ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಬದುಕು ಮುದುಡಿಸಿದ ಹೂವಿನ ಕೃಷಿ

ಕರೊನ ಲಾಕ್‌ಡೌನ್; ಭೂಮಿಯಲ್ಲೇ ಕೊಳೆಯುತ್ತಿರುವ ಪುಷ್ಟ
Last Updated 30 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕರೊನ ಬಿಸಿಗೆ ತಾಲ್ಲೂಕಿನ ಚೆಂಡು ಹೂವಿನ ಕೃಷಿಕರ ಬದುಕು ಬರಡಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.‌ ತಾಲ್ಲೂಕಿನ ಹಲವೆಡೆಗಳಲ್ಲಿ ಚೆಂಡು ಹೂ ಕೃಷಿಯನ್ನು ಮಾಡಿರುವುದನ್ನು ಕಾಣಬಹುದಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿರುತ್ತಿತ್ತು. ಅವುಗಳಿಗೆ ಅಲಂಕಾರಕ್ಕೆ ಚೆಂಡು ಹೂ ಬಳಸುತಿದ್ದರಿಂದ ಒಳ್ಳೆಯ ಬೆಲೆ ಇರುತ್ತಿತ್ತು. ಅಲಂಕಾರದೊಂದಿಗೆ ಹೂವನ್ನು ಬಣ್ಣ ತಯಾರಿಸಲು ಬಳಸುತ್ತಿದ್ದುದ್ದರಿಂದ ತುಸು ಹೆಚ್ಚೇ ಬೇಡಿಕೆ ಇರುತ್ತಿತ್ತು. ಕೊರೊನಾ ತಂದಿಟ್ಟ ಆತಂಕ ಹೂವಿನ ಕೃಷಿಕರ ಬಾಳಲ್ಲಿ ಕಷ್ಟ ತಂದೊಟ್ಟಿದೆ.

ಮಾರ್ಚ್ ತಿಂಗಳ 22ರಿಂದ ದೇಶದಲ್ಲಿ ಕೊರೊನಾ ಲಾಕ್‌ಡೌನ್ ಹೇರಿದ್ದರಿಂದ ಗಿಡದಲ್ಲಿ ಅರಳಿದ ಹೂ ಅಲ್ಲಿಯೇ ಒಣಗುತ್ತಿರುವುದನ್ನು ಕಾಣಬಹುದಾಗಿದೆ.
ಸಮೀಪದ ತಾಲ್ಲೂಕಿನ ಹಾನಗಲ್ಲುಶೆಟ್ಟಳ್ಳಿ, ಯಡೂರು, ಮೂದರವಳ್ಳಿ, ಹೆಬ್ಬಾಲೆ, ತೊರೆನೂರು, ಅಳುವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೂ ಕೃಷಿಯನ್ನು ಮಾಡಲಾಗಿದೆ. ಕೃಷಿ ಕೈಗೊಂಡ ಎಲ್ಲ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ದನ ಎಮ್ಮೆಗಳಿಗೆ ಮೇಯಲು ಬಿಟ್ಟರೆ, ಕೆಲವರು ಭೂಮಿಯಲ್ಲಿ ಹಾಗೆಯೇ ಬಿಟ್ಟಿದ್ದಾರೆ.

ಚೆಂಡು ಹೂವಿನ ಬೀಜ ದುಬಾರಿಯಾಗಿದ್ದು, ಹೆಚ್ಚಿನ ಬೆಲೆ ತೆರಬೇಕಾಗಿದೆ. ಇದರೊಂದಿಗೆ ಕೃಷಿ ಭೂಮಿಯನ್ನು ಹದಗೊಳಿಸುವುದು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ಸೇರಿದಂತೆ ಏಕರೆಗೆ ಸರಿ ಸುಮಾರು ₹40ರಿಂದ ₹50 ಸಾವಿರ ಖರ್ಚಾಗುತ್ತದೆ. ಉತ್ತಮ ಇಳುವರಿ ಬಂದು ಬೆಲೆ ಸಿಕ್ಕಲ್ಲಿ ₹70ರಿಂದ ₹80 ಸಾವಿರ ಲಾಭ ಗಳಿಸಲು ಸಾಧ್ಯ. ವರ್ಷ ವರ್ಷವೂ ಹೂವಿನ ಕೃಷಿಯಿಂದ ಲಾಭ ಗಳಿಸುತ್ತಿದ್ದ ನಮಗೆ, ಈಗ ಹಾಕಿದ್ದ ಬಂಡವಾಳದೊಂದಿಗೆ ಒಂದು ರೂಪಾಯಿ ಲಾಭ ಸಿಗದಂತಾಗಿದೆ ಎಂದು ಕೃಷಿಕರಾದ ಯಡೂರು ಗ್ರಾಮದ ಲೋಕೇಶ್ ಹೇಳಿದರು.

ವರ್ಷದ ಸೀಸನ್ ನೋಡಿ ಕೃಷಿಯನ್ನು ಕೈಗೊಳ್ಳುವುದರಿಂದ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ವರೆಗೆ ಹೂ ಕಟಾವು ಮಾಡಿ ಚೆನ್ನರಾಯಪಟ್ಟಣ, ಬೆಂಗಳೂರು, ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ಕೇಜಿ ಹೂವಿಗೆ ₹16ರಿಂದ ₹20 ಬೆಲೆ ಸಿಗುತ್ತಿತ್ತು. ಆದರೆ, ಹೂ ಮೊದಲ ಕಟಾವು ಮಾಡುವ ಸಂದರ್ಭವೇ ಲಾಕ್ ಡೌನ್ ಹೇರಿದ್ದರಿಂದ ಒಂದು ಭಾರಿಯೂ ಕಟಾವು ಮಾಡಲು ಸಾಧ್ಯವಾಗಲಿಲ್ಲ ಎಂದು ಕೃಷಿಕರಾದ ಹಾನಗಲ್ಲುಶೆಟ್ಟಳ್ಳಿ ಗ್ರಾಮದ ರವಿ ಹೇಳಿದರು.

ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳೂ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆದರೆ, ಕಳೆದ ಮಳೆಯಲ್ಲಿ ಕೃಷಿ ಭೂಮಿ ಕುಸಿದು ಲಕ್ಷಾಂತರ ನಷ್ಟವಾದರೂ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭ ಕೇವಲ ₹2ಸಾವಿರ ಸರ್ಕಾರದಿಂದ ಪರಿಹಾರ ದೊರಕಿದೆ. ಇದರಿಂದಾಗಿ ಸರ್ಕಾರದ ಪರಿಹಾರ ನಿರೀಕ್ಷೆ ಮಾಡುವಂತಿಲ್ಲ ಎಂದು ದೂರಿದರು.

’ಹಾಸನದ ಚನ್ನರಾಯಪಟ್ಟಣಕ್ಕೆ ಹೂ ತೆಗೆದುಕೊಂಡು ಹೋಗಿ ಮಾರುತ್ತಿದ್ದೆವು. ಆದರೆ, ಈ ಭಾರಿ ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ತರುವುದು ಬೇಡ. ಯಾವುದೇ ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಹೂವಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಹೂ ಗಿಡಗಳಲ್ಲಿಯೇ ಒಣಗುತ್ತಿವೆ. ಏನು ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ‘ ಎಂದು ಹತಾಶರಾಗಿ ಯಡೂರಿನ ಪ್ರವೀಣ್ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT