ಬುಧವಾರ, ಅಕ್ಟೋಬರ್ 23, 2019
27 °C
ಬೆಳೆ ಹಾನಿ ಪರಿಹಾರ ಹೆಚ್ಚಳ

ಮನೆ ಕಳೆದುಕೊಂಡ ಎಲ್ಲರಿಗೂ ಸೂರು: ಬಿ.ಎಸ್‌. ಯಡಿಯೂರಪ್ಪ ಭರವಸೆ

Published:
Updated:

ಬೆಂಗಳೂರು: ಪ್ರವಾಹದಿಂದ ಮುಳುಗಡೆಯಾದ ಗ್ರಾಮಗಳನ್ನು ಎತ್ತರ ಪ್ರದೇಶಗಳಿಗೆ ಸ್ಥಳಾಂತರ, ಬೆಳೆ ಹಾನಿ ಪರಿಹಾರ ಮೊತ್ತ ಇನ್ನಷ್ಟು ಹೆಚ್ಚಳ ಮತ್ತು ನೆರೆ ಬಳಿಕವೂ ಮನೆಗಳು ಬಿದ್ದು ಹೋಗಿದ್ದರೆ ಮನೆ ಕಟ್ಟಿಸಿಕೊಳ್ಳಲು ಹಣ ನೀಡಲು ಸರ್ಕಾರ ತೀರ್ಮಾನಿಸಿದೆ.

ನೆರೆ ಪೀಡಿತ ಪ್ರದೇಶಗಳ ಸಂಕಷ್ಟದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ನೀಡಿ ಈ ವಿಷಯ ತಿಳಿಸಿದರು.

ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು. ವಿಧಾನಸಭೆಯೇ ರಾಷ್ಟ್ರೀಯ ವಿಪತ್ತು ಎಂಬ ನಿರ್ಣಯವನ್ನು ಅಂಗೀಕಾರ ಮಾಡಬೇಕು ಎಂಬ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಅವರ ಪ್ರಸ್ತಾವವನ್ನು ಸರ್ಕಾರ ತಳ್ಳಿಹಾಕಿತು.

ಎತ್ತರ ಪ್ರದೇಶಗಳಿಗೆ ಸ್ಥಳಾಂತರ: ಮುಳುಗಡೆ ಆಗಿರುವ ಗ್ರಾಮಗಳನ್ನು ಸ್ಥಳಾಂತರ ಮಾಡಲು ಅಲ್ಲಿನ ಗ್ರಾಮಸ್ಥರು ಒಪ್ಪಿಕೊಂಡಿರುವುದರಿಂದ; ಎತ್ತರ ಪ್ರದೇಶದಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.

ನೆರೆ ಪೀಡಿತ ಪ್ರದೇಶದಲ್ಲಿ ಬಹಳ ದಿನಗಳ ಬಳಿಕ ಸಾಕಷ್ಟು ಮನೆಗಳು ಕುಸಿದು ಬಿದ್ದಿರುವುದೂ ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲೂ ಮನೆಗಳನ್ನು ಕಟ್ಟಿ ಕೊಳ್ಳಲು ಸಂತ್ರಸ್ತರಿಗೆ ತಲಾ ₹5 ಲಕ್ಷ ನೀಡುತ್ತೇವೆ ಎಂದರು.

ಒಂದೇ ಮನೆಯಲ್ಲಿ ಮೂರು ಕುಟುಂಬಗಳು ವಾಸವಾಗಿದ್ದು, ಮನೆ ಕಳೆದುಕೊಂಡಿದ್ದರೆ, ಇದೇ ನೆಪದಲ್ಲಿ ಮೂರು ಕುಟುಂಬಗಳಿಗೂ ಪ್ರತ್ಯೇಕ ಮನೆಗಳನ್ನು ಕಟ್ಟಿಸಿಕೊಡುತ್ತೇವೆ. ಇದಕ್ಕಾಗಿ ವಸತಿ ಯೋಜನೆಗಳ ಹಣವನ್ನು ಇದಕ್ಕೆ ಬಳಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಬೆಳೆ ಹಾನಿಗೆ ಪರಿಹಾರ ಹೆಚ್ಚಳ: ಬೆಳೆ ಹಾನಿ ಪರಿಹಾರದ ಮೊತ್ತವನ್ನು ತಲಾ ₹ 10 ಸಾವಿರ ಹೆಚ್ಚಿಸಲು ತೀರ್ಮಾ
ನಿಸಲಾಗಿದೆ. ಪ್ರವಾಹದ ಸಂದರ್ಭದಲ್ಲಿ ಅಂಗಡಿ ಒಳಗೆ ನೀರು ನುಗ್ಗಿ ಹಾಳಾಗಿದ್ದರೆ ಅದಕ್ಕೆ ತಲಾ ₹20 ಸಾವಿರ, ನೇಕಾರರ ಮಗ್ಗಗಳಿಗೆ ತಲಾ ₹25 ಸಾವಿರ ಪರಿಹಾರ ನೀಡುವುದಾಗಿ ಹೇಳಿದರು.

₹10 ಲಕ್ಷ ಪರಿಹಾರಕ್ಕೆ ಆಗ್ರಹ: ನೆರೆ ಪೀಡಿತ ಪ್ರದೇಶಗಳಲ್ಲಿ ಪೂರ್ಣ ಮನೆ ಕಳೆದುಕೊಂಡವರಿಗೆ ತಲಾ ₹10 ಲಕ್ಷ ನೀಡಬೇಕು. ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಮತ್ತು ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ ತಲಾ ₹ 1ಲಕ್ಷ ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೇಡಿಕೆಗೆ ಮುಖ್ಯಮಂತ್ರಿ ಸಮ್ಮತಿಸಲಿಲ್ಲ.

‘ರೈತರಿಗೆ ನಷ್ಟ ಮಾಡಿದ ಸರ್ಕಾರ’
ಅತಿವೃಷ್ಟಿಯಿಂದಾದ ಅನಾಹುತವನ್ನು ಸಕಾಲದಲ್ಲಿ ‘ಮಿಡ್ ಸೀಸನ್ ಅಡ್ವರ್ಸಿಟಿ’ ಎಂದು ಘೋಷಿಸಿದ್ದರೆ ರೈತರಿಗೆ ಬೆಳೆವಿಮೆ ಪರಿಹಾರ ರೂಪದಲ್ಲಿ ₹4 ಸಾವಿರ ಕೋಟಿಯಿಂದ ₹5 ಸಾವಿರ ಕೋಟಿ ಪರಿಹಾರ ಮೊತ್ತ ಸಿಗುತ್ತಿತ್ತು. ಸರ್ಕಾರದ ಬೇಜವಾಬ್ದಾರಿಯಿಂದ ರೈತರಿಗೆ ಅಪಾರ ನಷ್ಟ ಉಂಟಾಯಿತು ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಆಪಾದಿಸಿದರು.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ವರ್ಷಕ್ಕೆ ₹800 ಕೋಟಿಯಿಂದ ₹1 ಸಾವಿರ ಕೋಟಿ ಕಂತು ಕಟ್ಟಲಾಗುತ್ತಿದೆ. ಅತಿವೃಷ್ಟಿಯಾದ 15 ದಿನದಲ್ಲಿ ಘೋಷಣೆ ಮಾಡಿದ್ದರೆ ರೈತರಿಗೆ ಎಕರೆಗೆ ಕನಿಷ್ಠ ₹10ಸಾವಿರ ವಿಮಾ ಪರಿಹಾರ ಸಿಗುತ್ತಿತ್ತು. ಈಗ ರೈತರು ಕೋರ್ಟ್‌ಗೆ ಹೋದರೆ ಸರ್ಕಾರ ಈ ಮೊತ್ತವನ್ನು ಭರಿಸಬೇಕಾಗುತ್ತದೆ ಎಂದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)