ಸೋಮವಾರ, ಡಿಸೆಂಬರ್ 9, 2019
20 °C
ನೆರೆಯಿಂದ ಸಂತ್ರಸ್ತರಾದ ರೈತರಿಗೆ ಬ್ಯಾಂಕ್‌ಗಳ ‘ಬರೆ’

ಪ್ರವಾಹಕ್ಕೆ ತತ್ತರಿಸಿದ ರೈತರಿಗೆ ಬರಸಿಡಿಲು: ಪರಿಹಾರದ ಹಣ ಸಾಲಕ್ಕೆ ಜಮಾ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಹಲವು ನದಿಗಳ ಪ್ರವಾಹದಿಂದಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಹೊಸ ಬದುಕು ಕಟ್ಟಿಕೊಳ್ಳಲೆಂದು ಸರ್ಕಾರ ನೀಡುತ್ತಿರುವ ಪರಿಹಾರದ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಹೊಂದಾಣಿಕೆ ಅಥವಾ ಜಮಾ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ.

ಈಗಿನ ಪರಿಸ್ಥಿತಿಯಲ್ಲಿ ಪರಿಹಾರದ ಹಣ ಸಂಪೂರ್ಣವಾಗಿ ಸಂತ್ರಸ್ತರ ಕೈ ಸೇರಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಇದ್ದರೂ ಬ್ಯಾಂಕಿನವರು ಅದನ್ನು ಉಲ್ಲಂಘಿಸುತ್ತಿದ್ದಾರೆ.  

ವಸತಿ ಸಚಿವ ವಿ. ಸೋಮಣ್ಣ ಈಚೆಗೆ ಚಿಕ್ಕೋಡಿ ತಾಲ್ಲೂಕು ಯಡೂರಕ್ಕೆ ಭೇಟಿ ನೀಡಿದ್ದಾಗ ಸಂತ್ರಸ್ತ ರೈತರು ಈ ಬಗ್ಗೆ ಗಮನಸೆಳೆದಿದ್ದರು. ‘ಬೆಳೆ ಪರಿಹಾರ, ಮನೆ ಹಾನಿಯಾಗಿದ್ದಕ್ಕೆ ಮೊದಲನೇ ಕಂತಾಗಿ ಕನಿಷ್ಠ ₹ 25ಸಾವಿರದಿಂದ ಗರಿಷ್ಠ ₹ 98ಸಾವಿರದವರೆಗೆ ಪರಿಹಾರ ನೀಡಲಾಗುತ್ತಿದೆ ಹಾಗೂ ಜಾನುವಾರುಗಳು ಮೃತಪಟ್ಟಿದ್ದಕ್ಕೆ ಬ್ಯಾಂಕ್ ಖಾತೆ ಮೂಲಕ ಕೊಡುತ್ತಿರುವ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬದುಕೇ ಕೊಚ್ಚಿ ಹೋಗಿರುವ ನಮಗೆ ಸಾಲ ಪಾವತಿ ವಿಷಯದಲ್ಲಿ ಕಿರುಕುಳ ಕೊಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದರು.

ಸಚಿವರೂ ಸೂಚಿಸಿದ್ದರು:

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು, ‘ಯಾವುದೇ ಬ್ಯಾಂಕಿನವರಾದರೂ ಸರಿಯೇ ಈ ರೀತಿ ಪರಿಹಾರವನ್ನು ಸಾಲಕ್ಕೆ ಮುರಿದುಕೊಳ್ಳುವುದು ಸರಿಯಲ್ಲ. ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಸೂಚನೆ ಕೊಡಬೇಕು. ಸಂತ್ರಸ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರಿಗೆ ಸೂಚಿಸಿದ್ದರು.

‘ಅಥಣಿ ತಾಲ್ಲೂಕು ಹಳ್ಯಾಳದಲ್ಲಿ ಗ್ರಾಮೀಣ ಬ್ಯಾಂಕಿನವರು ರೈತರೊಬ್ಬರಿಗೆ ಬಂದ ₹ 16ಸಾವಿರ ಪರಿಹಾರ (ಎಮ್ಮೆ ಕೊಚ್ಚಿಕೊಂಡು ಹೋಗಿದ್ದಕ್ಕೆ ಬಂದದ್ದು) ಸಾಲಕ್ಕೆ ಮುರಿದುಕೊಂಡಿದ್ದರು. ಪ್ರತಿಭಟಿಸಿದ ಬಳಿಕ ಅರ್ಧ ಹಣವನ್ನಷ್ಟೇ ಕೊಟ್ಟಿದ್ದಾರೆ. ಇನ್ನರ್ಧ ಕೊಟ್ಟಿಲ್ಲ. ಈ ರೀತಿ ಬಹಳ ಮಂದಿಯಿಂದ ದೂರು ಬರುತ್ತಿವೆ. ಮುಖ್ಯಮಂತ್ರಿ ಆದೇಶಕ್ಕೂ ಬ್ಯಾಂಕಿನವರು ಬೆಲೆ ಕೊಡುತ್ತಿಲ್ಲವೆಂದರೆ ಏನರ್ಥ?’ ಎಂದು ರೈತ ಸಂಘ ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷ ಮಹದೇವ ಮಡಿವಾಳ ಕೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು