ಶನಿವಾರ, ಡಿಸೆಂಬರ್ 14, 2019
24 °C
ಪೂರ್ತಿ ಮನೆ ಕುಸಿದಿದ್ದರೂ ತಪ್ಪು ಲೆಕ್ಕ: ಸಂತ್ರಸ್ತ ಕುಟುಂಬದ ಆರೋಪ

ಬುದ್ಧಿಮಾಂದ್ಯರ ಮನೆಗೆ ‘ಭಾಗಶಃ’ ಪರಿಹಾರ!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅದು ಮೂವರು ಬುದ್ಧಿಮಾಂದ್ಯರು ಹಾಗೂ ಕಣ್ಣು ಕಾಣದ ಹಿರಿಜೀವವಿರುವ ಕುಟುಂಬ. ಮಹಾಮಳೆಗೆ ಸೂರು ಕಳೆದುಕೊಂಡ ಅವರಿಗೆ ಈಗ ಅಂಗನವಾಡಿಯೇ ಆಸರೆ. ಒಬ್ಬಳೇ ಗಟ್ಟಿಗಿತ್ತಿ ಕೂಲಿ ಮಾಡಿ ಐವರ ತುತ್ತಿನ ಚೀಲ ತುಂಬಬೇಕು. ಇವರ ಮನೆ ಪೂರ್ತಿ ನೆಲಸಮವಾಗಿದ್ದರೂ ಜಿಲ್ಲಾಡಳಿತದ ಲೆಕ್ಕದಲ್ಲಿ ಅದು ‘ಭಾಗಶಃ’ ಹಾನಿಯಷ್ಟೇ!

ಇದು ಹಾವೇರಿ ತಾಲ್ಲೂಕಿನ ಕೋಡಬಾಳ ಗ್ರಾಮದ ಚರಂತಿಮಠ ಕುಟುಂಬದ ಕಣ್ಣೀರ ಕತೆ. ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಅಬ್ಬರಿಸಿದ ಮಳೆಗೆ ಅವರ ಮನೆ ಸಂಪೂರ್ಣ ನೆಲಸಮವಾಯಿತು. ಕುಟುಂಬದ ಆಧಾರವಾಗಿರುವ ಶೈಲಾ ಚರಂತಿಮಠ ಅವರು ಬುದ್ಧಿಮಾಂದ್ಯ ಪತಿ, ಮಗ– ಮಗಳನ್ನು ಹಾಗೂ ಕಣ್ಣು ಕಾಣಿಸದ ಅಜ್ಜಿಯನ್ನು ಕರೆದುಕೊಂಡು ಅಂಗನವಾಡಿ ಸೇರಿದರು. ಜಿಲ್ಲಾಡಳಿತ ಅದನ್ನೇ ಕಾಳಜಿ ಕೇಂದ್ರವನ್ನಾಗಿ ಮಾಡಿ, ಆಸರೆಯ ವ್ಯವಸ್ಥೆ ಮಾಡಿಕೊಟ್ಟಿತು.

ಆರಂಭದ ಕೆಲ ದಿನಗಳವರೆಗೆ ಅವರಿಗೆ ಸರ್ಕಾರದಿಂದಲೇ ಆಹಾರ ಸಾಮಗ್ರಿಗಳ ವಿತರಣೆ ಆಗುತ್ತಿತ್ತು. ಕ್ರಮೇಣ ಅದು ಬಂದ್ ಆಗಿದ್ದರಿಂದ ಶೈಲಾ ಕೂಲಿಗೆ ಹೋಗುವುದು ಅನಿವಾರ್ಯವಾಯಿತು.

‘ನನ್ ಮನೆ ಹೆಂಗಿತ್ತೋ ಹಂಗೆ ವಾಪಸ್ ಬೇಕು. ಅದು ಪೂರ್ತಿ ಕುಸಿದೋಗಿದ್ರು ಶೇ 25ರಷ್ಟು ಹಾನಿ ಆಗೈತೆ ಅಂತ ಬರ್ಕೊಂಡಾರ. ಎರಡು ತಿಂಗಳಾದ ಮ್ಯಾಗ ₹21 ಸಾವಿರ ಖಾತೆಗೆ ಜಮಾ ಮಾಡ್ಯಾರ. ಅರ್ಧ ಮನೆ ಬಿದ್ದವರೂ, ಹೊಸ ಮನೆಗೆ ಅಡಿಪಾಯ ಹಾಕ್ಸೋಕೆ ಅಂತ ಸರ್ಕಾರದಿಂದ ₹ 1 ಲಕ್ಷ ಪರಿಹಾರ ತಗೋತಿದಾರ. ನಾವೂ ಹಂಗೆ ಗಟ್ಟಿಯಾಗಿ ಕೇಳೋಣ ಅಂದ್ರ ನಮ್ಗೆ ಧೈರ್ಯ ಇಲ್ರಿ’ ಎನ್ನುತ್ತಾ ಕಣ್ಣೀರಿಟ್ಟರು ಶೈಲಾ.

ತಕ್ಷಣ ಪರಿಹಾರದ ಭರವಸೆ
‘ಹಾನಿ ಪ್ರಮಾಣ ಆಧರಿಸಿ ಎಲ್ಲ ಸಂತ್ರಸ್ತರಿಗೂ ಪರಿಹಾರ ಕೊಟ್ಟಿರುವುದಾಗಿ ತಹಶೀಲ್ದಾರ್ ಹೇಳಿದ್ದಾರೆ. ಚರಂತಿಮಠ ಕುಟುಂಬದ ಪರಿಸ್ಥಿತಿಯನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ವಿವರ ತರಿಸಿಕೊಂಡು ಅವರಿಗೆ ಹೆಚ್ಚುವರಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಭರವಸೆ ನೀಡಿದರು.

*
ಚರಂತಿಮಠ ಕುಟುಂಬದ ಪರಿಸ್ಥಿತಿಯ ಬಗ್ಗೆ ವಿವರ ತರಿಸಿಕೊಂಡು ಅವರಿಗೆ ಹೆಚ್ಚುವರಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ.
-ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು