ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಭರಾಟೆಯಲ್ಲಿ ‘ನಗಣ್ಯ’ವಾದ ಸಂತ್ರಸ್ತರ ಬವಣೆ

ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳೂ ಪ್ರವಾಹಪೀಡಿತವಾದವೇ
Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಅಥಣಿ, ಗೋಕಾಕ ಮತ್ತು ಕಾಗವಾಡ ಕ್ಷೇತ್ರಗಳಲ್ಲಿಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿರುವ ಜನಪ್ರತಿನಿಧಿಗಳಿಗೆ ಸಂತ್ರಸ್ತರ ಬವಣೆಗಳು ನಗಣ್ಯವಾಗಿವೆ.

ಅಥಣಿ ಹಾಗೂ ಕಾಗವಾಡದಲ್ಲಿ ಕೃಷ್ಣಾ ನದಿ ಪ್ರವಾಹ ಬಂದಿತ್ತು. ಗೋಕಾಕ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಮಹಾಪೂರದಿಂದಾಗಿ ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ಮನೆ, ಬೆಳೆ, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತ ಆದ್ಯತೆ ಕೊಡಬೇಕಾದ ಆಡಳಿತ ಪಕ್ಷದ ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳು ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳುವತ್ತ ‘ಗುರಿ’ ನೆಟ್ಟಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷದವರು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಅರ್ಹ–ಅನರ್ಹ ಶಾಸಕರ ಚರ್ಚೆಯ ನಡುವೆ, ಸಂತ್ರಸ್ತರ ಸಂಕಷ್ಟಗಳು ಚರ್ಚೆಯ ವಸ್ತುವಾಗಿಲ್ಲ. ಅವರ ಕಷ್ಟ ಕೇಳುತ್ತಲೂ ಇಲ್ಲ.

ಗೋಕಾಕದಲ್ಲಿ ಜಾರಕಿಹೊಳಿ ಸಹೋದರರ ನಡುವಿನ ಜಿದ್ದಾಜಿದ್ದಿಯೇ ಪ್ರಮುಖ ಚರ್ಚೆಯ ವಸ್ತುವಾಗಿದೆ.

ಪ್ರತಿಭಟನೆ, ಬಹಿಷ್ಕಾರ: 2019–20ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಇತ್ತು. ‘ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಚುನಾವಣಾ ಕಾರ್ಯಗಳಲ್ಲಿ ತೊಡಗಿರುವುದರಿಂದ ಸಭೆ ಮುಂದೂಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. ಹೀಗೆ, ಆಡಳಿತ ಯಂತ್ರವೂ ಚುನಾವಣೆ ಕೆಲಸ ಕೇಂದ್ರೀಕರಿಸಿರುವುದರಿಂದ ನೆರೆ ಪರಿಹಾರ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಪರಿಹಾರಕ್ಕಾಗಿ ಆಗ್ರಹಿಸಿ ಒಂದಿಲ್ಲೊಂದು ಸಂಘಟನೆಯವರು ಅಥವಾ ಗ್ರಾಮಸ್ಥರು ಪ್ರತಿಭಟಿಸುವುದು ಸಾಮಾನ್ಯವಾಗಿದೆ. ನೆರೆ ಪರಿಹಾರ ಸಿಗದಿದ್ದರಿಂದ ಆಕ್ರೋಶಗೊಂಡ ಅಥಣಿ ತಾಲ್ಲೂಕಿನ ಜನವಾಡ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಉಪಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಅವರಿಗೆ ‘ಬೆಳಗಾವಿ ಜಿಲ್ಲೆಯ ನೆರೆ ಪರಿಹಾರ ಕಾರ್ಯದ ಉಸ್ತುವಾರಿ’ ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಚಿಕ್ಕೋಡಿ ವಿಭಾಗದ ಉಸ್ತುವಾರಿ ಕೊಡಲಾಗಿದೆ. ಅವರು ಚುನಾವಣೆಗೂ ಮುನ್ನ ತಲಾ ಒಂದು ಸಭೆ ನಡೆಸಿದ್ದು ಬಿಟ್ಟರೆ, ಬಳಿಕ ಪರಿಹಾರ ಕಾರ್ಯದ ಪ್ರಗತಿ ಪರಿಶೀಲಿಸಿಲ್ಲ. ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಹಾಗೂ ಆಡಳಿತಾರೂಢ ಬಿಜೆಪಿ ಶಾಸಕರು ಕೂಡ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಸಿಗುವುದು ಯಾವಾಗ?: ‌‘ಅಥಣಿಯವರೇ ಉಪಮುಖ್ಯಮಂತ್ರಿ ಇದ್ದಾರೆ. ಇಲ್ಲಿನ ಶಾಸಕರಂತೂ ಅನರ್ಹ ಶಾಸಕರಾಗಿ, ಮತ್ತೆ ಚುನಾವಣೆಗೆ ನಿಂತಿದ್ದಾರೆ. ಇವರೆಲ್ಲರೂ ಚುನಾವಣೆ ಕೇಂದ್ರೀಕರಿಸಿದ್ದಾರೆ. ಅಧಿಕಾರಿಗಳೂ ಎಲೆಕ್ಷನ್ ಡ್ಯೂಟಿ ಮೇಲಿದ್ದಾರೆ. ಹೀಗಾಗಿ, ಸಂತ್ರಸ್ತರಿಗೆ ಪರಿಹಾರ ಕಾರ್ಯ ತಲುಪಿಸುವ ಕೆಲಸಗಳು ತ್ವರಿತವಾಗಿ ನಡೆಯುತ್ತಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರವೂ ಸಿಕ್ಕಿಲ್ಲ. ಮನೆಗಳ ಮರು ಸಮೀಕ್ಷೆ ಕಾರ್ಯವೂ ಸ್ಥಗಿತಗೊಂಡಿದೆ. ಕಚೇರಿಗಳ ಸಿಬ್ಬಂದಿಯೂ ಎಲೆಕ್ಷನ್‌ ಡ್ಯೂಟಿಯಲ್ಲಿದ್ದೇವೆ ಎನ್ನುತ್ತಿದ್ದಾರೆ. ಹೀಗಿರುವಾಗ, ನೊಂದವರಿಗೆ ಪರಿಹಾರ ಸಿಗುವುದು ಯಾವಾಗ?’ ಎಂದು ಭಾರತೀಯ ಕಿಸಾನ್‌ ಸಂಘ ಅಥಣಿ ತಾಲ್ಲೂಕು ಘಟಕದ ಕಾರ್ಯದರ್ಶಿ ಭರಮಾ ನಾಯಕ ಕೇಳಿದರು.

‘ಸ್ಥಳೀಯ ಅಧಿಕಾರಿಗಳು ನೀತಿಸಂಹಿತೆ ನಡುವೆ ಸ್ವಯಂ ಸ್ಫೂರ್ತಿಯಿಂದ ಕೆಲಸ ಮಾಡುವುದಿಲ್ಲ. ಹೀಗಾಗಿ, ಪರಿಹಾರ ಕಾರ್ಯ ಸಹಜವಾಗಿಯೇ ತೆವಳುತ್ತಿದೆ’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT