ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಲ್ಲೇ ಸ್ನಾನ; ಬಸ್‌ ಸ್ಟ್ಯಾಂಡ್ ನೆಲೆ!

ನೆರೆ ಬಂದು ಈಗ 40 ದಿನ; ಕೇಳುವವರಿಲ್ಲ ಸಂತ್ರಸ್ತರ ಗೋಳು
Last Updated 16 ಸೆಪ್ಟೆಂಬರ್ 2019, 3:11 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಕಳೆದ ಒಂದೂವರೆ ತಿಂಗಳಿನಲ್ಲಿ ಎರಡನೇ ಬಾರಿ ನೆರೆ ಹಾವಳಿಗೆ ತತ್ತರಿಸಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ಉಕ್ಕಿ ಹರಿದು ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿ ಮಾಡಿವೆ. ಸಾವಿರಾರು ಮಂದಿ ಮನೆ, ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರ್ಕಾರ ಪರಿಹಾರ ಕೇಂದ್ರಗಳನ್ನೇನೋ ತೆರೆದಿದೆ. ಆದರೆ, ಆರಂಭದ ದಿನಗಳಲ್ಲಿ ತೋರಿದ್ದ ಕಕ್ಕುಲಾತಿಯನ್ನು ಈಗ ತೋರುತ್ತಿಲ್ಲ. ಕೆಲವು ಪರಿಹಾರ ಕೇಂದ್ರಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡ ಚಿತ್ರಣ ಇಲ್ಲಿದೆ.

**

ಬಾಗಲಕೋಟೆ/ಬೆಳಗಾವಿ/ಗದಗ: ಕೃಷ್ಣೆ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿನ ಪ್ರವಾಹದ ಹುಚ್ಚು ನರ್ತನಕ್ಕೆ ಬಾಗಲಕೋಟೆ ಜಿಲ್ಲೆ ಸಂತ್ರಸ್ತಗೊಂಡು 40 ದಿನಗಳು ಕಳೆದಿವೆ. ಕೆಲವರು ಪರಿಹಾರ ಕೇಂದ್ರಗಳನ್ನು ಖಾಲಿಮಾಡಿದ್ದಾರೆ. ಇನ್ನೂ ಕೆಲವರು ಬಸ್‌ ನಿಲ್ದಾಣ, ಬೀದಿ ಬದಿ ಆಶ್ರಯ ಪಡೆದಿದ್ದಾರೆ.

ಹುನಗುಂದ ತಾಲ್ಲೂಕಿನ ಧನ್ನೂರಿನಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಅಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 21 ಕುಟುಂಬ ಆಸರೆ ಪಡೆದಿದ್ದು, ಅವರಿಗೆ ಊಟೋಪಚಾರದ ವ್ಯವಸ್ಥೆ ಇದೆ. ಉಳಿದವರು ಅಲ್ಲಲ್ಲಿ ಹಂಚಿಹೋದ ಹಾಳುಬಿದ್ದ ಕಟ್ಟಡ, 2009ರ ಪ್ರವಾಹದ ವೇಳೆ ಹಾಕಿದ್ದ ಹಳೆಯ ತಗಡಿನ ಶೆಡ್‌ಗಳಲ್ಲಿ ವಾಸವಿದ್ದಾರೆ.

ಶಾಲೆಯಲ್ಲಿ ಸಂತ್ರಸ್ತರೊಂದಿಗೆ ಕುರಿ–ಮೇಕೆ, ದನಗಳು ಆಶ್ರಯ ಪಡೆದಿವೆ. ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ಶಾಲೆ ಅವಧಿ. ಹೀಗಾಗಿ ಹಗಲು ಹೊತ್ತು ಎಲ್ಲರಿಗೂ ವನವಾಸ. ವೃದ್ಧರು, ಮಹಿಳೆಯರು, ಹಸುಗೂಸುಗಳು ಹೊರಗೆ ಕುಳಿತು ಕಾಲ ಕಳೆಯುತ್ತಾರೆ. ತಾತ್ಕಾಲಿಕ ಶೆಡ್‌ ಹಾಕಿಕೊಡಿ ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ.‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಸಂತ್ರಸ್ತರು ಅಳಲು ಬಿಚ್ಚಿಟ್ಟರು.

‘ನಸುಕು ಹರಿದ್ರಾ ಸಾಲಿಗುಡಿಗೆ ಮಕ್ಕಳು, ಮಾಸ್ತರು ಬರ್ತಾರ. ಹಂಗಾಗಿ 5 ಗಂಟೆಗೆ ಕತ್ತಲು ಇದ್ದಾಗಲೇ ಬಯಲಾಗ ಕುಂತು ಜಳಕ (ಸ್ನಾನ) ಮಾಡ್ತೇವ್ರಿ, ಸಂಡಾಸಿಗೂ (ಬಹಿರ್ದೆಸೆ) ಹೊರಗೆ ಹೋಗ್ತೀವ್ರಿ’ ಎಂದು ಅಲ್ಲಿ ಆಶ್ರಯ ಪಡೆದಿದ್ದ ಅಮೀನಾ ನದಾಫ ಹೇಳಿದರು.

ಸಂತ್ರಸ್ತರಲ್ಲಿ ಹಲವರು ಜ್ವರದಿಂದ ಬಳಲುತ್ತಿದ್ದು, ಶಾಲೆಯ ಪ್ರಾಂಗಣವೇ ಅವರ ಚಿಕಿತ್ಸೆಗೆ ತಾಣ. ‘ಮೊದಲೊಂದು ವಾರ ಸರ್ಕಾರಿ ವೈದ್ಯರು ಬಂದಿದ್ದರು. ಈಗ ಬರುತ್ತಿಲ್ಲ. ದುಡ್ಡು ಕೊಟ್ಟು ಖಾಸಗಿ ವೈದ್ಯರನ್ನು ಕರೆತಂದು ಮಗನಿಗೆ ಸಲೈನ್ (ಡ್ರಿಪ್) ಹಚ್ಚಿಸಿದ್ದೆ‘ ಎಂದು ಹೇಳಿದ ಗಿರಿಜಾ ಹಿರೇಮಠ, ‘ನಾವಾಗಿಯೇ ಫೋನ್ ಹಚ್ಚಿದರೆ ಮಾತ್ರ ಅದೂ ಗಂಟೆಗಟ್ಟಲೆ ಪೀಡಿಸಿ ಕುಡಿವ ನೀರು ತಂದುಕೊಡ್ತಾರ್ರೀ. ಹಂಗಾಗಿ ಇಲ್ಲಿಯೇ ಬೋರ್‌ವೆಲ್‌ನ ಸವಳು ನೀರು ಕುಡಿತೇವ್ರೀ’ ಎಂದರು.

ಮುಂಜಾನಿ 11ಕ್ಕ ನಾಷ್ಟ ಕೊಡ್ತಾರ್ರೀ...

‘ಹೋಗು ಅನ್ನಲಾರದಾ, ಹೊಗೆ ಹಾಕಿದ್ರು ಅನ್ನಂಗಾಗೈತಿ ನಮ್ ಬಾಳೇವು, ನಮ್ಮುನ್ನ ಯಾರೂ ದಾದ (ಕಾಳಜಿ) ಮಾಡಾವಲ್ರು,ಮುಂಜಾನಿ 11ಕ್ಕೆ ನಾಷ್ಟ ಎಂದು ವಗ್ಗರಣೆ ಅನ್ನ ತಂದುಕೊಡ್ತಾರ. ಅಲ್ಲೀವರೆಗೆ ಮಕ್ಕಳು ಹಸಿದುಕೊಂಡು ಅಳ್ತಾವೆ. ಊಟಕ್ಕೆ ಅನ್ನ, ನೀರು ಸಾರು, ಕೇಳಿದರೆ (ಪ್ರಶ್ನಿಸಿದರೆ) ಅದೂ ಸಿಗೊಲ್ಲ ಅಂತಾ ದಬಾಯಿಸ್ತಾರೆ’ ಎಂದು ವಿಜಯಲಕ್ಷ್ಮೀ ಕಟ್ಟೀಮನಿ ಕಣ್ಣೀರಾದರು.

‘ಮೊದಲೊಂದು ವಾರ ನಮ್ಮನ್ನು ಚೆನ್ನಾಗೇ ನೋಡಿಕೊಂಡರು. ನಂತರ ಕೈ ಬಿಟ್ಟರು. ಕುಡಿಯುವ ನೀರು, ಕರೆಂಟಿಗೂ ತೊಂದರೆ ಆತು. ಸೊಳ್ಳೆ ಕಡಿತದಿಂದ ಮಕ್ಕಳು ಸಾಮೂಹಿಕವಾಗಿ ಜ್ವರ ಪೀಡಿತವಾದವು. ಹೆದರಿಕೊಂಡು ಮನೀಗ ಬಂದೇವಿ, ಇಲ್ಲೂ ಅದೇ ಪರಿಸ್ಥಿತಿ ಐತಿ. ಸರ್ಕಾರಿ ಡಾಕ್ಟರ್ ಯಾರೂ ಬರಾವಲ್ರು, ಎರಡು ದಿನಕ್ಕೊಮ್ಮೆ ಬರುವ ಆರ್‌ಎಂಪಿಯೇ ನಮಗ ಆಧಾರ’ ಎಂದು ಯಂಕಪ್ಪ ಆರ್ಯಾರ ಹೇಳಿದರು.

‘ರೇಷನ್‌ ನಿಲ್ಸಿಬಿಟ್ರು;ರೊಕ್ಕಾ ಕೊಟ್ಟ ತಂದ್‌ ತಿನ್ಬೇಕ್ರಿ...’

‘ಮೊದ್ಲು ಅಡಗೀನ ಮಾಡಿ ಹಾಕ್ತಿದ್ರಿ...ಆಮ್ಯಾಲ್‌ ರೇಷನ್‌ ಕೊಡಾಕ್‌ ಶುರು ಮಾಡಿದ್ರು...ಈಗ ಅದ್ನೂ ನಿಲ್ಸಿಬಿಟ್ರಾ...ನಾವ್‌ ರೊಕ್ಕಾ ಕೊಟ್ಟ ಅಕ್ಕಿ, ಬ್ಯಾಳಿ ತರಾಕ್‌ಹತ್ತೇವಿ...’ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹಡಗಿನಾಳ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ಅಳಲು ತೋಡಿಕೊಂಡರು.

ಕಳೆದ ಆಗಸ್ಟ್‌ನಲ್ಲಿ ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಗ್ರಾಮದ ಹರಿಜನ ಕುಟುಂಬದ ಸದಸ್ಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ ತಾತ್ಕಾಲಿಕವಾಗಿ ನೆಲೆ ನಿಂತಿದ್ದಾರೆ. ಐದು ಕುಟುಂಬಗಳ 30ರಿಂದ 35 ಜನ ಸದಸ್ಯರು ವಾಸವಾಗಿದ್ದಾರೆ.

ಜಿಲ್ಲೆಯ ಗೋಕಾಕ, ರಾಮದುರ್ಗ ಹಾಗೂ ರಾಯಬಾಗ ತಾಲ್ಲೂಕುಗಳಲ್ಲಿ ಸದ್ಯಕ್ಕೆ ಏಳು ಪರಿಹಾರ ಕೇಂದ್ರಗಳಿವೆ. ಪ್ರವಾಹ ಬಂದಿದ್ದ ಆರಂಭದಲ್ಲಿ ಬಹಳಷ್ಟು ಅಧಿಕಾರಿಗಳು, ದಾನಿಗಳು ಬಂದು ಇವರಿಗೆ ಸಹಾಯ ನೀಡಿದ್ದರು. ಆದರೆ, ಈಗ ಇವರನ್ನು ವಿಚಾರಿಸುವವರೇ ಇಲ್ಲದಂತಾಗಿದೆ. ಮೊದಲು ಜಿಲ್ಲಾಡಳಿತದ ವತಿಯಿಂದಲೇ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿತ್ತು. ಕಳೆದ 15 ದಿನಗಳ ಮುಂಚೆ ಅಕ್ಕಿ, ಬೇಳೆ, ಸಕ್ಕರೆ, ಚಹಾಪುಡಿ, ಸೀಮೆ ಎಣ್ಣೆ ನೀಡಿದ್ದರು. ಈಗ ಅದು ಮುಗಿದುಹೋಗಿದೆ. ಸಂತ್ರಸ್ತರೇ ಹಣ ನೀಡಿ ಅಂಗಡಿಗಳಿಂದ ಖರೀದಿಸಬೇಕಾಗಿದೆ.

‘ಬೆಳಿಗ್ಗೆ ಉಪ್ಪಿಟ್ಟು...ಮಧ್ಯಾಹ್ನ ಖಡಕ್ ರೊಟ್ಟಿ’

‘ಬೆಳಿಗ್ಗೆ ಉಪ್ಪಿಟ್ಟು ಅಥವಾ ಚಿತ್ರಾನ್ನ, ಮಧ್ಯಾಹ್ನ ಖಡಕ್ ರೊಟ್ಟಿ, ಅನ್ನ–ಸಾಂಬರ್ ಹಾಗೂ ರಾತ್ರಿ ಅನ್ನ–ಸಾಂಬರ್’ ಇವೆಲ್ಲ ಸಿಗುತ್ತಿರುವುದು ಗದಗ ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ. ದಾನಿಗಳು ಯಾರಾದರೂ ವಿಶೇಷ ಆಹಾರ ತಂದರೆ ಮಾತ್ರ ವಿತರಿಸಲಾಗುತ್ತದೆ. ಸಂತ್ರಸ್ತರಿಂದ ಅಷ್ಟಾಗಿ ಯಾವುದೇ ದೂರುಗಳು ಕೇಳಿಬಂದಿಲ್ಲ. ಅಲ್ಲಿ 282 ಕುಟುಂಬಗಳ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ನಮ್ ಬದುಕು ಸತ್ತವು!..

‘ಮನಿಗೆ ಆಧಾರ ಆಗಿದ್ದ ಎಮ್ಮೆ ನೀರು ಪಾಲಾಗೈತ್ರಿ, ಇಲ್ಲಿಗೆ ಬಂದ ಮ್ಯಾಲ ನಮ್ 10 ಬದುಕು (ಮೇಕೆ) ಸತ್ತವು. ₹10 ಸಾವಿರವೂ (ತುರ್ತು ಪರಿಹಾರ ಮೊತ್ತ) ನಮ್ ಅಕೌಂಟಿಗೆ ಬಂದಿಲ್ಲ. ಕೇಳಿದ್ರ ಬಜೆಟ್ ಬಂದಿಲ್ಲ ಅಂತಾರ್ರಿ‘ ಎಂದು ಹುನಗುಂದ ತಾಲ್ಲೂಕು ಧನ್ನೂರಿನ ಪರಿಹಾರ ಕೇಂದ್ರದಲ್ಲಿದ್ದ ವಿಜಯಲಕ್ಷ್ಮೀ ಕಟ್ಟೀಮನಿ ಹೇಳಿದರು.

‘ರೇಷನ್‌ ಕಾರ್ಡ್, ಆಧಾರ್, ಬ್ಯಾಂಕ್‌ ಪಾಸ್‌ಬುಕ್ ಎಲ್ಲಾ ನೀರಾಗ ಹೋಗ್ಯಾವ, ಪರಿಹಾರ ಕೊಡೋಕ ಅವೆಲ್ಲಾ ಬೇಕು ಅಂತಾರೆ ಎಲ್ಲಿಂದ ತಂದುಕೊಡೋದು‘ ಎಂದು ಪ್ರಶಾಂತಗೌಡರ ಪ್ರಶ್ನಿಸಿದರು.

ಮನೆ ಬಾಡಿಗೆ ₹6 ಸಾವಿರ!

ಕೂಡಲಸಂಗಮದ ಕಲ್ಯಾಣ ಮಂಟಪ ಹಾಗೂ ದಾಸೋಹ ಭವನದ ಪಕ್ಕದ ಕಟ್ಟಡದಲ್ಲಿ 100ಕ್ಕೂ ಹೆಚ್ಚು ದಲಿತ ಕುಟುಂಬ ಆಶ್ರಯ ಪಡೆದಿವೆ. ಅಲ್ಲಿನ ಕೆಲವು ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ‘ಊರಿನಲ್ಲೀಗ ₹1,500ಕ್ಕೆ ಸಿಗುತ್ತಿದ್ದ ಮನೆಗಳಿಗೆ ಈಗ ₹6 ಸಾವಿರ ಬಾಡಿಗೆ ಹೇಳಲಾಗುತ್ತಿದೆ. ಅದು ಸಿಗುತ್ತಿಲ್ಲ’ ಎಂದು ಸಂತ್ರಸ್ತರೊಬ್ಬರು ಅಳಲು ತೋಡಿಕೊಂಡರು.

ಪರಿಹಾರದಲ್ಲೂ ಪಕ್ಷ ರಾಜಕಾರಣ!

‘ಕೃಷ್ಣೆಯ ಪ್ರವಾಹದಿಂದ ನಮ್ಮೂರಲ್ಲಿ 30ಕ್ಕೂ ಹೆಚ್ಚು ಮನೆ ಬಾಧಿತವಾಗಿವೆ. ತುರ್ತು ಪರಿಹಾರ ₹10 ಸಾವಿರ ಯಾರಿಗೂ ಕೊಟ್ಟಿಲ್ಲ. ಚುನಾವಣೆಯಲ್ಲಿ ನಮ್ಮೂರಿನಿಂದ ಕೇವಲ ಏಳು ಓಟು ಬಿದ್ದಿವೆ ಎಂದು ಜನಪ್ರತಿನಿಧಿಯೊಬ್ಬರು ನಮ್ಮನ್ನು ಪರಿಗಣಿಸದಿರಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಹಾಗಾಗಿ ನಾವೂ ಸುಮ್ಮನಾಗಿದ್ದೇವೆ’ ಎಂದು ಹುನಗುಂದ ತಾಲ್ಲೂಕಿನ ಕಮದತ್ತ ಗ್ರಾಮದ ಸಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಾಗ ಇಲ್ಲದವ್ರಿಗೆ ಎಲ್ಲಾ ಸೌಕರ್ಯ ಸಿಕ್ಕಾವ, ಬಿಜೆಪಿ–ಕಾಂಗ್ರೆಸ್‌ನೋರಿಗೆ ಅವರವರ ಮಂದಿ ಬಂದು ಪಕ್ಷದ ಹೆಸರು ಎತ್ತಿ ಹೇಳಿ ಸವಲತ್ತು ಕೊಡಿಸ್ಯಾರ, ಯಾವ ಕಡೆಯೂ ಇಲ್ಲದವರು ಯಾರಿಗೂ ಬೇಡವಾಗಿದ್ದೇವೆ’ ಎಂದು ಧನ್ನೂರಿನ ಸುಮಿತ್ರಾ ಹಡಪದ ಬೇಸರ ವ್ಯಕ್ತಪಡಿಸಿದರು. ಇವೇ ಗೊಂದಲಗಳ ಕಾರಣಕ್ಕೆ ಹುನಗುಂದ ತಹಶೀಲ್ದಾರ್ ಅವರನ್ನು ಜಿಲ್ಲಾಡಳಿತ ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

ವಾಪಸ್ ಕಳಿಸಿದರು

‘ಸಂತ್ರಸ್ತರಿಗೆ ಏನೇ ಸವಲತ್ತು ಇದ್ದರೂ ಅದನ್ನು ಊರಿನ ಎಲ್ಲರಿಗೂ ಕೊಡಬೇಕು ಎಂದು ಗ್ರಾಮದ ಕೆಲವು ಬಲಾಢ್ಯರು ಸಮೀಕ್ಷೆಗೆ ಬಂದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು. ಈಗ ನಾವು ಬೀದಿಗೆ ಬಂದಿದ್ದೇವೆ. ನಮ್ಮನ್ನು ಯಾರೂ ಕೇಳಾವಲ್ಲರು‘ ಎಂದು ಹುನಗುಂದ ತಾಲ್ಲೂಕು ಕಟಗೂರಿನ ಶಾಂಭವಿ ನೋವು ತೋಡಿಕೊಂಡರು.

ಅಲ್ಲಿಯೇ ಬಸ್‌ ನಿಲ್ದಾಣದಲ್ಲಿ ಪರಸಪ್ಪ ಕುಂಬಾರ ಕುಟುಂಬದ 12 ಮಂದಿ ವಾಸವಿದ್ದಾರೆ. ಜಾಗ ಸಾಲದೇ ಗಂಡಸರೆಲ್ಲಾ ರಸ್ತೆಯಲ್ಲಿ ಮಲಗುತ್ತಾರೆ. ಕರೆಂಟ್, ಕುಡಿಯಲು ನೀರಿಲ್ಲದೇ ಅವರ ಪಾಡು ಹೇಳತೀರದಾಗಿದೆ.

**

ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಗೋಕಾಕದ ಪರಿಹಾರ ಕೇಂದ್ರದಲ್ಲಿ ಅಡುಗೆ ಮಾಡಿ ಬಡಿಸಲಾಗುತ್ತಿದೆ. ಹಡಗಿನಾಳದಲ್ಲಿ ಪಡಿತರ ಒದಗಿಸಲಾಗುತ್ತಿದೆ.
- ಪ್ರಕಾಶ ಹೊಳೆಪ್ಪಗೋಳ,ತಹಶೀಲ್ದಾರ್‌, ಗೋಕಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT