ಶನಿವಾರ, ನವೆಂಬರ್ 23, 2019
17 °C
ನೊಂದ ನೇಕಾರರಿಗೆ ಎರಡೂವರೆ ತಿಂಗಳು ಕಳೆದರೂ ತಲುಪದ ಪರಿಹಾರ

ನೆರೆ ಸಂತ್ರಸ್ತರ ಬದುಕು ‘ಮೂರಾಬಟ್ಟೆ’

Published:
Updated:
Prajavani

ಬೆಳಗಾವಿ: ಮಲಪ್ರಭಾ ನದಿ ಪ್ರವಾಹದಿಂದಾಗಿ ಮಗ್ಗಗಳು ಮತ್ತು ಸೂರುಗಳನ್ನು ಕಳೆದುಕೊಂಡಿರುವ ಜಿಲ್ಲೆಯ ನೇಕಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನೆರೆ ಬಂದು ಎರಡೂವರೆ ತಿಂಗಳಾದರೂ ಅವರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ದುಡಿಯಲು ಮಗ್ಗವಿಲ್ಲದೇ ಅವರ ಬದುಕು ಮೂರಾಬಟ್ಟೆಯಾಗಿದೆ.

ಜಿಲ್ಲಾಡಳಿತದ ಮಾಹಿತಿ ‍ಪ್ರಕಾರ ಬರೋಬ್ಬರಿ 1,763 ಮಗ್ಗಗಳು ಹಾಳಾಗಿವೆ. ಸವದತ್ತಿ ತಾಲ್ಲೂಕಿನ ಮುನವಳ್ಳಿ, ರಾಮದುರ್ಗ ಪಟ್ಟಣ, ತಾಲ್ಲೂಕಿನ ಹಲಗತ್ತಿ, ಸುರೇಬಾನ, ರಾಯಬಾಗ ತಾಲ್ಲೂಕಿನ ಪರಮಾನಂದವಾಡಿ ಮೊದಲಾದ ಕಡೆಗಳಲ್ಲಿ ಹೆಚ್ಚಿನ ಮಗ್ಗಗಳು ನೀರು ಪಾಲಾಗಿವೆ.

ನಷ್ಟ ಅನುಭವಿಸಿರುವ ಬಹುತೇಕರಿಗೆ, ಅವುಗಳನ್ನು ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಈ ಕುಟುಂಬಗಳಿಗೆ ತಲಾ ₹ 10ಸಾವಿರ ತಾತ್ಕಾಲಿಕ ಪರಿಹಾರವಷ್ಟೇ ದೊರೆತಿದೆ. ಈ ಹಣ ಸಾಲದಾಗಿದೆ. ಮಗ್ಗ ಪ್ರತಿ ನೇಕಾರರಿಗೆ ತಲಾ ₹ 25ಸಾವಿರ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅ.3ರಂದು ಇಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದಾಗಿ 13 ದಿನಗಳೇ ಕಳೆದಿದ್ದರೂ ನೇಕಾರರಿಗೆ ಆರ್ಥಿಕ ನೆರವು ಸಿಕ್ಕಿಲ್ಲ!

ಕಣ್ಣೀರು ಬರುತ್ತದೆ: ‘ನಮ್ಮ 4 ಮಗ್ಗಗಳೂ ಹಲವು ದಿನಗಳವರೆಗೆ ನೀರಲ್ಲಿ ಮುಳುಗಿದ್ದವು. ಜವಳಿ ಇಲಾಖೆ ಅಧಿಕಾರಿಗಳು 2 ತಿಂಗಳ ಹಿಂದೆ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಪರಿಹಾರ ಬಂದಿಲ್ಲ. ಹಾಳಾದ ಮಗ್ಗಗಳನ್ನು ನೋಡಿದರೆ ಕಣ್ಣೀರು ಬರುತ್ತದೆ’ ಎಂದು ರಾಮದುರ್ಗ ತಾಲ್ಲೂಕು ಹಲಗತ್ತಿಯ ಶತೃರುಜ್ಞ ನಾಗಪ್ಪ ಹಾವನೂರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಕಷ್ಟಪಟ್ಟು ನೇಯ್ದಿದ್ದ 200ಕ್ಕೂ ಹೆಚ್ಚಿನ ಸೀರೆಗಳು ಹಾಳಾದವು. ನಮ್ಮೂರಲ್ಲಿಯೇ 56 ಮಗ್ಗಗಳು ಹಾಳಾಗಿವೆ. ದುರಸ್ತಿ ಮಾಡಿಸಲು ಸಮರ್ಪಕ ಪರಿಹಾರ ಬೇಕು’ ಎನ್ನುತ್ತಾರೆ ಅವರು.

ಸಾಲ ಮಾಡಿದ್ದೇನೆ: ‘ನಮ್ಮ 3 ಮಗ್ಗಗಳು ಹಾಳಾಗಿವೆ. 2 ತಿಂಗಳುಗಳಿಂದ ಕೆಲಸವಿರಲಿಲ್ಲ. ಕಳೆದ ವಾರ ಸಾಲ ಮಾಡಿ 2 ಮಗ್ಗಗಳನ್ನು ಸಿದ್ಧಪಡಿಸಿ ಚಾಲೂ ಮಾಡಿದ್ದೇವೆ. ನಮಗೆ ಬಂದ ಸಂಕಷ್ಟ ಯಾರಿಗೂ ಬಾರದಿರಲಿ’ ಎಂದು ಪ್ರಾರ್ಥಿಸಿದವರು ಮುನವಳ್ಳಿಯ ಮಾಗುಂಡಪ್ಪ.

‘ಮಗ್ಗ, ಮನೆಗಳನ್ನು ಕಳೆದುಕೊಂಡ ನೇಕಾರರು ಸಂಕಷ್ಟದಲ್ಲಿದ್ದಾರೆ. ರಾಮದುರ್ಗ ತಾಲ್ಲೂಕಿನ ಹಲಗತ್ತಿಯ ರಮೇಶ ನೀಲಕಂಠಪ್ಪ ಹವಳಕೋಡ (38) ಆತ್ಮಹತ್ಯೆಗೆ ಶರಣಾದರು. ಸರ್ಕಾರ ಗಂಭೀರವಾಗಿ ಪರಿಗಣಿಸಲಿ’ ಎಂದು ಹೋರಾಟಗಾರ ಅಶೋಕ ಚಂದರಗಿ ಒತ್ತಾಯಿಸಿದರು.

‘ಹಾಳಾದ ಮಗ್ಗದ ರಿಪೇರಿಗೆ ಕನಿಷ್ಠ ₹ 50 ಸಾವಿರ ಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಸದ್ಯಕ್ಕೆ ಘೋಷಿಸಿದ ಪರಿಹಾರ ಬೇಗ ದೊರೆಯುವಂತಾಗಬೇಕು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)