್‌ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್‌ ಪಕ್ಷವು ಹಾಲಿ ಶಾಸಕರಿಗೆ ಟಿಕೆಟ್‌ ನೀಡದೇ, ಕೂಡ್ಲಿಗಿ ಶಾಸಕ ನಾಗೇಂದ್ರ ಅವರ ಸಂಬಂಧಿ ಮುರುಳಿ ಕೃಷ್ಣವರಿಗೆ ಟಿಕೆಟ್‌ ನೀಡಿರುವುದು ಅನ್ಯಾಯ, ಶಾಸಕ ನಾಗರಾಜ ಅವರಿಗೆ ಟಿಕೆಟ್‌ ತಪ್ಪಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರೇ ಕಾರಣ ಎಂದು ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ ಲಾಡ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪೊರಕೆಯಿಂದ ಅವರ ಭಾವಚಿತ್ರಕ್ಕೆ ಹೊಡೆಯುತ್ತ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್‌.ಕರಿಬಸಪ್ಪ ಮಾತನಾಡಿ, ನಮ್ಮ ಶಾಸಕರು ಸರಳ ವ್ಯಕ್ತಿತ್ವ ಹಾಗೂ ಸಮಾಜ ಮುಖಿ ಸೇವೆಯಿಂದಾಗಿ ಕಳೆದ ಚುನಾವಣೆಯಲ್ಲಿ 23 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು, ರಾಜ್ಯ ಸರ್ಕಾರದ ಯೋಜನೆಗಳನ್ನು ತಾಲ್ಲೂಕಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಪರ ಕೆಲಸ ಮಾಡಿದ್ದರು, ಈ ಬಾರಿ ಗೆಲುವು ನಿಶ್ಚಯವಾಗಿತ್ತು ಎಂದ ಅವರು ಹೈಕಮಾಂಡ್‌ ಟಿಕೆಟ್‌ ನೀಡದೇ ಇರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದರು.

ನಗರ ಸಭೆಯ ಅಧ್ಯಕ್ಷೆ ಬಿ.ಪಾರಿಜಾತಮ್ಮ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಮಹ್ಮದ್‌ನೂರುಲ್ಲಾ ಗಣೇಶ್‌, ಮುತ್ಯಾಲಯ್ಯಶೆಟ್ಟಿ, ಪವನಕುಮಾರ ದೇಸಾಯಿ, ಮಾರುತಿರೆಡ್ಡಿ, ಕೋಟಿರೆಡ್ಡಿ, ಜಿ.ಶ್ರೀನಿವಾಸ, ಬಿ.ಕೆ.ರಘು, ಕೋದಂಡರಾಮ, ಅಯ್ಯಪ್ಪ ಇದ್ದರು. ಪ್ರತಿಭಟನೆ ಕಾಲಕ್ಕೆ ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

**

ಶಾಸಕ ಬಿ.ಎಂ.ನಾಗರಾಜ ಅವರಿಗೆ ಟಿಕೆಟ್‌ ದೊರೆಯುವುದು ಎಂಬ ವಿಶ್ವಾಸವಿತ್ತು ಆದರೆ ಅವರನ್ನು ಪರಿಗಣಿಸದೇ ಇರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆಘಾತವನ್ನುಂಟು ಮಾಡಿದೆ – ಎನ್‌.ಕರಿಬಸಪ್ಪ, ಅಧ್ಯಕ್ಷರು ಸಿರುಗುಪ್ಪ ಬ್ಲಾಕ್‌ ಕಾಂಗ್ರೆಸ್‌.

**

ನಾನು ಕೂಡ ಟಿಕೆಟ್‌ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೆ, ಹೈಕಮಾಂಡ್‌ ತೀರ್ಮಾನ ಅಂತಿಮವಾಗಿದ್ದು ಪಕ್ಷ ಘೋಷಿಸಿರುವ ಅಭ್ಯರ್ಥಿ ಮುರಳಿಕೃಷ್ಣ ಅವರ ಗೆಲುವಿಗೆ ಶ್ರಮಿಸುವೆ – ಎಚ್.ಎಂ.ಮಲ್ಲಿಕಾರ್ಜುನ, ಮುಖಂಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT