ಭಾನುವಾರ, ಆಗಸ್ಟ್ 18, 2019
26 °C
ದಿಡುಪೆಯಿಂದ ಕುಕ್ಕಾವುವರೆಗಿನ ಮಾರ್ಗದಲ್ಲಿ ಭಾರಿ ಅನಾಹುತ

ಸೇತುವೆಯನ್ನೇ ತುಂಡರಿಸಿದ ಮರದ ದಿಮ್ಮಿಗಳು

Published:
Updated:
Prajavani

ಕುಕ್ಕಾವು (ಬೆಳ್ತಂಗಡಿ, ದಕ್ಷಿಣ ಕನ್ನಡ): ಚಾರ್ಮಾಡಿ ಘಾಟಿಯ ತಪ್ಪಲಿನ ದಿಡುಪೆಯಲ್ಲಿ ಉಂಟಾದ ಭಾರಿ ಭೂಕುಸಿತದ ಹೊಡೆತಕ್ಕೆ ಹತ್ತಾರು ಕಿಲೋ ಮೀಟರ್‌ಗಳವರೆಗಿನ ಗ್ರಾಮಗಳು ನಲುಗಿ ಹೋಗಿವೆ. ಕುಕ್ಕಾವು ಬಳಿ ಅರ್ಧ ಧ್ವಂಸಗೊಂಡಿರುವ ಸೇತುವೆಯ ಮೇಲು ಸಿಲುಕಿಕೊಂಡಿರುವ ಬೃಹತ್‌ ಗಾತ್ರದ ಮರಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿ ಉಳಿದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಆಗಿರುವ ಹಾನಿ ಕುರಿತು ಪರಿಶೀಲಿಸಲು ಸೋಮವಾರ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುಕ್ಕಾಕು ಸೇತುವೆವರೆಗೂ ಹೋಗಿ ಪರಿಸ್ಥಿತಿ ವೀಕ್ಷಿಸಿದರು. ಭೂಕುಸಿತದಿಂದ ಉಂಟಾದ ಪ್ರವಾಹದಲ್ಲಿ ತೊರೆಯೊಂದು ನದಿಯ ಸ್ವರೂಪ ಪಡೆದು ದಿಕ್ಕೆಟ್ಟು ಹರಿದಿದ್ದರಿಂದ ಆಗಿರುವ ಅನಾಹುತ ಕಂಡು ಅಕ್ಷರಶಃ ಹೌಹಾರಿದರು.

ಕುಕ್ಕಾವು ಕಡೆಯಿಂದ ದಿಡುಪೆ ಸಂಪರ್ಕಿಸುವ ರಸ್ತೆಯಲ್ಲಿದ್ದ ಸೇತುವೆಯ ಸ್ವಲ್ಪ ಭಾಗ ಪ್ರವಾಹದಲ್ಲಿ ಕೊಚ್ಚಿಬಂದ ಮರದ ದಿಮ್ಮಿಗಳ ಹೊಡೆತಕ್ಕೆ ತುಂಡಾಗಿ, ಕೊಚ್ಚಿಕೊಂಡು ಹೋಗಿದೆ. ರಭಸದಿಂದ ಹರಿಯುವ ನೀರಿನ ನಡುವೆಯೇ ಹಗ್ಗ ಕಟ್ಟಿಕೊಂಡು ನಿಂತಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) ಸಿಬ್ಬಂದಿ, ಅತ್ತಿಂದಿತ್ತ ಓಡಾಡುತ್ತಿದ್ದ ಜನರಿಗೆ ನೆರವಾಗುತ್ತಿದ್ದರು.

ಭೂಕುಸಿತ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಲವಂತಿಗೆ, ಕಡಿರುದ್ಯಾವರ, ಮತ್ತು ಮಿತ್ತಬಾಗಿಲಿನ 45 ಕುಟುಂಬಗಳನ್ನು ಕುಕ್ಕಾವಿ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮುಖ್ಯಮಂತ್ರಿ ಅಲ್ಲಿಗೂ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

ಎಲ್ಲವೂ ಧ್ವಂಸ: ‘ಭೂಕುಸಿತದಿಂದ ಉಂಟಾದ ಪ್ರವಾಹದ ಪರಿಣಾಮ ಸಣ್ಣ ತೊರೆ ನದಿಯಂತೆ ಹರಿದು ಬಂದು ಹಳ್ಳಿಗಳಿಗೆ ಅಪ್ಪಳಿಸಿತು. ನೋಡ ನೋಡುತ್ತಿದ್ದಂತೆ ಮನೆಗಳು ಧ್ವಂಸವಾದವು. ಪ್ರವಾಹದಲ್ಲಿ ತೇಲಿಬಂದ ಮರದ ದಿಮ್ಮಿಗಳು ಕೆಲವು ಮನೆಗಳಿಗೆ ಅಡ್ಡಗೋಡೆಯಂತೆ ನಿಂತವು. ಇದರಿಂದಾಗಿ ಕೆಲವು ಮನೆಗಳು ಉಳಿದಿವೆ’ ಎಂದು ಕುಕ್ಕಾವು ಶಾಲೆಯ ಪುನರ್ವಸತಿ ಕೇಂದ್ರದಲ್ಲಿದ್ದ ಸ್ವಯಂಸೇವಕ ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಮಾರು 1,000 ಎಕರೆ ಕೃಷಿ ಜಮೀನು ಹಾಳಾಗಿದೆ. ಗದ್ದೆ, ತೋಟಗಳಲ್ಲಿ ಎರಡರಿಂದ ಮೂರು ಅಡಿಗಳಷ್ಟು ಹೂಳು ತುಂಬಿಕೊಂಡಿದೆ ಎಂದರು.

ಏನು ಉಳಿದಿದೆಯೋ ಗೊತ್ತಿಲ್ಲ: ‘ಅಂತಹ ಪ್ರವಾಹವನ್ನು ಜೀವನದಲ್ಲಿ ಯಾವತ್ತೂ ಕಂಡಿಲ್ಲ. ಪ್ರವಾಹದ ನೀರಿನೊಂದಿಗೆ ಮರಗಳು, ಬಂಡೆಗಳು ಮತ್ತು ಹೂಳು ಒಟ್ಟಿಗೆ ಬಂದು ಅಪ್ಪಳಿಸಿದ್ದರಿಂದ ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ನಮ್ಮ ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯಲ್ಲಿ ಏನು ಉಳಿದಿದೆ ಎಂಬುದು ಗೊತ್ತಿಲ್ಲ. ಮನೆ ವಾಸಕ್ಕೆ ಯೋಗ್ಯವಾಗಿ ಉಳಿದಿದೆಯೋ, ಇಲ್ಲವೋ ತಿಳಿದಿಲ್ಲ’ ಎಂದು ಪುನರ್ವಸತಿ ಕೇಂದ್ರದಲ್ಲಿದ್ದ ಸಂತ್ರಸ್ತರೊಬ್ಬರು ಹೇಳಿದರು.

ಕುಕ್ಕಾವು ಸೇತುವೆ ಮತ್ತು ರಸ್ತೆಗೆ ಆಗಿರುವ ಹಾನಿ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಬಿ.ಟಿ. ಕಾಂತರಾಜು, ‘ಪ್ರವಾಹದಿಂದ ಕುಕ್ಕಾವು ಸೇತುವೆ 35 ಮೀಟರ್‌ ಉದ್ದದವರೆಗೆ ಹಾನಿಯಾಗಿದೆ. ಕೈಪಿಡಿಗಳೂ ತುಂಡಾಗಿ ಹೋಗಿವೆ. ಸೇತುವೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಯನ್ನು ಹತ್ತು ದಿನಗಳೊಳಗೆ ಮುಗಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ. ಶಾಶ್ವತ ದುರಸ್ತಿ ಕಾಮಗಾರಿ ಮಳೆಗಾಲ ಮುಗಿದ ನಂತರ ಆರಂಭವಾಗಲಿದೆ’ ಎಂದರು.

Post Comments (+)