ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ: ಎಸ್‌ಐಟಿಯಿಂದ ತೀವ್ರ ವಿಚಾರಣೆ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮದ್ದೂರಿನ ‘ಹಿಂದೂ ಯುವಸೇನೆ’ ಮುಖಂಡ ಕೆ.ಟಿ.ನವೀನ್‌ ಕುಮಾರ್‌ನನ್ನು ಸಂಪರ್ಕಿಸಲು ಆತನ ನಾಲ್ವರು ಸಹಚರರು ಮೊಬೈಲ್ ಬಳಸುತ್ತಿರಲಿಲ್ಲ. ರಸ್ತೆ ಬದಿಯ ಕಾಯಿನ್‌ ಬೂತ್‌ಗಳಿಂದಲೇ ಕರೆ ಮಾಡುತ್ತಿದ್ದರು. ಹೀಗಾಗಿ, ಅವರನ್ನು ಪತ್ತೆ ಹಚ್ಚಲು ಎಸ್‌ಐಟಿಗೆ ಇನ್ನೂ ಸಾಧ್ಯವಾಗಿಲ್ಲ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ, ನವೀನ್ ಸಹಚರರ ಜತೆ ಸೇರಿ ಸಾಹಿತಿ ಕೆ.ಎಸ್.ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಗೊತ್ತಾಗಿತ್ತು. ಕೂಡಲೇ ಆತನನ್ನು ವಶಕ್ಕೆ ಪಡೆದ ಅಧಿಕಾರಿಗಳು, ಗೌರಿ ಹತ್ಯೆಯಲ್ಲೂ ಈತನ ಪಾತ್ರವಿರಬಹುದು ಎಂಬ ಅನುಮಾನದ ಮೇಲೆ ವಿಚಾರಣೆ ತೀವ್ರಗೊಳಿಸಿದ್ದಾರೆ.

ಸಹಚರರ ಹೆಸರುಗಳನ್ನು ನವೀನ್ ಹೇಳುತ್ತಿಲ್ಲ. ಆತನ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಸಹಚರರು ಮಂಗಳೂರು ಹಾಗೂ ಮೈಸೂರಿನ ಕಾಯಿನ್‌ ಬೂತ್‌ಗಳಿಂದಲೇ ಈತನಿಗೆ ಕರೆ ಮಾಡಿರುವುದು ಗೊತ್ತಾಯಿತು. ಆ ಪ್ರದೇಶಗಳಿಗೆ ತೆರಳಿ ಕಾಯಿನ್ ಬೂತ್ ಮಾಲೀಕ
ರನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಶಂಕಿತರು ಸಿ.ಸಿ ಟಿ.ವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲದ ಬೂತ್‌ಗಳನ್ನೇ ಹುಡುಕಿಕೊಂಡಿದ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾರ್ಯಕರ್ತರ ಹೇಳಿಕೆ: ‘ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ನವೀನ್, ಮದ್ದೂರಿನಲ್ಲಿ ಸಂಘಟನೆ ಕಟ್ಟಿದ್ದ. 200ಕ್ಕೂ ಹೆಚ್ಚು ಕಾರ್ಯಕರ್ತರು ಅದರಲ್ಲಿದ್ದರು. ಅವರೆಲ್ಲನ್ನೂ ಕರೆಸಿ ಹೇಳಿಕೆ ಪಡೆಯುತ್ತಿದ್ದೇವೆ. ನವೀನ್‌ನ ಧ್ಯೇಯಗಳು ಏನಾಗಿದ್ದವು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಗೌರಿ ಮನೆಯ ಸಿ.ಸಿ ಟಿ.ವಿಕ್ಯಾಮೆರಾದಲ್ಲಿ ಹಂತಕನ ಚಹರೆ ಸೆರೆಯಾಗಿದೆ. ಅಲ್ಲದೆ, ಹತ್ಯೆ ನಡೆದ ಹಿಂದಿನ ದಿನ (ಸೆ.4) ವ್ಯಕ್ತಿಯೊಬ್ಬ ಅವರ ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿ ಹೋಗಿದ್ದಾನೆ. ಆ ಇಬ್ಬರಿಗೂ ನವೀನ್‌ನ ಚಹರೆ ಹೋಲಿಕೆ ಆಗುತ್ತಿಲ್ಲ.’

‘ಕಸ್ಟಡಿ ಅವಧಿ ಮುಗಿಯಲು ಇನ್ನೂ ಮೂರು ದಿನ ಬಾಕಿ ಇದೆ. ಗೌರಿ ಹತ್ಯೆ ಸಂಬಂಧ ಏನಾದರೂ ಸುಳಿವು ಸಿಗಬಹುದೆಂದು ನಿತ್ಯ 18 ಗಂಟೆ ವಿಚಾರಣೆ ನಡೆಸುತ್ತಿದ್ದೇವೆ. ಆದರೆ, ನವೀನ್ ಯಾವುದೇ ಮಾಹಿತಿ ನೀಡುತ್ತಿಲ್ಲ. ಕಸ್ಟಡಿ ಅವಧಿ ಮುಗಿದ ಬಳಿಕ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಈತನ ಬಂಧನವನ್ನು ಅಧಿಕೃತಗೊಳಿಸಲಾಗುವುದು’ ಎಂದರು.

ಅವಕಾಶ ತಪ್ಪಿತು
‘ಭಗವಾನ್ ಹತ್ಯೆ ಸಂಬಂಧ ನವೀನ್ ಜತೆ ಸಂಭಾಷಣೆ ನಡೆಸಿದ್ದ ನಾಲ್ವರು ಯುವಕರು ಫೆ.28ರಂದು ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಬರುವ ಸಾಧ್ಯತೆ ಇತ್ತು. ಆದರೆ, ಅದಕ್ಕೂ ಮೊದಲೇ ನವೀನ್‌ನ ಬಂಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಶಂಕಿತರು ಬರಲೇ ಇಲ್ಲ. ನಮ್ಮ ಸಿಬ್ಬಂದಿ ಮಫ್ತಿಯಲ್ಲಿ ಆ ಮದುವೆಗೂ ಹೋಗಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT