ಗುರುವಾರ , ಅಕ್ಟೋಬರ್ 17, 2019
22 °C

ನೆರೆ ಪರಿಹಾರ: ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ‘ –ಸತೀಶ ಜಾರಕಿಹೊಳಿ ಟೀಕೆ

Published:
Updated:

ಬೆಳಗಾವಿ: ರಾಜ್ಯದಲ್ಲಿ ನೆರೆ ಹಾನಿ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ನೀಡಿರುವ ₹1200 ಕೋಟಿ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಆ ಹಣ ಪ್ರವಾಹಬಾಧಿತ ಶೇ 10ರಷ್ಟು ಪ್ರದೇಶಗಳಿಗೂ ಸಾಲದು ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ನಾವು ಹೋರಾಟ ಮಾಡಿದ ಫಲವಾಗಿ ಇಷ್ಟು ಅನುದಾನವಾದರೂ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ಕೊಡಬೇಕು' ಎಂದರು. 

'ಬೆಳಗಾವಿಯಲ್ಲಿ ನಾವು ನಡೆಸಿದ  ಪ್ರತಿಭಟನೆಗೆ ಮಣಿದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರೆಬಾಧಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ' ಎಂದರು.

ಇದನ್ನೂ ಓದಿ... ನೆರೆ ಪರಿಹಾರ: ಹೆಚ್ಚುವರಿ ಹಣ ಬಿಡುಗಡೆಗೆ ಸಿದ್ಧ -ಬಿ.ಎಸ್.ಯಡಿಯೂರಪ್ಪ ಭರವಸೆ

 'ಮನೆ ನಿರ್ಮಾಣಕ್ಕೆ ₹ 5 ಲಕ್ಷ ಕೊಡುವುದಾಗಿ ಮುಖ್ಯಮಂತ್ರಿ  ಘೋಷಿಸಿದ್ದಾರೆ. ಇದರ ಬಗ್ಗೆ ಅಧಿಕೃತ ಆದೇಶ ಹೊರಬೀಳಬೇಕು. ಕೇವಲ ಬಾಯಿ ಮಾತು ನಡೆಯುವುದಿಲ್ಲ' ಎಂದು ಹೇಳಿದರು.

'ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಬಿಜೆಪಿಯವರೂ ಒತ್ತಾಯಿಸಿದ್ದಾರೆ. ಅವರಲ್ಲಿ ಕೆಲವರಿಗೆ ಬಿಜೆಪಿಯಿಂದ ನೋಟಿಸ್ ನೀಡಿ ಅವರನ್ನು ದೇಶದ್ರೋಹಿ ಎನ್ನಲಾಗಿದೆ' ವ್ಯಂಗ್ಯವಾಡಿದರು.

ಇದನ್ನೂ ಓದಿ... ಪ್ರವಾಹ | ಕೇಂದ್ರದಿಂದ ಮುಂಗಡ ಪರಿಹಾರ ಬಿಡುಗಡೆ, ರಾಜ್ಯಕ್ಕೆ ₹ 1,200 ಕೋಟಿ ನೆರವು

'ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವಂತೆ ವಿಧಾನಮಂಡಲ ಅಧಿವೇಶನದಲ್ಲೂ ದನಿ ಎತ್ತುತ್ತೇವೆ. ಡಿಸೆಂಬರ್ ತಿಂಗಳಲ್ಲಾದರೂ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕು' ಎಂದು ಒತ್ತಾಯಿಸಿದರು.

 'ಉಪ ಚುನಾವಣೆಗೆ, ವಿಶೇಷವಾಗಿ ಗೋಕಾಕ ಮತಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ' ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ... ಕೇಂದ್ರದಿಂದ ‘ಅರೆಕಾಸಿನ ಪ್ಯಾಕೇಜ್’: ಸಿದ್ದರಾಮಯ್ಯ ಟೀಕೆ

Post Comments (+)