ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಊರಿಗೆ ನೀರು ಶಾಪ ಮತ್ತು ವರ!

ಉಟ್ಟ ಬಟ್ಟೆಯಲ್ಲಿ ಮನೆ ತೊರೆದು ಬಂದರು
Last Updated 9 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಶಿರಸಿ: ‘ನಿತ್ಯವೂ ನದಿಯಲ್ಲೇ ಬೆಳಗು ಕಾಣುವ ನಮಗೆ ನೀರು ಹೊಸತಲ್ಲ. ಆದರೆ, ಈ ಬಾರಿ ಅಘನಾಶಿನಿ ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿಬಿಟ್ಟಳು. ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಬರುವಾಗ ನೀರು ಎದೆ ಮಟ್ಟಕ್ಕೆ ಏರಿತ್ತು. ನಿಧಾನ ಹೆಜ್ಜೆ ಹಾಕುತ್ತ ಬಂದು, ಅಂತೂ ದೋಣಿ ಹತ್ತಿ ಕುಳಿತು ಜೀವ ಉಳಿಸಿಕೊಂಡೆ’ ಎನ್ನುತ್ತ ಮಾತಿಗಿಳಿದರು 75 ವರ್ಷದ ಗೌರಿ ಪಟಗಾರ.

ಕುಮಟಾ ತಾಲ್ಲೂಕಿನ ಐಗಳ ಕುರ್ವೆ ಮತ್ತು ಬೇಲೆ ಇವು ಅಘನಾಶಿನಿ ನದಿ ಸುತ್ತುವರಿದಿರುವ ದ್ವೀಪ ಗ್ರಾಮಗಳು. ನದಿಯ ಮುನಿಸು ಈ ಬಾರಿ ಅವರ ಬದುಕನ್ನು ಕಸಿದಿದೆ. ಕೋಡ್ಕಣಿಯ ಪುನರ್ವಸತಿ ಕೇಂದ್ರದಲ್ಲಿ ನಾಲ್ಕು ದಿನಗಳಿಂದ ಉಳಿದಿರುವ ಮಹಿಳೆಯರಿಗೆ ಮನೆಯ ಒಳ ಕೋಣೆಯಲ್ಲಿ ಕಟ್ಟಿ ಬಂದಿರುವ ಜಾನುವಾರು ಚಿಂತೆ. ‘ನೀರು ಹೆಚ್ಚುತ್ತಿದ್ದಂತೆ ಕೆಲವರು ಒಂದೆರಡು ಬಟ್ಟೆ ಚೀಲದಲ್ಲಿ ತುಂಬಿಕೊಂಡರು, ಇನ್ನು ಕೆಲವರು ಹಾಗೇ ಬಂದು ದೋಣಿಯಲ್ಲಿ ಕುಳಿತರು. ಜಾನುವಾರುಗಳಿಗೆ ನಾಲ್ಕು ದಿನಗಳಿಂದ ಹುಲ್ಲು ಕೊಡುವವರೂ ಗತಿಯಿಲ್ಲ. ಮೂಕ ಜಾತಿಯವು ಎಷ್ಟು ನೊಂದುಕೊಂಡವೋ’ ಎಂದವರೇ ಅವರು ಮೌನಕ್ಕೆ ಜಾರಿದರು.

‘ದೋಣಿಗೆ ಹೋಗುವ ಗಂಡಸರು ಕೆಲವರು ಊರಿನಲ್ಲೇ ಉಳಿದಿದ್ದಾರೆ.ಕೆಲವು ಮನೆಗಳ ಮೇಲೆ ಮರ ಬಿದ್ದಿದೆಯಂತೆ. ಮನೆಯೊಳಗೆ ಈಗ ಒಂದಡಿ ಕೆಸರು ತುಂಬಿದೆ. ಹಾವು, ಚೇಳು, ಹುಳ– ಹುಪ್ಪಡಿಗಳು ಮನೆಯ ಮೂಲೆ ಸೇರಿವೆ. ಮೀನುಗಾರಿಕೆ, ಕೂಲಿ ಕೆಲಸವನ್ನೇ ನಂಬಿರುವ ನಮಗೆ ಮಳೆ ಈ ಶಿಕ್ಷೆ ನೀಡಿದೆ’ ಎಂದು ಮುಗುಳ್ನಗುತ್ತಲೇ ಹೇಳಿದ ಯಮುನಾ ಅಂಬಿಗ ಮುಖದಲ್ಲಿ ವಿಷಾದವೂ ಇತ್ತು.

**

1982ರಲ್ಲಿ ಒಮ್ಮೆ ಇಂತಹುದೇ ಮಳೆ ಬಂದಿತ್ತು. ಆಗ ಇದೇ ಶಾಲೆಯಲ್ಲಿ ನಾವು ಒಂದು ತಿಂಗಳು ಕಳೆದಿದ್ದೆವು. ಅಷ್ಟರ ಮೇಲೆ ಇಷ್ಟೊಂದು ದೊಡ್ಡ ಮಳೆ ಕಂಡಿದ್ದಿಲ್ಲ
– ಗಿರಿಜಾ ಪಟಗಾರ, ಐಗಳಕುರ್ವೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT