ಪ್ರವಾಹ ತಗ್ಗಿದರೂ ತಪ್ಪದ ಅಪಾಯ

7
ಸಂಕಷ್ಟದಲ್ಲಿ ಗಿರಿಜನರ ಹಾಡಿ ವಿದ್ಯಾರ್ಥಿಗಳು

ಪ್ರವಾಹ ತಗ್ಗಿದರೂ ತಪ್ಪದ ಅಪಾಯ

Published:
Updated:
Deccan Herald

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಮಹಾಮಳೆಯ ಸಂಕಷ್ಟವು ವಿರಾಜಪೇಟೆ ತಾಲ್ಲೂಕಿನ ಗಿರಿಜನರಿಗೂ ತಟ್ಟದೇ ಬಿಟ್ಟಿಲ್ಲ. ಒಂದೆಡೆ ಹಾಡಿ ಜನರಿಗೆ ಕೂಲಿ ಸಿಗುತ್ತಿಲ್ಲ; ಮತ್ತೊಂದೆಡೆ ಹಾಡಿಯ ರಸ್ತೆ, ತೊರೆ ತೋಡುಗಳ ಸೇತುವೆ ಕುಸಿದು ನಡೆದಾಡುವುದಕ್ಕೂ ಕಷ್ಟ ಎದುರಾಗಿದೆ.

ಪೊನ್ನಂಪೇಟೆಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುಂದ ಈಚೂರು ಗಿರಿಜನ ಹಾಡಿಗೆ ಸಂಪರ್ಕ ಕಲ್ಪಿಸಲು ಹಾತೂರು ತೋಡಿಗೆ ನೂತನವಾಗಿ ನಿರ್ಮಿಸಿದ್ದ ಕಾಂಕ್ರೀಟ್‌ ಸೇತುವೆ ಒಂದು ಬದಿಯಲ್ಲಿ ಕುಸಿದು ಬಿದ್ದಿದೆ. ಹಾಡಿಯ ಜನರು ತೊರೆ ದಾಟಲು ಕಷ್ಟವಾಗಿ ಮರದ ದಿಮ್ಮಿ ಹಾಕಿ ಮಾರ್ಗ ಮಾಡಿಕೊಂಡಿದ್ದಾರೆ. 

‘ಸೇತುವೆಯನ್ನು ಸ್ವಲ್ಪವೂ ಎತ್ತರಗೊಳಿಸಿದೆ ನೆಲಮಟ್ಟದಲ್ಲಿಯೇ ನಿರ್ಮಿಸಿರುವುದರಿಂದ ಸಣ್ಣ ಮಳೆ ಬಂದರೂ ಸೇತುವೆ ಮೇಲೆ 10 ಅಡಿ ನೀರು ಬರಲಿದೆ. ಈ ಬಾರಿ ಬಿದ್ದ ಭಾರಿ ಮಳೆಗೆ ಸುಮಾರು 20 ಅಡಿಗಳಷ್ಟು ನೀರು ಬಂದಿತ್ತು’ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು ಹಾಡಿಯ ಯರವರ ಬೇರ.

ಮಳೆಗಾಲದಲ್ಲಿ 10 ದಿನಗಳವರೆಗೆ ಉಕ್ಕಿ ಹರಿದ ತೊರೆ ದಾಟಲು ಗೋಣಿಕೊಪ್ಪಲಿನ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ತಂದು ಸಹಾಯ ಮಾಡಿದ್ದರು. ಒಮ್ಮೆ ದೋಣಿ ಇಲ್ಲದೇ ಬಂದ ಸಿಬ್ಬಂದಿ, ಮರದಿಂದ ಮರಕ್ಕೆ ಕಟ್ಟಿದ್ದ ತಂತಿ ಹಿಡಿದು ತೊರೆ ದಾಟುವಾಗ ನೀರಿನಲ್ಲಿ ಕೊಚ್ಚಿಹೋಗುವುದರಲ್ಲಿದ್ದರು. ಆದರೆ, ಸ್ವಲ್ಪದರಲ್ಲಿಯೇ ಪಾರಾದರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ, ದೋಣಿಯಲ್ಲಿ ಬಂದು ಹಾಡಿಯ ಜನತೆಗೆ ಆಹಾರ ಒದಗಿಸಿದ್ದರು. ಅಷ್ಟರ ಮಟ್ಟಿಗೆ ಹಾಡಿಯ ಜನರು ಮಳೆಯ ಸಂಕಷ್ಟಕ್ಕೆ ಸಿಲುಕಿದ್ದರು.

ಈಗ ತೋಡಿನ ನೀರು ಇಳಿದಿದ್ದರೂ ಅಪಾಯ ತಪ್ಪಿಲ್ಲ. ಹಾಡಿಯಲ್ಲಿರುವ ಸುಮಾರು 30ಕ್ಕೂ ಹೆಚ್ಚಿನ ಮಕ್ಕಳು ಶಾಲೆಗೆ ತೆರಳುವಾಗ ಮರದ ದಿಮ್ಮಿ ಸೇತುವೆಯನ್ನೇ ದಾಟಬೇಕಾಗಿದೆ. ಸೇತುವೆ ಎಡಬಲದಲ್ಲಿ ತೋಡಿನ ಆಳ ಹೆಚ್ಚಿದೆ. ಪುಟಾಣಿ ಮಕ್ಕಳು ಶಾಲೆಗೆ ಹೋಗಿ ಬರುವಾಗ ಕೈಕಾಲು ತೊಳೆಯಲು ನೀರಿಗಿಳಿಯುತ್ತಾರೆ. ಸೇತುವೆಗೆ ಯಾವುದೇ ತಡೆಗೋಡೆಯಿಲ್ಲ. ಜತೆಗೆ ಮರದ ದಿಮ್ಮಿ ದಾಟುವಾಗ ಎಲ್ಲಿ ಅಪಾಯ ಸಂಭವಿಸುವುದೋ ಎಂಬ ಆತಂಕ ಹಾಡಿ ಜನತೆಯನ್ನು ಕಾಡುತ್ತಿದೆ.

ಈ ಹಾಡಿಯ ಸುತ್ತ ತೋಡು ಆವರಿಸಿಕೊಂಡಿದೆ. ನೀರು ತುಂಬುತ್ತಿದ್ದ ಹಳ್ಳಿಗಟ್ಟು ಬಳಿಯ ಸೀತಾ ಕಾಲೊನಿಯ ಗಿರಿಜನರನ್ನು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಜಾಗಕ್ಕೆ 6 ತಿಂಗಳ ಹಿಂದೆ ತಂದು ಬಿಡಲಾಯಿತು. ಸುಮಾರು 80 ಕುಟುಂಬಗಳ ಗಿರಿಜನರು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಇವರಿಗೆ ತೋಡು ದಾಟಲು ಬೇರೆ ಮಾರ್ಗವಿಲ್ಲ.

ತಡೆಗೋಡೆ ನಿರ್ಮಿಸಿ ಸೇತುವೆ ಎತ್ತರವನ್ನು ಹೆಚ್ಚಿಸಬೇಕು ಎಂದು ಹಾಡಿಯ ಜೆ.ಕೆ.ರಾಮು ಒತ್ತಾಯಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !