ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಡದಿದ್ದರೂ ಪರವಾಗಿಲ್ಲ, ಕಡಿಯಬೇಡಿ

ಜಿಲ್ಲಾ ಕಾರಾಗೃಹ; ವಿಶ್ವ ಪರಿಸರ ದಿನಾಚರಣೆಯಲ್ಲಿ ನ್ಯಾಯಾಧೀಶ ಪಿ.ಎನ್. ದೇಸಾಯಿ ಸಲಹೆ
Last Updated 6 ಜೂನ್ 2018, 12:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಸಸಿ ನೆಡದಿದ್ದರೂ ಪರವಾಗಿಲ್ಲ, ಮರ ಕಡಿಯಬೇಡಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಪಿ.ಎನ್.ದೇಸಾಯಿ ಸಲಹೆ ನೀಡಿದರು.

ಬ್ರಹ್ಮಾಕುಮಾರೀಸ್ ಸಂಸ್ಥೆ ವತಿಯಿಂದ ನಗರದ ರಾಮನಹಳ್ಳಿ ಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಬೇಕು. ಶಾಲೆ, ಮನೆ, ರಸ್ತೆ ಇಕ್ಕೆಲಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು. ಪರಿಸರ ಪ್ರೇಮ ಬೆಳಸಿಕೊಳ್ಳಬೇಕು. ಮನೆ ಪಕ್ಕದ ಜನರು, ಸಂಬಂಧಿಕರಲ್ಲಿ ಪರಿಸರ ರಕ್ಷಣೆ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಬಿ.ಕೆ. ಭಾಗ್ಯಕ್ಕ ಮಾತನಾಡಿ, 'ಪ್ರಕೃತಿ ಮತ್ತು ಪರಮಾತ್ಮ ನಿಸ್ವಾರ್ಥತೆಯಿಂದ ಕೂಡಿರುತ್ತದೆ. ಪ್ರಕೃತಿ ನಾಶ ಪಡಿಸದೆ ಅದರ ಜೊತೆಗೆ ಜೀವನ ಸಾಗಿಸಬೇಕು' ಎಂದರು.

ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ಲಾಸ್ಟಿಕ್ ಬಳಕೆ ಯನ್ನು ಸರ್ಕಾರ ಸಂಪೂರ್ಣ ನಿಷೇಧಿ ಸಬೇಕು. ಈ ನಿಮಿತ್ತ ಜನರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಎಲ್ಲರೂ ಮನೆ ಸುತ್ತ ಸ್ವಚ್ಛವಾಗಿಟ್ಟುಕೊಂಡರೆ ದೇಶ ಸ್ವಚ್ಚವಾಗುತ್ತದೆ ಎಂದರು.

ಜಿಲ್ಲಾ ಯೋಗ ದಿನಾಚರಣೆ ಸಮಿತಿ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಜೂನ್‌ 21ರವರೆಗೆ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಂದಿಖಾನೆಯಲ್ಲಿರುವವರು ನಿರ್ಲಕ್ಷ್ಯ ತೊರದೆ ಸದುಪಯೋಗ ಪಡಿಸಿಕೊ ಳ್ಳಬೇಕು ಎಂದು ಮನವಿ ಮಾಡಿದರು.

ವಕೀಲ ವೆಂಟೇಶ್ ಪ್ರಕೃತಿ ಗೀತೆ ಹಾಡಿದರು. ಬ್ರಹ್ಮಕುಮಾರೀಸ್ ಸಂಸ್ಥೆಯ ಸಿ.ಎಚ್. ನಾಗರಾಜ್, ಸುಪ್ರಿಯಾ, ಜ್ಞಾನೇಶ್ ಇದ್ದರು.

ಮಾಲಿನ್ಯ ತಡೆಗೆ ಮುಂದಾಗಲು ಸಲಹೆ

ಚಿಕ್ಕಮಗಳೂರು: ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ನಾಶವಾಗುತ್ತಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲರೂ ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಎನ್.ದೇಸಾಯಿ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಸಿ ನೆಡುವುದರಿಂದ ಪರಿಸರ ಸಂರಕ್ಷಣೆ ಆಗುವುದಿಲ್ಲ. ನೀರು, ಗಾಳಿ, ಶಬ್ದ ಮಾಲಿನ್ಯವನ್ನು ತಡೆಗಟ್ಟಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಬೇಕು ಎಂದರು.

ಪರಿಸರವಾದಿ ಸ.ಗಿರಿಜಾ ಶಂಕರ್ ಮಾತನಾಡಿ, ‘ಪ್ರತಿವರ್ಷ ಸಮುದ್ರಕ್ಕೆ 80 ಸಾವಿರ ಟನ್ ಪ್ಲಾಸ್ಟಿಕ್ ಸೇರುತ್ತಿದೆ. ಅದರಿಂದ ಕುಡಿಯುವ ನೀರು, ಜಲಚರ ಸೇರಿದಂತೆ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಪರಿಸರ ದಿನ ಆಚರಣೆಗೆ ಸೀಮಿತವಾಗಬಾರದು. ಪರಿಸರ ಉಳಿವಿಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು’ ಎಂದರು.

ಶಾಲಾ ಮಕ್ಕಳಿಗೆ ಪರಿಸರ, ಗಿಡ-ಮರ, ಪಕ್ಷಿ, ನಕ್ಷತ್ರ, ಜೀವರಾಶಿಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಅಗತ್ಯ ಇದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಕೃತಿ ಸಂರಕ್ಷಣೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ, ನ್ಯಾಯಾಧೀಶರಾದ ಕಂಬೇಗೌಡ, ಅಶ್ವತ್, ಅಣ್ಣಾಸಾಹೇಬ್, ಬಿ.ಪಿ ದೇವೇಂದ್ರ ಇದ್ದರು.

ಪ್ರಕೃತಿ ಸಂಪತ್ತನ್ನು ಉಳಿಸಲು ಎಲ್ಲರು ಸ್ವಯಂ ಪ್ರೇರಣೆಯಿಂದ ಪ್ರತಿಜ್ಞೆ ಮಾಡಬೇಕು. ಕೈದಿಗಳು ಉತ್ತಮ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು
ವಿಜಯ್‌ಕುಮಾರ್ ಚೌಹಾಣ್, ಜಿಲ್ಲಾ ಕಾರಾಗೃಹ ಅಧೀಕ್ಷಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT