ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ನೆರೆ ಹಾನಿ ₹ 11ಸಾವಿರ ಕೋಟಿ: ಸಿಕ್ಕಿದ್ದು ₹ 867 ಕೋಟಿ!

ಆರಂಭಗೊಳ್ಳದ ಬೆಳೆ ‍ಪರಿಹಾರ ವಿತರಣೆ, ದುರಸ್ತಿ
Last Updated 13 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಮತ್ತು ಧಾರಾಕಾರ ಮಳೆಯಿಂದಾಗಿ ಬರೋಬ್ಬರಿ ₹ 11,193 ಕೋಟಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದರೆ, ಸರ್ಕಾರದಿಂದ ಈವರೆಗೆ ದೊರೆತಿರುವುದು ₹ 867 ಕೋಟಿ ಮಾತ್ರ.

ಇದರಲ್ಲಿ ಪರಿಹಾರ ಕಾರ್ಯಕ್ಕೆ ₹ 167 ಕೋಟಿ, ಮನೆ ಹಾನಿ ಮೊದಲ ಹಂತದ ಪರಿಹಾರಕ್ಕೆಂದು ₹ 500 ಕೋಟಿ ಮತ್ತು ಮೂಲಸೌಕರ್ಯ ದುರಸ್ತಿಗೆ ₹ 200 ಕೋಟಿ ಹಂಚಿಕೆ ಮಾಡಲಾಗಿದೆ. ಇದು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ’ ಎಂಬ ಆರೋಪ ಕೇಳಿಬಂದಿದೆ.

ಅತಿ ಹೆಚ್ಚಿನ ಹಾನಿ ಬೆಳೆಗಳಿಗೆ ಸಂಬಂಧಿಸಿದ್ದಾಗಿದೆ (₹ 3,229.08). ನಂತರದ ಸ್ಥಾನದಲ್ಲಿ ಮನೆಗಳಿಗೆ ಹಾನಿ (₹ 2,996.58 ಕೋಟಿ) ಆಗಿರುವುದಾಗಿದೆ. ಜಿಲ್ಲೆಯ ಎಲ್ಲ 14 ತಾಲ್ಲೂಕುಗಳನ್ನೂ ‘ಪ್ರವಾಹಪೀಡಿತ ತಾಲ್ಲೂಕುಗಳು’ ಎಂದು ಘೋಷಿಸಲಾಗಿದೆ. ಆದರೆ, ಸಂತ್ರಸ್ತರು ‘ಹೊಸ ಬದುಕು’ ಕಟ್ಟಿಕೊಳ್ಳಲು ಅಗತ್ಯವಾಗಿ ಬೇಕಾಗಿರುವ ಅನುದಾನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಹಾಳಾಗಿರುವ ಮೂಲಸೌಲಭ್ಯಗಳ ಅಭಿವೃದ್ಧಿಗೂ ಗಮನಹರಿಸಿಲ್ಲ.

ಶೆಡ್, ಬಾಡಿಗೆ

‘ನೆರೆ, ಅತಿವೃಷ್ಟಿಯಿಂದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ 1,12,483 ಕುಟುಂಬಗಳಿಗೆ ತಲಾ ₹ 10ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗಿದೆ. 1,08,268 ವಿಶೇಷ ಪಡಿತರ ಕಿಟ್‌ ವಿತರಿಸಲಾಗಿದೆ. ಇನ್ನೂ 3ಸಾವಿರ ಕುಟುಂಬಗಳಿಗೆ ನೀಡಬೇಕಾಗಿದೆ! ಬರೋಬ್ಬರಿ 69,381 ಮನೆಗಳಿಗೆ ಹಾನಿಯಾಗಿದ್ದರೆ, ಈವರೆಗೆ 33ಸಾವಿರ ಮನೆಗಳಿಗೆ ಮಾತ್ರ ಮೊದಲ ಹಂತದ ಪರಿಹಾರ ಕೊಡಲಾಗಿದೆ. 2,551 ಕುಟುಂಬಗಳು ಮನೆ ಬಾಡಿಗೆಗೆಂದು ತಲಾ ₹ 5ಸಾವಿರ ಪಡೆದಿವೆ. 1,216 ಕುಟುಂಬಗಳು ಶೆಡ್‌ ಆಯ್ಕೆ ಮಾಡಿಕೊಂಡಿವೆ. ಶೆಡ್‌ಗಳ ನಿರ್ಮಾಣಕ್ಕಾಗಿ ತಲಾ ₹ 50ಸಾವಿರದಂತೆ ₹ 6.08 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ 2,21,428 ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ಆದರೆ, ಈವರೆಗೂ ಬೆಳೆ ಪರಿಹಾರ ವಿತರಣೆ ಕಾರ್ಯ ಆರಂಭಗೊಂಡಿಲ್ಲ. ಬೆಳೆ ಹಾನಿ ಪರಿಹಾರ ಸಿಗದೇ, ಹಾಳಾದ ಬೆಳೆ ತೆಗೆದು ಹಿಂಗಾರು ಹಂಗಾಮಿನ ಕೃಷಿಗೆ ಸಿದ್ಧತೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಕೃಷಿಕರಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯದೇ ಇರುವುದರಿಂದ, ಅಲ್ಲಿನ ದುಡಿಯುವ ಕೈಗಳಿಗೆ ಕೆಲಸ ಸಿಗದಂತಾಗಿದೆ.

ಮೊದಲ ಹಂತದಲ್ಲಿ

‘ಸರ್ಕಾರದಿಂದ ಈವರೆಗೆ ಬಂದಿರುವ ಹಣವನ್ನು ಪರಿಹಾರ ಕಾರ್ಯ, ಮನೆ ಹಾನಿ ಪರಿಹಾರ ಹಾಗೂ ಮೂಲಸೌಕರ್ಯಗಳ ದುರಸ್ತಿಗೆ ಬಳಸಲಾಗುತ್ತಿದೆ. ನಿರ್ಮಾಣದ ಫೋಟೊದಾಖಲೆ ನೀಡಿದರೆ ಮುಂದಿನ ಕಂತು ಕೊಡಲಾಗುವುದು. ಜಿಲ್ಲಾಧಿಕಾರಿ ಖಾತೆಯಲ್ಲಿ ₹ 450 ಕೋಟಿ ಇದೆ. ಸದ್ಯಕ್ಕೆ ಹಣದ ಕೊರತೆ ಇಲ್ಲ’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ.

‌‘ಮಾರ್ಗಸೂಚಿಗಳ ಪ್ರಕಾರ, ‘ಎ’ ವರ್ಗದ (ಶೇ 75ಕ್ಕಿಂತ ಹೆಚ್ಚಿನ ಹಾನಿ) ಮನೆಗಳ ನಿರ್ಮಾಣಕ್ಕೆ ಮೊದಲ ಕಂತಾಗಿ ತಲಾ ₹ 1 ಲಕ್ಷ ನೀಡಲಾಗುತ್ತದೆ. ಶೇ 25ರಿಂದ 75ರಷ್ಟು ಹಾನಿಯಾಗಿದ್ದರೆ (ಬಿ ವರ್ಗ) ₹ 25ಸಾವಿರ ಹಾಗೂ ಶೇ 15ರಿಂದ 25ರವರೆಗೆ ಹಾನಿಯಾಗಿದ್ದಲ್ಲಿ (ಸಿ ವರ್ಗ) ₹ 25ಸಾವಿರ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ 2,307 ಸರ್ಕಾರಿ ಶಾಲೆಗಳು ಹಾನಿಗೊಳಗಾಗಿವೆ. ದಸರಾ ರಜೆ ಆರಂಭವಾಗಿ ವಾರ ಕಳೆದರೂ ದುರಸ್ತಿ ಕಾಮಗಾರಿ ಪ್ರಾರಂಭವಾಗಿಲ್ಲ!

ಆರಂಭಗೊಳ್ಳದ ದುರಸ್ತಿ!

ಜಿಲ್ಲೆಯಲ್ಲಿ 6,755.26 ಕಿ.ಮೀ. ರಸ್ತೆ, 939 ಸೇತುವೆಗಳು, 590 ಕೆರೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಇವುಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಈವರೆಗೂ ಆರಂಭವಾಗಿಲ್ಲ. ಇದರಿಂದಾಗಿ ಹೊಂಡ, ಗುಂಡಿಗಳಿಂದಲೇ ತುಂಬಿರುವ ರಸ್ತೆಗಳಲ್ಲೇ ವಾಹನಗಳು ಸರ್ಕಸ್ ಮಾಡಿಕೊಂಡು ಸಂಚರಿಸುತ್ತಿವೆ. ಬೆಳಗಾವಿ ನಗರವೂ ಇದಕ್ಕೆ ಹೊರತಾಗಿಲ್ಲ.

***

ಪ್ರವಾಹ ಬಂದು ಎರಡು ತಿಂಗಳುಗಳಾದರೂ ಸರ್ಕಾರವು ಬೆಳೆ ಪರಿಹಾರ ಘೋಷಿಸಿಲ್ಲ. ಇದರಿಂದಾಗಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು.

– ಚೂನಪ್ಪ ಪೂಜಾರಿ, ಸಂಚಾಲಕ, ರಾಜ್ಯ ರೈತ ಸಂಘ

***

ಹಾನಿ ವಿವರ (ಕೋಟಿ ರೂಪಾಯಿಗಳಲ್ಲಿ)

ಸಾರ್ವಜನಿಕ ಆಸ್ತಿ;2149.54

ಮನೆಗಳ ಹಾನಿ;2996.58

ಬೆಳೆಗಳು;3229.08

ಜಾನುವಾರುಗಳು;9.29

ಖಾಸಗಿ ಆಸ್ತಿ;2808.54

ಒಟ್ಟು;11193.03

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT