ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡದಿ– ಮಕ್ಕಳ ಜತೆ ದಿನಚರಿ

ಸೋಲು ಗೆಲುವಿನ ಲೆಕ್ಕಾಚಾರ: ಮತ ಎಣಿಕೆಗೆ ಕ್ಷಣಗಣನೆ
Last Updated 14 ಮೇ 2018, 10:28 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ, ಸಮಾವೇಶ, ರೋಡ್‌ ಷೋ, ಚುನಾವಣಾ ಪ್ರಚಾರ, ಮನೆ ಮನೆ ಭೇಟಿಯಿಂದ ಬಸವಳಿದಿದ್ದ ಬಹುಪಾಲು ಅಭ್ಯರ್ಥಿಗಳು ಭಾನುವಾರ ಕುಟುಂಬ ಸದಸ್ಯರೊಂದಿಗೆ ರಜೆಯ ಮಜಾ ಅನುಭವಿಸಿದರು. ಮತ್ತೆ ಕೆಲ ಅಭ್ಯರ್ಥಿಗಳು ನಿತ್ಯದ ರಾಜಕೀಯ ಜಂಜಾಟದಿಂದ ದೂರವಾಗಿ ಲಘು ಪ್ರವಾಸಕ್ಕೆ ತೆರಳಿದರು.

ಮಾರ್ಚ್‌ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಸಂಪೂರ್ಣವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿದ್ದ ಅಭ್ಯರ್ಥಿಗಳ ದಿನಚರಿಯೇ ಬದಲಾಗಿತ್ತು. ರಾತ್ರಿ ತಡವಾಗಿ ಮಲಗುವುದು, ಪ್ರಚಾರದ ನಡುವೆ ಸಮಯ ಸಿಕ್ಕರೆ ಮುಖಂಡರ ಮನೆಯಲ್ಲೋ ಅಥವಾ ಸಭೆಯ ಸ್ಥಳದಲ್ಲೋ ಊಟ ತಿಂಡಿ, ಮೊಬೈಲ್‌ನಲ್ಲಿ ಸತತ ಸಂಭಾಷಣೆ, ನಿರಂತರ ಪ್ರಯಾಣವೇ ಅಭ್ಯರ್ಥಿಗಳ ದಿನಚರಿಯಾಗಿತ್ತು.

ಮೂಡಣದಲ್ಲಿ ನೇಸರ ಮೂಡುವುದೇ ತಡ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರ ಪಡೆ ಕಟ್ಟಿಕೊಂಡು ಬೀದಿಗಿಳಿಯುತ್ತಿದ್ದ ಅಭ್ಯರ್ಥಿಗಳು ಪ್ರಚಾರ ಮುಗಿಸಿ ಮತ್ತೆ ಮನೆ ಸೇರುವುದು ರಾತ್ರಿಯಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಸರಿ ರಾತ್ರಿವರೆಗೆ ಸಭೆ ಮೇಲೆ ಸಭೆ ನಡೆಯುತ್ತಿದ್ದವು. ಅಭ್ಯರ್ಥಿಗಳಿಗೆ ಕುಂತರೂ ನಿಂತರೂ ರಾಜಕೀಯದ್ದೇ ಧ್ಯಾನವಾಗಿತ್ತು.

ರಾಜಕೀಯ ಜಂಜಾಟದ ನಡುವೆ ಪತ್ನಿ, ಮಕ್ಕಳು, ಸಂಬಂಧಿಕರ ಜತೆ ಸರಿಯಾಗಿ ಮಾತನಾಡಿ ವಾರಗಳೇ ಕಳೆದಿ
ದ್ದವು. ಪುಸ್ತಕ ಹಾಗೂ ದಿನಪತ್ರಿಕೆ ಓದುವ ಹವ್ಯಾಸ, ಸಂಗೀತ ಕೇಳುವ ಚಟ, ಹೊಲ ಗದ್ದೆ ಸುತ್ತುವ ಗೀಳು ಎಲ್ಲವೂ ದೂರವಾಗಿದ್ದವು. ಗೃಹಸ್ಥಾಶ್ರಮ ಪ್ರವೇಶಿಸಿದ್ದರೂ ಚುನಾವಣಾ ಬಿಸಿಯಿಂದಾಗಿ ತಾತ್ಕಾಲಿಕವಾಗಿ ಬ್ರಹ್ಮಚಾರಿಗಳಾಗಿದ್ದರು.

ಮನದಲ್ಲೇ ಲೆಕ್ಕಾಚಾರ: ರಾಜಕೀಯ ಚಟುವಟಿಕೆಗಳಿಂದ ಆಯಾಸಗೊಂಡಿದ್ದ ಜೆಡಿಎಸ್‌ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಬೆಳಿಗ್ಗೆ ತಡವಾಗಿ ನಿದ್ದೆಯಿಂದ ಎದ್ದರು. ನಗರದ ಮಹಾಲಕ್ಷ್ಮಿಲೇಔಟ್ ಬಡಾವಣೆಯಲ್ಲಿನ ಅವರ ಮನೆಯ ಮುಂದೆ ಮುಂಜಾನೆಯೇ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿದ್ದರು. ಸಮಯ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಕೆಲ ಸಮಯ ದಿನಪತ್ರಿಕೆಗಳನ್ನು ಓದಿದ ಶ್ರೀನಿವಾಸಗೌಡರು ಕುಟುಂಬ ಸದಸ್ಯರ ಜತೆ 11 ಗಂಟೆ ಸುಮಾರಿಗೆ ಬೆಳಗಿನ ಉಪಾಹಾರ ಸೇವಿಸಿ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪರಿ ನಡೆಸಿದರು. ಬೂತ್‌ವಾರು ಮತದಾನದ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಅವರು ಮನದಲ್ಲೇ ಸೋಲು ಗೆಲುವಿನ ಲೆಕ್ಕಾಚಾರ ಹಾಕಿದರು.

ಮಧ್ಯಾಹ್ನ ಊಟ ಮಾಡಿದ ನಂತರ ಕೆಲ ಹೊತ್ತು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ವಿಶ್ರಾಂತಿ ಪಡೆದರು. ಸಂಜೆ 4 ಗಂಟೆಗೆ ತಾಲ್ಲೂಕಿನ ಕುಡುವನಹಳ್ಳಿಯಲ್ಲಿನ ತಮ್ಮ ನೆಚ್ಚಿನ ತೋಟಕ್ಕೆ ಪ್ರಯಾಣ ಬೆಳೆಸಿದರು. ಎರಡು ತಾಸಿಗೂ ಹೆಚ್ಚು ಕಾಲ ತೋಟದಲ್ಲಿ ವಿಹರಿಸಿ ರಾತ್ರಿ ಮನೆಗೆ ಹಿಂದಿರುಗಿದರು.

ಗೂಡಿಗೆ ಪ್ರಯಾಣ: ಮತದಾನ ಮುಗಿದದ್ದೇ ತಡ ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಆರ್‌.ವರ್ತೂರು ಪ್ರಕಾಶ್‌ ಶನಿವಾರ (ಮೇ 12) ರಾತ್ರಿಯೇ ಬೆಂಗಳೂರಿನ ಸಂಜಯನಗರದಲ್ಲಿನ ತಮ್ಮ ಗೂಡಿಗೆ ಪ್ರಯಾಣ ಬೆಳೆಸಿದರು. ಮುದ್ದಿನ ಮಕ್ಕಳ ಜತೆ ದಿನ ಕಳೆದ ಅವರು ರಾಜ್ಯ ರಾಜಧಾನಿಯಲ್ಲೇ ಕುಳಿತು ಕ್ಷೇತ್ರದಲ್ಲಿನ ಆಪ್ತರು ಹಾಗೂ ಪಕ್ಷದ ಹಿರಿಯ ಮುಖಂಡರ ಜತೆ ಸೋಲು– ಗೆಲುವಿನ ಬಗ್ಗೆ ಮೊಬೈಲ್‌ ಕರೆಯಲ್ಲೇ ಚರ್ಚೆ ನಡೆಸಿದರು.

ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಗಿಜಿಗುಡುತ್ತಿದ್ದ ನಗರದ ಸಿ.ಬೈರೇಗೌಡ ನಗರದಲ್ಲಿನ ಶಾಸಕರ ಮನೆಯು ಭಾನುವಾರ ಜನರಿಲ್ಲದೆ ಭಣಗುಡುತ್ತಿತ್ತು. ಶಾಸಕರ ರಾಜಕೀಯ ತಂತ್ರಗಾರಿಕೆಯ ಕೇಂದ್ರ ಬಿಂದುವಾಗಿರುವ ತಾಲ್ಲೂಕಿನ ಬೆಗ್ಲಿ ಗ್ರಾಮದ ಬಳಿಯ ತೋಟದ ಮನೆಯಲ್ಲೂ ಕಾರ್ಯಕರ್ತರು, ಬೆಂಬಲಿಗರು ಕಂಡುಬರಲಿಲ್ಲ.

ಬೆಂಗಳೂರಿನತ್ತ ಮುಖ: ಇನ್ನು ಕ್ಷೇತ್ರಕ್ಕೆ ವಲಸೆ ಬಂದಿರುವ ಕಾಂಗ್ರೆಸ್ ಅಭ್ಯರ್ಥಿ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕುವೆಂಪುನಗರದಲ್ಲಿ ತಾತ್ಕಾಲಿಕವಾಗಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಅವರು ಆ ಮನೆಯಿಂದಲೇ ಚುನಾವಣೆಗೆ ತಂತ್ರಗಾರಿಕೆ ರೂಪಿಸುತ್ತಿದ್ದರು. ಕುಟುಂಬ ಸದಸ್ಯರೆಲ್ಲಾ ಬೆಂಗಳೂರಿನಲ್ಲಿ ನೆಲೆಸಿದ್ದು, ಮತದಾನ ಮುಗಿದ ನಂತರ ಜಮೀರ್‌ ಪಾಷಾ ರಾತ್ರಿಯೇ ಬೆಂಗಳೂರಿನತ್ತ ಮುಖ ಮಾಡಿದರು.

ಸ್ಥಳೀಯರಾದ ಬಿಜೆಪಿ ಅಭ್ಯರ್ಥಿ ಓಂಶಕ್ತಿ ಚಲಪತಿ ಪಕ್ಷದ ಕಾರ್ಯಕರ್ತರ ಜತೆ ಹರಟುತ್ತಾ ದಿನ ಕಳೆದರು. ಸ್ನೇಹಿತರ ಜತೆ ಹೋಟೆಲ್‌ನಲ್ಲಿ ತಿಂಡಿ ಸವಿದು ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು.

**
ಚುನಾವಣೆ ಒತ್ತಡದಿಂದಾಗಿ ಹುಟ್ಟೂರಿನ ಜಮೀನಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಭಾನು<br/>ವಾರ ರಾಜಕೀಯ ಜಂಜಾಟವನ್ನೆಲ್ಲ ಬದಿಗಿಟ್ಟು ಜಮೀನಿಗೆ ಹೋಗಿ ಸಂಜೆವರೆಗೆ ವಾಯುವಿಹಾರ ಮಾಡಿದೆ
– ಕೆ.ಶ್ರೀನಿವಾಸಗೌಡ, ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT