7
ಮುಂದುವರಿದ ಮಳೆ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಾಳೆ ತನಕ ಶಾಲಾ–ಕಾಲೇಜುಗಳಿಗೆ ರಜೆ

ಉಕ್ಕಿದ ನದಿಗಳು: ಕೆಲವೆಡೆ ಸೇತುವೆ ಮುಳುಗಡೆ

Published:
Updated:

ಬೆಂಗಳೂರು: ಮಲೆನಾಡು ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಕೊಡಗು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ತಗ್ಗಿದ್ದರೂ, ನದಿಗಳು ಉಕ್ಕಿ ಹರಿಯುತ್ತಿವೆ. ಕೆಲವೊಂದು ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿ, ಸಂಪರ್ಕ ಕಡಿತಗೊಂಡಿದೆ.

ಶಾಲೆಗಳಿಗೆ 14ರ ವರೆಗೆ ರಜೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಶಾಲಾ–ಕಾಲೇಜುಗಳಿಗೆ ಜುಲೈ 14ರವರೆಗೆ ರಜೆ ವಿಸ್ತರಿಸಲಾಗಿದೆ.

ತುಂಗಾ ಜಲಾಶಯಕ್ಕೆ 66,274 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 20 ಕ್ರೆಸ್ಟ್‌ಗೇಟ್‌ಗಳ ಮೂಲಕ 65,115 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಪ್ರವಾಹ ಭೀತಿ

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದ್ದು ಮಧ್ಯಾಹ್ನದ ಬಳಿಕ ಬಿಡುವು ಕೊಟ್ಟು ಮಳೆಯಾಗುತ್ತಿದೆ. ನಾಪೋಕ್ಲು, ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಕಾವೇರಿ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ. ನಾಪೋಕ್ಲು, ಮೂರ್ನಾಡು ಮಾರ್ಗದ ಬೋಳಿಬಾಣೆ ಬಳಿ ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಯಡವನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಹಾರಂಗಿ ನದಿಗೆ ನಿರ್ಮಿಸಿದ್ದ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕುಶಾಲನಗರದಿಂದ ಹಾರಂಗಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುವ ಮಾರ್ಗವೂ ಬಂದ್‌ ಆಗಿದೆ.

ಸೇತುವೆ ಮುಳುಗಡೆ

ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಟ್ಟಿರುವುದರಿಂದ ಎಚ್‌.ಡಿ.ಕೋಟೆ ತಾಲ್ಲೂಕಿನ ಕೆ.ಬೆಳ್ತೂರು ಸೇತುವೆ ಮುಳುಗಡೆಯಾಗಿದೆ.

‌ಪರಶುರಾಮ ದೇವಸ್ಥಾನ ಮುಳುಗಡೆ: ನಂಜನಗೂಡಿನಲ್ಲಿ ಪರಶುರಾಮ ದೇವಸ್ಥಾನ ಕಪಿಲಾ ನದಿಯಲ್ಲಿ ಮುಳುಗಡೆಯಾಗಿದೆ. ಹದಿನಾರುಕಾಲು ಮಂಟಪ ಸಂಪೂರ್ಣ ಮುಳುಗುವ ಹಂತ ತಲುಪಿದೆ.

ನೀರಲ್ಲಿ ಕೊಚ್ಚಿ ಹೋದವರಿಗಾಗಿ ಶೋಧ: ಮಂಗಳೂರಿನ ವಾಮಂಜೂರಿನಲ್ಲಿ ಫಲ್ಗುಣಿ ನದಿಯಲ್ಲಿ ಕೊಚ್ಚಿಹೋದ ಯುವಕ ಸುಶಾಂತ್‌ ಹಾಗೂ ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಗುಡ್ಡೇತೋಟ ಕಾರೆಮನೆಯ ಕೃಷಿ ಕಾರ್ಮಿಕ ಅಶೋಕ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯಲ್ಲಿ ಭಾರಿ ನೀರು ಬಂದಿದೆ. ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯಲ್ಲೂ ಸೇತುವೆ ಮುಳುಗಿದೆ. ಕೊಪ್ಪ, ಎನ್‌.ಆರ್.ಪುರ, ಮೂಡಿಗೆರೆ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲಿನ ಶಾಲಾ, ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಗಿತ್ತು.

ಮತ್ತೆರಡು ಸೇತುವೆ ಮುಳುಗಡೆ: ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಗುರುವಾರವೂ ಮುಂದುವರಿದಿದೆ. ಅಲ್ಲಿಂದ ರಾಜ್ಯಕ್ಕೆ ಹರಿದು ಬರುವ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿವು ಏರಿಕೆಯಾಗಿದೆ. 70,000 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಕ್ಕೋಳ– ಸಿದ್ನಾಳ ಹಾಗೂ ಜತ್ರಾಟ ಭೀವಶಿ ಗ್ರಾಮಗಳ ಮಧ್ಯೆದ ಸೇತುವೆಗಳು ಗುರುವಾರ ಬೆಳಿಗ್ಗೆ ಮುಳುಗಡೆಯಾಗಿವೆ.

ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ, ಕಾರದಗಾ- ಭೋಜ ಮತ್ತು ಕುನ್ನೂರ ಭೋಜವಾಡಿ ಗ್ರಾಮಗಳ ಮಧ್ಯೆದ ಸೇತುವೆಗಳು ಮುಳುಗಡೆಯ ಸ್ಥಿತಿಯಲ್ಲಿಯೇ ಇವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 52,100 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಗೆ 17,952 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಬಿಟ್ಟಿದ್ದರಿಂದ ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಗ್ರಾಮದ ಕೆರೆ ಬುಧವಾರ ರಾತ್ರಿ ಕೋಡಿ ಬಿದ್ದಿದೆ.

ತಗ್ಗು ಪ್ರದೇಶದಲ್ಲಿದ್ದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ನೀರು ನುಗ್ಗಿದೆ.

ಆಸ್ಪತ್ರೆ ಆವರಣ ಜಲಾವೃತಗೊಂಡಿದ್ದರಿಂದ ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದ ರೋಗಿಗಳು ತೊಂದರೆ ಅನುಭವಿಸಿದರು. ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಎರಡು ಅಡಿ ಆಳದಲ್ಲಿ ನಿಂತಿದ್ದ ನೀರನ್ನು ದಾಟಿಕೊಂಡು ಆಸ್ಪತ್ರೆ ಪ್ರವೇಶಿಸಿದರು.

ನದಿಯಲ್ಲಿ ಕೊಚ್ಚಿ ಹೋದ ಯುವಕ ಗೋಡೆ ಕುಸಿದು ಬಾಲಕಿ ಸಾವು

ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಬೆಳ್ತೂರು ಸೇತುವೆ ಬಳಿ ಕಪಿಲಾ ನದಿಯಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ. ಬೀದರ್‌ ತಾಲ್ಲೂಕಿನ ಕಪಲಾಪುರದಲ್ಲಿ ಮನೆಯ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದಾಳೆ.

ತುಂಬಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಧುಮುಕಿದ ಚಕ್ಕೂರು ಗ್ರಾಮದ ಉಮೇಶ್ (22) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಗುರುವಾರ ಬೆಳಿಗ್ಗೆ ಕೆಲವು ಯುವಕರು ನೀರಿನಲ್ಲಿ ಈಜುತ್ತಿದ್ದಾಗ ಉಮೇಶ್ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಈ ಕುರಿತ ವಿಡಿಯೊ ಸಹ ವೈರಲ್ ಆಗಿದೆ. ಘಟನೆ ಬಳಿಕ ಇಲ್ಲಿ ಈಜುವುದನ್ನು ಪೊಲೀಸರು ನಿಷೇಧಿಸಿದ್ದಾರೆ.

ಕಪಲಾಪುರದಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಭಾಗ್ಯಶ್ರೀ ದತ್ತಾತ್ರೇಯ (8) ಮೃತಪಟ್ಟಿದ್ದಾಳೆ.

ಆಗುಂಬೆಯಲ್ಲಿ 16 ಸೆ.ಮೀ. ಮಳೆ

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಿದೆ. ಆಗುಂಬೆ 16 ಸೆಂ.ಮೀ., ಶೃಂಗೇರಿ 15, ಕಮ್ಮರಡಿ 14, ಕ್ಯಾಸಲ್‌ ರಾಕ್‌ 12, ಸಿದ್ಧಾಪುರ, ಭಾಗಮಂಡಲ, ಕೊಪ್ಪ 11, ಕೊಲ್ಲೂರು, ಲಿಂಗನಮಕ್ಕಿ 10, ಬೆಳ್ತಂಗಡಿ, ಗೇರುಸೊಪ್ಪ, ಮಡಿಕೇರಿ, ಮೂಡಿಗೆರೆ 9 ಸೆಂ.ಮೀ ಮಳೆ ಬಿದ್ದಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಾವೇರಿ ಕಣಿವೆ ಸಮೃದ್ಧ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮೃದ್ಧ ಮಳೆಯಾಗುತ್ತಿದ್ದು, ಈ ಭಾಗದ ನಾಲ್ಕೂ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಒಳ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದ್ದು, 124.80 ಅಡಿ ಸಾಮರ್ಥ್ಯದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 119.10 ಅಡಿ ತಲುಪಿದೆ. 41,583 ಕ್ಯುಸೆಕ್ ಹರಿದು ಬರುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ ಅಣೆಕಟ್ಟೆಯಿಂದ ನೀರು ಹೊರ ಬಿಡುವ ಸಾಧ್ಯತೆಗಳಿವೆ. ನಾಲ್ಕು ದಿನಗಳಲ್ಲಿ 11 ಅಡಿ ಏರಿಕೆ ಕಂಡಿದೆ. 2,922 ಅಡಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 2,915.12 ಅಡಿ ನೀರು ಸಂಗ್ರಹವಾಗಿದೆ.
ಆಗುಂಬೆಯಲ್ಲಿ 16 ಸೆಂ.ಮೀ ಮಳೆ


ನಂಜನಗೂಡು ಹದಿನಾರುಕಾಲು ಮಂಟಪ ಮುಳುಗಡೆಯಾಗಿದೆ


ನಂಜನಗೂಡು ದಳವಾಯಿ ಸೇತುವೆ ಬಳಿ ತುಂಬಿ ಹರಿಯುತ್ತಿರುವ ಕಪಿಲಾ ನದಿ

 

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !