ಗುರುವಾರ , ಮಾರ್ಚ್ 4, 2021
19 °C

ನೆರೆ: ಬಿಜೆಪಿಗೆ ‘ಅಧಿಕಾರ’ ಜ್ವರ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬದುಕನ್ನು ನುಚ್ಚುನೂರಾಗಿಸುವ ರೀತಿಯಲ್ಲಿ ಮಹಾ ಪ್ರವಾಹ ಮುನ್ನುಗ್ಗಿ, ಜನರು ಸಂಕಷ್ಟದಲ್ಲಿದ್ದಾಗ ಬಿಜೆಪಿ ನಾಯಕರು ‘ಅಧಿಕಾರ’ದ ಜ್ವರಕ್ಕೆ ತುತ್ತಾಗುತ್ತಿರುವುದು ಮರುಕಳಿಸುತ್ತಲೇ ಇದೆ.

ಮಹಾ ನೆರೆಗೂ ಯಡಿಯೂರಪ್ಪನವರ ಅಧಿಕಾರಕ್ಕೂ ನಂಟಿರುವುದು ದಶಕಗಳ ನಂತರ ಮತ್ತೊಮ್ಮೆ ಸಾಬೀತಾಗಿದೆ. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ತಮ್ಮ ಸಚಿವರು, ಶಾಸಕರ ಜತೆ ಮೈಸೂರಿನಲ್ಲಿ ‘ಯೋಗ ಮಗ್ನ’ರಾಗಿದ್ದರು. ಆಗ ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಭಾರಿ ನೆರೆ ಗ್ರಾಮಗ್ರಾಮಗಳನ್ನೇ ನುಂಗಿ ನೊಣೆದಿತ್ತು. ಸೂರು–ಸ್ವತ್ತು ಕಳೆದುಕೊಂಡ ಬಡಬಗ್ಗರು, ರೈತಾಪಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡಿದ್ದರು. 

ಆಗ 40 ಶಾಸಕರನ್ನು ಹೈದರಾಬಾದ್ ಹಾಗೂ ಗೋವಾಕ್ಕೆ ಕರೆದೊಯ್ದ ಗಾಲಿ ಜನಾರ್ದನ ರೆಡ್ಡಿ, ಯಡಿಯೂರಪ್ಪ ಪದಚ್ಯುತಿಯ ತಂತ್ರ ಹೆಣೆದಿದ್ದರು. ಜನ ಕಡುಕಷ್ಟದಲ್ಲಿ ಬೇಯುತ್ತಿದ್ದಾಗ, ಶಾಸಕರು ತಾರಾ ಹೋಟೆಲ್‌ಗಳಲ್ಲಿ ಸೊಂಪಾಗಿದ್ದರು. ಈ ಬೆಳವಣಿಗೆಯಿಂದಾಗಿ, ಸಭಾಧ್ಯಕ್ಷರಾಗಿದ್ದ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರಿದ್ದರೆ, ಶೋಭಾ ಕರಂದ್ಲಾಜೆ ಸಚಿವ ಸ್ಥಾನ ಕಳೆದುಕೊಂಡಿದ್ದರು. 

ಈಗ ಮತ್ತೊಂದು ರೂಪ: ‘ಸರ್ಕಾರದಲ್ಲಿ ತಮ್ಮ ಕೆಲಸ ಆಗುತ್ತಿಲ್ಲ’ ಎಂದು ಅಂದು ಶಾಸಕರು ಯಡಿಯೂರಪ್ಪ ವಿರುದ್ಧ ಬಂಡೆದಿದ್ದರು. 

ತಿಂಗಳ ಹಿಂದಿನ ವಿದ್ಯಮಾನವೂ ಅದೇ ಸಾಮ್ಯತೆ ಹೊಂದಿದೆ. ‘ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ಸ್ಪಂದಿಸುತ್ತಿಲ್ಲ’ ಎಂದು ಕಾಂಗ್ರೆಸ್–ಜೆಡಿಎಸ್‌ನ 17 ಶಾಸಕರು ತಿರುಗಿಬಿದ್ದರು. ಯಡಿಯೂರಪ್ಪ ಹೆಣೆದಿದ್ದ ‘ಆಪರೇಷನ್ ಕಮಲ’ದ ಖೆಡ್ಡಾದಲ್ಲಿ ಬಿದ್ದು ಅವರೆಲ್ಲರೂ ಮುಂಬೈಗೆ ಹೋಗಿದ್ದು, ಸರ್ಕಾರ ಪತನಕ್ಕೆ ಕಾರಣವಾಗಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಅದರ ಫಲ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

18 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನರು ಕಂಗೆಟ್ಟಿದ್ದು, ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ಎತ್ತು, ಚಕ್ರಗಳೇ ಇಲ್ಲದ ಗಾಡಿಯನ್ನೇರಿ ಕುಳಿತ ಪರಿಸ್ಥಿತಿ ಯಡಿಯೂರಪ್ಪನವರದ್ದು. ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ ಸಚಿವರಿದ್ದರೆ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿದ್ದರೆ ಅವರಿಗಾದರೂ ಜವಾಬ್ದಾರಿ ವಹಿಸಿ, ಮೇಲುಸ್ತುವಾರಿ ನೋಡಿಕೊಳ್ಳಬಹುದಿತ್ತು. ಅದನ್ನೂ ಮಾಡದಂತೆ ಯಡಿಯೂರಪ್ಪನವರ ಕೈಯನ್ನು ವರಿಷ್ಠರು ಕಟ್ಟಿ ಹಾಕಿದ್ದಾರೆ.  

ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಿನಲ್ಲಿ ನಿಂತಿದ್ದ ಯಡಿಯೂರಪ್ಪ ಅವರನ್ನು ಎರಡು ದಿನ ಸತಾಯಿಸಿದರು. ದಿಢೀರ್‌ ಬೆಳವಣಿಗೆಯ ಕಾರಣದಿಂದ, ಜುಲೈ 26ರ ಬೆಳಗಿನ ಜಾವ ಯಡಿಯೂರಪ್ಪಗೆ ಕರೆ ಮಾಡಿ, ಪ್ರಮಾಣ ವಚನ ಸ್ವೀಕರಿಸಿ ಎಂದು ಶಾ ಸೂಚನೆ ಕೊಟ್ಟರು. 13 ದಿನ ಕಳೆದರೂ ಸಂಪುಟ ವಿಸ್ತರಣೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಪ್ಪಿಗೆ ಕೊಟ್ಟಿಲ್ಲ. 

ಇವೆಲ್ಲವನ್ನೂ ನೋಡಿದರೆ, ಸರ್ಕಾರ ಕೆಡಹುವಲ್ಲಿ ವರಿಷ್ಠರಿಗೆ ಇದ್ದ ಆಕಾಂಕ್ಷೆ, ಕಟ್ಟುವತ್ತ ಇಲ್ಲ. ಸಂಪುಟ ವಿಸ್ತರಣೆಗೆ ವಿಳಂಬ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಬಗ್ಗಿಸಿದರೆ, ‘ಯಾರನ್ನಾದರೂ ಸೇರಿಸಿಕೊಂಡು ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಕೊಡಿ’ ಎಂಬ ದೈನ್ಯ ಸ್ಥಿತಿಗೆ ಅವರು ಬರುತ್ತಾರೆ. ಆಗ, ‘ಶುದ್ಧ ಚಾರಿತ್ರ್ಯ’ದ, ಸಂಘದ ಹಿನ್ನೆಲೆಯ ಶಾಸಕರನ್ನು ಸಂಪುಟದಲ್ಲಿ ಇರುವಂತೆ ನೋಡಿಕೊಳ್ಳಲು ಸಾಧ್ಯ ಎಂಬುದು ವರಿಷ್ಠರ ಲೆಕ್ಕಾಚಾರ ಎಂಬ ಮಾತು ಬಿಜೆಪಿ ಗರ್ಭಗುಡಿಯಿಂದ ಹೊರಬೀಳುತ್ತಿದೆ.

ಮುಳುಗಡೆಗೆ ಇಡೀ ರಾಜ್ಯವೇ ಈಡಾಗುತ್ತಿರುವ ಭೀಕರ ಹೊತ್ತಿನಲ್ಲಿ ‘ಏಕಾಧಿಪತ್ಯ’ದ ಸರ್ಕಾರದಿಂದ ಎಷ್ಟರ ಮಟ್ಟಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸಾಧ್ಯ. ಕಟ್ಟುವ ಹುಮ್ಮಸ್ಸು ಇಲ್ಲದೇ ಕೆಡಹುವ ದಾರಿ ಹುಡುಕಿದ್ದು ಸರಿಯೇ ಎಂಬ ಜನರ ಪ‍್ರಶ್ನೆಗೆ ಬಿಜೆಪಿ ವರಿಷ್ಠರೇ ಉತ್ತರ ಹೇಳಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು